ಮೈಸೂರು: ಭಾರತೀಯ ನಾರಿಯರ ಸಿಂಧೂರ ಅಳಿಸಿದವರಿಗೆ ‘ಭಾರತೀಯ ಸೇನೆ’ ‘ಆಪರೇಷನ್ ಸಿಂಧೂರ’ ಮೂಲಕ ತಕ್ಕ ಉತ್ತರ ನೀಡಿದೆ ಎಂದು ಶ್ರೀ ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಹೇಳಿದರು.
ನಗರದ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ವೃತ್ತದಲ್ಲಿ ಶುಕ್ರವಾರ ಆಯೋಜಿಸಿದ್ದ ‘ತಿರಂಗಾ ಯಾತ್ರೆ’ಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಪ್ರಧಾನಿ ನರೇಂದ್ರಮೋದಿ ದೇಶದ ರಕ್ಷಣೆಗಾಗಿ ಕೈಗೊಂಡ ನಿರ್ಧಾರದಿಂದಾಗಿ ಭಾರತೀಯ ಸೇನೆ ಪಾಕಿಸ್ತಾನಕ್ಕೆ ಸರಿಯಾದ ಉತ್ತರ ನೀಡಿದೆ. ದೇಶದ ಗಡಿಯಲ್ಲಿ ಮಳೆ, ಚಳಿ, ಬಿಸಿಲನ್ನು ಲೆಕ್ಕಿಸದೆ ನಾಗರಿಕರ ರಕ್ಷಣೆ ಮಾಡುತ್ತಿರುವ ಸೈನಿಕರೊಂದಿಗೆ ನಾವಿದ್ದೇವೆ ಎಂದು ಹೇಳಿದರು.
ಜಗತ್ತಿನ ಪ್ರತಿಯೊಂದು ದೇಶವು ಶಾಂತಿಯುತವಾಗಿ ಇರಬೇಕು. ವಿಕೃತ ಮನಸ್ಸುಗಳು ನಡೆಸುವ ಅಮಾಯಕರ ಮಾರಣ ಹೋಮವನ್ನು ಪ್ರತಿಯೊಂದು ರಾಷ್ಟ್ರಗಳು ತಡೆಯಬೇಕು. ದೇಶದ ಪ್ರಜೆಗಳನ್ನು ಹತ್ಯೆಗೈದ ಹಿನ್ನೆಲೆಯಲ್ಲಿ ಭಾರತ ಅನಿವಾರ್ಯವಾಗಿ ಪಾಕಿಸ್ತಾನ ವಿರುದ್ಧ ಯುದ್ಧ ಮಾಡುವ ಪರಿಸ್ಥಿತಿ ನಿರ್ಮಾಣವಾಯಿತು. ಶಾಂತಿಯನ್ನು ಬಯಸದ ಹುಚ್ಚು ಮನಸ್ಸುಗಳು ಮಾಡುವ ಕ್ರೌರ್ಯಕ್ಕೆ ಎರಡು ದೇಶಗಳ ನಡುವೆ ಯುದ್ಧ ನಡೆಯಿತು ಎಂದರು.
ಶ್ರೀ ಅವಧೂತ ದತ್ತಪೀಠದ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಮಾತನಾಡಿ, ಮೈಸೂರಿನಲ್ಲಿ ಐತಿಹಾಸಿಕ ತಿರಂಗಾ ಯಾತ್ರೆ ನಡೆದಿದೆ. ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಅವರು ಅವಧೂತ ದತ್ತ ಪೀಠಕ್ಕೆ ಭೇಟಿ ನೀಡ್ದಿ ಸಂದರ್ಭ ಭಾರತೀಯ ಸೇನೆ, ಸೈನಿಕರ ವಿಚಾರಗಳು, ಗಡಿಯಲ್ಲಿ ಪರಿಸ್ಥಿತಿ ಯಾವ ರೀತಿ ಇರುತ್ತದೆ, ಸೈನಿಕರು ಎಷ್ಟು ಕಷ್ಟ ಪಡುತ್ತಾರೆ ಎಂಬುದನ್ನು ತಿಳಿಸಿದ್ದರು. ಕಾರ್ಗಿಲ್ ಯುದ್ಧದ ವೇಳೆ ಆಂಜನೇಯ ಮೂರ್ತಿ ಕಂಡಿದ್ದ ಜಾಗದಲ್ಲಿ ಸೈನಿಕರು ಕಟ್ಟಿಸಿದ್ದ ಗುಡಿಗೆ ಕರೆದಿದಾಗ ನಾನು ಹೋಗಿ ಬಂದಿದ್ದೆ ಎಂದು ಸ್ಮರಿಸಿದರು.
ಉಗ್ರರು ಧರ್ಮವನ್ನು ಕೇಳಿ ಗುಂಡಿಕ್ಕಿ ಕೊಂದಿರುವ ವಿಚಾರ ಕೇಳಿದಾಗ ಮನಸ್ಸು ಕುದಿಯುತ್ತದೆ. ಸಂತೋಷದಿಂದ ಕಾಲ ಕಳೆಯಲು ಹೋದ ಅಮಾಯಕರನ್ನು ಉಗ್ರರು ಹತ್ಯೆ ಮಾಡಿರುವುದನ್ನು ಯಾರು ಸಹ ಮರೆಯಲು ಸಾಧ್ಯವಿಲ್ಲ. ಈ ಕಾರಣಕೋಸ್ಕರ ಪ್ರಧಾನಿ ನರೇಂದ್ರ ಮೋದಿ ಅವರು ಭಯೋತ್ಪಾದನೆ ನಿರ್ಮೂಲನೆಯ ಪಣತೊಟ್ಟು ಪಾಕಿಸ್ತಾನದ ಮೇಲೆ ದಾಳಿ ನಡೆಸಿದರು.
ಉಗ್ರರ ನಿರ್ಮೂಲನೆ ವಿಚಾರದಲ್ಲಿ ಕೇಂದ್ರ ಸರ್ಕಾರದಲ್ಲಿರುವ ಪ್ರತಿಯೊಬ್ಬ ಸಚಿವರು ಕೆಲಸ ಮಾಡಿದ್ದಾರೆ. ಧರ್ಮ ರಕ್ಷಣೆಗೆ ರಾಕ್ಷಸರ ಸಂಹಾರ ಮಾಡಬೇಕು. ಪ್ರಪಂಚದಲ್ಲಿ ಎಲ್ಲರೂ ಒಂದಾಗಿರುವ ದೇಶ ಇದ್ದರೆ ಅದು ಭಾರತ. ಎಲ್ಲರನ್ನೂ ಒಟ್ಟಿಗೆ ಕರೆದೊಯ್ಯುವ ಶಕ್ತಿಯನ್ನು ಭಾರತ ಹೊಂದಿದೆ. ಭಾರತೀಯರು ಒಂದಾಗಿ ನಿಂತರೆ ಯಾವ ದುಷ್ಟಶಕ್ತಿಯಿಂದಲೂ ಏನನ್ನು ಮಾಡಲು ಆಗುವುದಿಲ್ಲ ಎಂದು ಹೇಳಿದರು.
ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಮಾತನಾಡಿ, ಯಾವುದೇ ಪಕ್ಷ, ಧರ್ಮ, ಜಾತಿ ದೃಷ್ಟಿಯಿಂದ ನೋಡದೆ ಭಾರತೀಯ ನಾಗರಿಕರು ಪಾಲ್ಗೊಂಡು ಸೈನಿಕರಿಗೆ ಬೆಂಬಲ ನೀಡಿದ್ದಾರೆ. ಭಾರತೀಯರು ಶಾಂತಿಯುತವಾಗಿ ಇದ್ದರೂ ನಮ್ಮ ಮೇಲೆ ಶತ್ರುಗಳು ದಾಳಿ ಮಾಡಿದಾಗ ಸುಮ್ಮನೇ ಕೂರದೆ ತಕ್ಕ ಉತ್ತರ ನೀಡುತ್ತೇವೆ ಎಂಬ ಸಂದೇಶವನ್ನು ಶತ್ರು ರಾಷ್ಟ್ರಕ್ಕೆ ಮುಟ್ಟಿಸಿದ್ದೇವೆ ಎಂದು ಹೇಳಿದರು.
ವಿಧಾನ ಪರಿಷತ್ ಸದಸ್ಯ ಸಿ.ಎನ್. ಮಂಜೇಗೌಡ ಮಾತನಾಡಿ, ದೇಶದ ಗಡಿಯಲ್ಲಿ ಹಗಲಿರುಳು ಎನ್ನದೆ ಕೆಲಸ ಮಾಡುವ ಸೈನಿಕರಿಗೆ ಇಡೀ ಭಾರತವೇ ಬೆನ್ನಿಗೆ ನಿಂತಿದೆ. ಭಾರತ ಮೌನವಾಗಿದೆ ಎಂದಾಕ್ಷಣ ಸುಮ್ಮನಿದೆ ಎನ್ನುವುದು ಅಲ್ಲ. ಒಂದು ಬಾರಿ ಸೆಟೆದು ನಿಂತರೆ ಇತಿಹಾಸದ ಪುಟಗಳಲ್ಲಿ ದಾಖಲಾಗುವ ಮಟ್ಟಿಗೆ ದೇಶದ್ರೋಹಿಗಳಿಗೆ ಪಾಠ ಕಲಿಸುತ್ತಾರೆ ಎನ್ನುವುದನ್ನು ಗಮನಿಸಬೇಕು. ಭಯೋತ್ಪಾದನೆಯನ್ನು ಬುಡಸಮೇತ ಕಿತ್ತು ಹಾಕಲು ಆಪರೇಷನ್ ಸಿಂಧೂರ ಮುಂದುವರಿಯಬೇಕು ಎಂದು ಹೇಳಿದರು.