ಜಿಲ್ಲೆ

ಭಾರತ ವಿಶ್ವದಲ್ಲೇ ಶಕ್ತಿಶಾಲಿ ರಾಷ್ಟ್ರ

ಹರಿಹರ: ಚಂದ್ರಯಾನ-3 ಯಶಸ್ಸಿನಿಂದಾಗಿ ಭಾರತ ವಿಶ್ವದಲ್ಲಿಯೇ ಶಕ್ತಿಶಾಲಿ ರಾಷ್ಟ್ರವಾಗಿ ಹೊರಹೊಮ್ಮುತ್ತಿದೆ ಎಂದು ಶಾಸಕ ಬಿ.ಪಿ. ಹರೀಶ್ ಹೆಮ್ಮೆ ವ್ಯಕ್ತಪಡಿಸಿದರು.

ನಗರದ ಗಾಂಧಿ ಮೈದಾನದಲ್ಲಿ ರಾಷ್ಟ್ರೀಯ ಮತ್ತು ನಾಡಹಬ್ಬಗಳ ಆಚರಣೆ ಸಮಿತಿ ಹಮ್ಮಿಕೊಂಡಿದ್ದ ಸ್ವಾತಂತ್ರ್ಯ ದಿನಾಚರಣೆ ಅಧ್ಯಕ್ಷತೆ ವಹಿಸಿ ಮಂಗಳವಾರ ಮಾತನಾಡಿದರು.

ದೇಶದ ವಿಜ್ಞಾನಿಗಳ ಪರಿಶ್ರಮದ ಫಲವಾಗಿ ಇನ್ನು ಕೆಲವೇ ದಿನಗಳಲ್ಲಿ ಚಂದ್ರನ ಮೇಲೆ ತನ್ನ ಕಾರ್ಯ ಚಟುವಟಿಕೆ ಪ್ರಾರಂಭಿಸಲಿದ್ದು, ಇದಕ್ಕೆ ಶ್ರಮಿಸಿದ ಎಲ್ಲರೂ ಅಭಿನಂದನಾರ್ಹರು ಎಂದರು.

ಅಮೃತ್ ಯೋಜನೆಯಡಿ ಸುಮಾರು 25.23 ಕೋಟಿ ರೂ. ವೆಚ್ಚದಲ್ಲಿ ನಗರದ ರೈಲ್ವೆ ನಿಲ್ದಾಣ ಮರುನಿರ್ಮಾಣ ಕಾರ್ಯ, ರಾಷ್ಟ್ರೀಯ ಶಿಕ್ಷಣ ನೀತಿ ಸೇರಿದಂತೆ ಕೇಂದ್ರ ಸರ್ಕಾರವು ದೇಶದ ಸರ್ವತೋಮುಖ ಅಭಿವೃದ್ಧಿಗಾಗಿ ಅನೇಕ ಯೋಜನೆ ಜಾರಿಗೊಳಿಸಿದೆ. ಈ ಮೂಲಕ ದೇಶದ ಪ್ರಗತಿಗೆ ಪ್ರಧಾನ ಮಂತ್ರಿಗಳು ಮುನ್ನುಡಿ ಬರೆದಿದ್ದಾರೆ ಎಂದು ಬಣ್ಣಿಸಿದರು.

ತಾಲೂಕಿನಲ್ಲಿ ಶೇ. 75 ರಷ್ಟು ರೈತರಿಗೆ ಮಾತ್ರ ಭದ್ರಾ ಅಚ್ಚುಕಟ್ಟು ನೀರಿನ ಲಾಭ ಪಡೆಯುತ್ತಿದ್ದಾರೆ. ಉಳಿದ ಕೊನೆ ಭಾಗದ ರೈತರಿಗೂ ನೀರು ತಲುಪಿಸಬೇಕು ಎಂಬುದು ನನ್ನ ಆಶಯ. ಇದನ್ನು ಸಾಕಾರಗೊಳಿಸಲು ಪ್ರಾಮಾಣಿಕ ಪ್ರಯತ್ನ ಪಡುತ್ತಿದ್ದು, ಮುಂದಿನ ದಿನಗಳಲ್ಲಿ ಇದರಲ್ಲಿ ಯಶಸ್ವಿಯಾಗುವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ತಹಸೀಲ್ದಾರ್ ಪೃಥ್ವಿ ಸಾನಿಕಂ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ಜಾತ್ಯತೀತತೆ, ಭ್ರಾತೃತ್ವ, ಸಮಾನತೆಯ ಸಂದೇಶ ಸಾರುವಂತಹ ಲಿಖಿತ ರೂಪದಲ್ಲಿ ರಚನೆಯಾದ ಸಂವಿಧಾನದ ಆಶಯದಂತೆ ನಾವು ನಡೆದುಕೊಳ್ಳಬೇಕೆಂದರು.

ಕಸಾಪ ಮಾಜಿ ಜಿಲ್ಲಾಧ್ಯಕ್ಷ ಎಸ್.ಎಚ್. ಹೂಗಾರ್ ಉಪನ್ಯಾಸ ನೀಡಿದರು.

ನಗರಸಭಾಧ್ಯಕ್ಷೆ ನಿಂಬಕ್ಕ ಚಂದಾಪುರ, ಸದಸ್ಯರಾದ ದಿನೇಶ್ ಬಾಬು, ಕ್ಷೇತ್ರ ಶಿಕ್ಷಣಾಧಿಕಾರಿ ಎಂ. ಹನುಮಂತಪ್ಪ, ಪೌರಾಯುಕ್ತ ಬಸವರಾಜ್ ಐಗೂರು, ಸಿಪಿಐ ಎಸ್. ದೇವಾನಂದ್, ತಾಪಂ ಇಒ ಎನ್. ರವಿ ಇತರರು ಭಾಗವಹಿಸಿದ್ದರು.