ಜಿಲ್ಲೆ

2027ಕ್ಕೆ ವಿಶ್ವದ 3ನೇ ಆರ್ಥಿಕ ಶಕ್ತಿಯಾಗಿಲದೆ ಭಾರತ

ರಾಮನಗರ: ಪ್ರಧಾನಿ ಮೋದಿ ಅವರ ಉತ್ತಮ ಆರ್ಥಿಕ ನೀತಿ, ಉತ್ತಮ ಆಡಳಿತದಿಂದ ದೇಶ ವಿಶ್ವಮಟ್ಟದಲ್ಲಿ ಗುರುತಿಸಿಕೊಳ್ಳುವ ಜತೆಗೆ ಅಭಿವೃದ್ಧಿ ಹೊಂದುತ್ತಿದೆ ಎಂದು ಸಂಸದ ಡಾ.ಸಿ.ಎನ್​. ಮಂಜುನಾಥ್​ ತಿಳಿಸಿದರು.

ರಾಮನಗರದ ಆರ್​ವಿಸಿಎಸ್​ ಕಲ್ಯಾಣ ಮಂಟಪದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಕೇಂದ್ರ ಸರ್ಕಾರದ 11 ವರ್ಷಗಳ ವಿಕಸಿತ ಭಾರತ ಅಮೃತಕಾಲ ಕಾರ್ಯಕ್ರಮದ ಸಾಧನೆ ಪನೋಟ, ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು.

ಮೋದಿ ಅವರ ನಾಯಕತ್ವದಲ್ಲಿ ದೇಶ ಅಭಿವೃದ್ಧಿಯತ್ತ ಸಾಗಿ ಎಲ್ಲ ಕ್ಷೇತ್ರಗಳಲ್ಲಿ ಉತ್ತಮ ಸಾಧನೆ ಮಾಡಿದೆ. ಭಾರತ ವಿಶ್ವದಲ್ಲಿ ನಾಲ್ಕನೇ ದೊಡ್ಡ ಆರ್ಥಿಕ ಶಕ್ತಿಯಾಗಿ ಜಪಾನ್​ ದೇಶವನ್ನು ಹಿಂದಿಕ್ಕಿ ಬೆಳೆದಿದೆ. 2027ಕ್ಕೆ ವಿಶ್ವದಲ್ಲಿ ಭಾರತ 3ನೇ ಆರ್ಥಿಕ ಶಕ್ತಿಯಾಗಿ ಬೆಳೆಯಲಿದೆ ಎಂದರು.

ಮೋದಿ ಅವರ 11 ವರ್ಷದ ಆಡಳಿತದಲ್ಲಿ ಬಡವರ ಏಳಿಗೆಗೋಸ್ಕರ ಹತ್ತಾರು ಯೋಜನೆ ಸಫಲಗೊಳಿಸಿದ ಪರಿಣಾಮ ವಿಶ್ವಬ್ಯಾಂಕ್​ ಪ್ರಕಾರ ಶೇ. 27ರಷ್ಟಿದ್ದ ಬಡತನ ಇಂದು ಶೇ. 5ಕ್ಕೆ ಇಳಿದಿದೆ ಎಂದು ತಿಳಿಸಿದರು.

ಸಮಸ್ಯೆ ಸೌಹಾರ್ದವಾಗಿ ಬಗೆಹರಿಯಲಿ

ತುಮಕೂರು ಹಾಗೂ ರಾಮನಗರ, ಮಾಗಡಿ ಭಾಗದ ರೈತ ಮುಖಂಡರು, ಜನಪ್ರತಿನಿಧಿಗಳ ಸಭೆ ನಡೆಸಿ ಹೇಮಾವತಿ ನೀರಿನ ವಿಷಯವನ್ನು ಮಾತುಕತೆ ಮೂಲಕ ಸೌಹಾರ್ದವಾಗಿ ಬಗೆಹರಿಸಿಕೊಳ್ಳುವುದೇ ಸೂಕ್ತ. ಎರಡೂ ಜಿಲ್ಲೆಗಳ ಜನರಿಗೆ ಅನ್ಯಾಯವಾಗದಂತೆ ಕೆನಾಲ್​ ಫೀಡರ್​ ಯೋಜನೆ ವಿವಾದವನ್ನು ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಗಳು ಕೂಡಲೇ ನೀರಾವರಿ ತರನ್ನು ಒಳಗೊಂಡಂತೆ ಜನಪ್ರತಿನಿಧಿಗಳು ಮತ್ತು ರೈತ ಮುಖಂಡರ ಸಭೆ ಕರೆದು ಸಾಧಕ&ಬಾಧಕಗಳ ಬಗ್ಗೆ ಅವಲೋಕಿಸಿ ಸೂಕ್ತ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಸಂಸದರು ಅಭಿಪ್ರಾಯಪಟ್ಟರು.

ತುಮಕೂರು ಮತ್ತು ಮಾಗಡಿ ತಾಲೂಕಿನ ಜನರು ಬೇರೆ ದೇಶದವರಲ್ಲ. ಮಾಗಡಿ ಭಾಗದ ಜನರು ಕುಡಿಯುವ ನೀರನ್ನು ಕೇಳುತ್ತಿದ್ದಾರೆ ತಪ್ಪಿಲ್ಲ. ಹಾಗಂತ ಗುಬ್ಬಿ, ತುರುವೇಕೆರೆ, ಕುಣಿಗಲ್​ ಭಾಗದ ಜನರಿಗೂ ಅನ್ಯಾಯವಾಗಬಾರದು. ಆ ರೀತಿ ಸೌಹಾರ್ದವಾಗಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕಿದೆ ಎಂದರು.

ಈ ಯೋಜನೆ ಜಾರಿಯಾಗಲು ಬಿಡುವುದಿಲ್ಲ ಎನ್ನುತ್ತಿರುವ ಬಿಜೆಪಿ ರಾಜ್ಯಾಧ್ಯಕ್ಷರನ್ನು ಭೇಟಿಯಾಗಿ ವಾಸ್ತವ ಸ್ಥಿತಿಯನ್ನು ಮನವರಿಕೆ ಮಾಡಿಕೊಡುತ್ತೇನೆ ಎಂದು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿ ಮಾತನಾಡಿದರು.

ಎಕ್ಸ್​ಪ್ರೆಸ್​ ಕೆನಾಲ್​ ಕಾಮಗಾರಿಯಲ್ಲಿ 70ನೇ ಕಿಮೀನಲ್ಲಿ ಡೈವರ್ಷನ್​ ಮಾಡಲಾಗುತ್ತಿದೆ. ಹೀಗಾಗಿ ಸಾಂಪ್ರದಾಯಿಕ ಕಾಲುವೆಗಳಲ್ಲಿ ನೀರು ಹರಿದರೆ ಸೋರಿಕೆಯಾಗುತ್ತದೆ. ಆದ್ದರಿಂದ ಪೈಪ್​ ಅಳವಡಿಸುವುದರಿಂದ ನೀರು ಮಾಗಡಿ ಕೊನೆ ಭಾಗಕ್ಕೆ ತಲುಪುತ್ತದೆ ಎಂದು ತಿಳಿಸಿದರು.

ಬಿಡದಿ ಟೌನ್​ಶಿಪ್​ ಯೋಜನೆಗೆ ಭೂ ಸ್ವಾಧಿನ ಮಾಡಿಕೊಳ್ಳಲು ರೈತರಿಗೆ ನೋಟಿಸ್​ ಕೊಡುತ್ತಿರುವುದು ಗಮನಕ್ಕೆ ಬಂದಿದೆ. ನಾನು ಮತ್ತು ಮಾಜಿ ಪ್ರಧಾನಿ ದೇವೇಗೌಡರು ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದು ಟೌನ್​ಶಿಪ್​ ಯೋಜನೆ ಕೈಬಿಡುವಂತೆ ಮನವಿ ಮಾಡಿದ್ದೇವೆ. ಇದರಿಂದ ರೈತರಿಗೆ ಅನುಕೂಲವಾಗಲಿದೆ ಎಂದರು.

ಮಾಜಿ ಸಚಿವ ಎನ್​. ಮಹೇಶ್​ ಮಾತನಾಡಿ, ವಿಪಕ್ಷಗಳು ಕೇಂದ್ರ ಸರ್ಕಾರ ಉದ್ಯೋಗ ಸೃಷ್ಟಿ ಮಾಡಿಲ್ಲ ಎಂದು ಬೊಬ್ಬೆ ಹೊಡೆಯುತ್ತಿವೆ. ಉದ್ಯೋಗ ಅಂದರೆ ಆದಾಯಗಳಿಸುವ ಚಟುವಟಿಕೆ. ಪ್ರಧಾನ ಮಂತ್ರಿ ಮುದ್ರಾ ಯೋಜನೆಯಲ್ಲಿ 51 ಕೋಟಿ ಜನರು ಸ್ವಯಂ ಉದ್ಯೋಗ ಸೃಷ್ಟಿ ಮಾಡಿಕೊಂಡಿದ್ದಾರೆ. ಅವರೆಲ್ಲರ ನೆಮ್ಮದಿ ಬದುಕು ಕಟ್ಟಿಕೊಂಡಿದ್ದಾರೆ. ಇದನ್ನು ನಾವಲ್ಲ, ಸರ್ಕಾರಿ ಅಂಕಿ ಅಂಶಗಳೇ ಹೇಳುತ್ತಿವೆ.

ರೇಷ್ಮೆ ಅಭಿವೃದ್ಧಿ ನಿಗಮ ಮಾಜಿ ಅಧ್ಯಕ್ಷ ಗೌತಮ್​ಗೌಡ, ಮಾಗಡಿ ಪ್ರಸಾದ್​ಗೌಡ, ಬಿಜೆಪಿ ತಾಲೂಕು ಅಧ್ಯಕ್ಷ ಪಿ.ಎಸ್​. ಜಗದೀಶ್​, ಜೆಡಿಎಸ್​ ತಾಲೂಕು ಅಧ್ಯಕ್ಷ ಸಬ್ಬಕೆರೆ ಶಿವಲಿಂಗಪ್ಪ, ಮುಖಂಡರಾದ ಪುಷ್ಪಲತಾ, ರುದ್ರದೇವರು, ನರಸಿಂಹಮೂರ್ತಿ, ಚಂದ್ರು, ಶಿವಣ್ಣ, ಜೈಕುಮಾರ್​, ಕಾಳಯ್ಯ, ಜಗನ್ನಾಥ್​, ಶಿವಾನಂದ್​, ಮೋಹನ್​, ಚನ್ನಪ್ಪ, ನಾಗೇಶ್​, ಚಂದನ್​ಮೋರೆ, ರಾವೇಂದ್ರ ಇದ್ದರು.

ಭಾರತವು ಆಕಾಶ ಮತ್ತು ಭೂಮಿ ಮೇಲೆ ಪ್ರಜ್ವಲಿಸುತ್ತಿದೆ ಪೆಹಲ್ಗಾಂನ ಆಪರೇಷನ್​ ಸಿಂಧೂರ್​ನಿಂದ ಇಡೀ ವಿಶ್ವಕ್ಕೆ ಭಾರತದ ರಕ್ಷಣೆ ಶಕ್ತಿ ಕಂಡಿದೆ. ವಿಶ್ವಮಟ್ಟದ ಭಾರತದ ಬ್ರಹ್ಮೋಸ್​ ಮಿಸೇಲ್​ಗಳ ಸಾಮಾರ್ಧ್ಯ ವಿಶ್ವದ ದೊಡ್ಡ ರಾಷ್ಟ್ರಗಳಾದ ಚೀನಾ, ಅಮೆರಿಕಾ ದೇಶಗಳಿಗೆ ನಿದ್ದೆಗೆಡಿಸಿದೆ. ರಕ್ಷಣಾ ವಿಭಾಗದಲ್ಲಿ ದೇಶವು ಅತ್ಯಂತ ವೇಗವಾಗಿ ಸಾಧನೆ ಮಾಡಿದೆ. > ಡಾ.ಸಿ.ಎನ್​. ಮಂಜುನಾಥ್​, ಸಂಸದರು.