ಮೈಸೂರು: ಇಂಧನ ಆಮದು ಪ್ರಮಾಣ ತಗ್ಗಿಸಲು ಭಾರತ ಪರಿಣಾಮಕಾರಿಯಾದ ಹೆಜ್ಜೆಗಳನ್ನು ಇರಿಸುತ್ತಿದ್ದು, 2030ರ ವೇಳೆಗೆ ಭಾರತ ಎಥೆನಾಲ್ ಉತ್ಪಾದನೆಯಲ್ಲಿ ಅಗ್ರಗಣ್ಯ ಸ್ಥಾನಕ್ಕೆ ಬರಲಿದೆ ಎಂದು ಭಾರತದ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದಲ್ಲಿ ಜೈವಿಕ ಇಂಧನಗಳ ಕಾರ್ಯಕಾರಿ ಗುಂಪಿನ ಸದಸ್ಯ ವೈ.ಬಿ.ರಾಮಕೃಷ್ಣ ಹೇಳಿದರು.
ನ್ಯಾಷನಲ್ ಇನ್ಸ್‌ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ವತಿಯಿಂದ ನಗರದ ಖಾಸಗಿ ಹೋಟೆಲ್‌ನಲ್ಲಿ ಬುಧವಾರ ಹಮ್ಮಿಕೊಂಡ ‘ಅಂತಾರಾಷ್ಟ್ರೀಯ ಸ್ವಚ್ಛ ಇಂಧನ ಸಮಾವೇಶದಲ್ಲಿ’ ಭಾಗವಹಿಸಿ ಮಾತನಾಡಿದ ಅವರು, ಪ್ರಸ್ತುತ ಇಂಧನದಲ್ಲಿ ಶೇ.10 ಎಥೆನಾಲ್ ಮಿಶ್ರಣ ಮಾಡಲಾಗುತ್ತಿದೆ. ಇದರಿಂದ ಇಂಧನ ಆಮದು ಪ್ರಮಾಣ ತಗ್ಗಲು ಪ್ರಾರಂಭವಾಗಿದ್ದು, 2030ರ ವೇಳಗೆ ಈ ಪ್ರಮಾಣ ಶೇ.20ಕ್ಕೆ ಏರಿಕೆಯಾಗುವ ನಿರೀಕ್ಷೆ ಹೊಂದಲಾಗಿದೆ ಎಂದರು.
ಜೈವಿಕ ಇಂಧನ ಉತ್ಪಾದನೆಯ ಅಭಿವೃದ್ಧಿಗೆ 2014ರ ನಂತರ ಹೆಚ್ಚಿನ ಪ್ರೋತ್ಸಾಹ ದೊರೆಯಲು ಪ್ರಾರಂಭವಾಯಿತು. 2014ರವರೆಗೆ ದೇಶದಲ್ಲಿ ಜೈವಿಕ ಇಂಧನ ಉತ್ಪಾದನೆ ಹೆಚ್ಚಿನ ಪ್ರಗತಿ ಕಂಡಿರಲಿಲ್ಲ. 2014ರಲ್ಲಿ ನರೇಂದ್ರ ಮೋದಿ ಪ್ರಧಾನಿಯಾದ ನಂತರ ಹೆಚ್ಚಿನ ಉತ್ತೇಜನ ನೀಡಲು ಪ್ರಾರಂಭಿಸಿದರು. 2015ರಲ್ಲಿ ಜೈವಿಕ ಇಂಧನಗಳ ರಾಷ್ಟ್ರೀಯ ಕಾರ್ಯಕಾರಿ ಗುಂಪನ್ನು ರಚಿಸಲಾಯಿತು. 2018ರಲ್ಲಿ ಹೊಸ ರಾಷ್ಟ್ರೀಯ ಜೈವಿಕ ಇಂಧನ ನೀತಿ ಜಾರಿಗೆ ತಂದು ಜೈವಿಕ ಇಂಧನ ಉತ್ಪಾದನೆಗೆ ಹೆಚ್ಚಿನ ಉತ್ತೇಜನ ನೀಡಲಾಯಿತು ಎಂದು ಹೇಳಿದರು.