ಚಿಕ್ಕೋಡಿ: ರಾಜ ಪ್ರಭುತ್ವ ತೊಲಗಿ ಪ್ರಜಾಪ್ರಭುತ್ವ ಜಾರಿ ಬಂದ ದಿನವೇ ಜ.26. ಭಾರತ ದೇಶಕ್ಕೆ ಸಂವಿಧಾನ ಕೊಟ್ಟವರು ಡಾ.ಬಿ.ಆರ್.ಅಂಬೇಡ್ಕರ್. ಮಹಾನಾಯಕರ ತ್ಯಾಗ, ಬಲಿದಾನಗಳಿಂದ ಭಾರತ ವಿಶ್ವದ ಅತಿದೊಡ್ಡ ಗಣತಂತ್ರ ರಾಷ್ಟ್ರವಾಗಿದೆ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಮಹಾಂತೇಶ ಕವಟಗಿಮಠ ಹೇಳಿದರು.
ಇಲ್ಲಿನ ಸಿಎಲ್‌ಇ ಸಂಸ್ಥೆಯ ಸಿಎಸ್‌ಎಸ್ ಪ್ರೌಢಶಾಲೆ ಹಾಗೂ ಎಲ್ಲ ಅಂಗಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಭಾನುವಾರ 76ನೇ ಗಣರಾಜ್ಯೋತ್ಸವದ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.
ಭಾರತ ಮುಂದುವರೆದ ರಾಷ್ಟ್ರವಾಗಿ ಬೆಳೆಯಬೇಕಾದರೆ, ಒಂದು ದೇಶ ಒಂದು ಚುನಾವಣೆ ಅವಶ್ಯಕವಾಗಿದೆ. ಪದ್ಮವಿಭೂಷಣ, ಪದ್ಮಭೂಷಣ ಮತ್ತು ಪದ್ಮಶ್ರೀ ಪ್ರಶಸ್ತಿಗೆ ಆಯ್ಕೆಯಾದ ಸಾಧಕರನ್ನು ಅಭಿನಂದಿಸಿದರು.
ಮಹಿಳೆಯರಲ್ಲಿ ಗರ್ಭಕಂಠದ ಕ್ಯಾನ್ಸರ್ ಪತ್ತೆ ತಡೆಗಟ್ಟುವಿಕೆ ಮತ್ತು ನಿರ್ವಹಣೆಗೆ ವಿಶೇಷ ಗಮನ ಹರಿಸಿದ ಪದ್ಮಶ್ರೀ ಪುರಸ್ಕೃತ ಸ್ತ್ರೀ ರೋಗ ತಜ್ಞೆ ಡಾ.ನೀರ್ಜಾ ಭಟ್ಲಾರನ್ನು ಸ್ಮರಿಸಿದರು. ಗರ್ಭಕಂಠದ ಕ್ಯಾನ್ಸರ್ ತಡೆಗಟ್ಟುವ ನಿಟ್ಟಿನಲ್ಲಿ ಹೆಣ್ಣುಮಕ್ಕಳಿಗೆ ಲಸಿಕೆ ಕೊಡುವ ಕುರಿತು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ ಎಂದು ತಿಳಿಸಿದರು.
ಸಿಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ ಎಸ್.ಎಸ್.ಚನ್ನವರ, ಜಂಟಿ ಕಾರ್ಯದರ್ಶಿ ಎನ್.ಎಸ್.ವಂಟಮುತ್ತೆ, ನಿರ್ದೇಶಕರಾದ ಶಿವಾನಂದ ಚೊನ್ನದ, ಮಲ್ಲಿಕಾರ್ಜುನ ಕವಟಗಿಮಠ, ಆಡಳಿತಾಧಿಕಾರಿ ಸಾಗರ ಬಿಸ್ಕೋಪ್, ಎಸ್.ಕೆ.ಕೊಟ್ರೆ, ಕೆ.ಎಸ್.ಪೂಜಾರಿ ಇತರರು ಇದ್ದರು.