ಬೆಂಗಳೂರು: ವೈಮಾನಿಕ ವಲಯದಲ್ಲಿ ತನ್ನ ಶಕ್ತಿ, ಸಾಮರ್ಥ್ಯವನ್ನು ಜಗತ್ತಿಗೆ ಪರಿಚಯಿಸಲು ಆಯೋಜಿಸಿರುವ ‘ಏರೋ ಇಂಡಿಯಾ - 2025’ರ ವಾಣಿಜ್ಯ ವಹಿವಾಟು ವೃದ್ಧಿಸಿಕೊಳ್ಳುವಲ್ಲಿ ಭಾರತ ಯಶಸ್ವಿಯಾಗಿದೆ. ಈ ಮೂಲಕ ಭಾರತವು ಜಾಗತಿಕ ರಕ್ಷಣಾ ಕ್ಷೇತ್ರದಲ್ಲಿ ನಾಯಕನಾಗಲು ದಾಪುಗಾಲು ಇಟ್ಟಿದ್ದು, ಖಾಸಗಿ ಸಹಭಾಗಿತ್ವದಡಿ ದೇಶದಲ್ಲೇ ಮಿಲಿಟರಿ ಸಾಮಗ್ರಿ ಉತ್ಪಾದಿಸುವ ಹೊಸ ಮೈಲಿಗಲ್ಲು ಸೃಷ್ಟಿಸಲಾಗಿದೆ ಎಂದು ರಕ್ಷಣಾ ಸಚಿವ ರಾಜ್‌ನಾಥ್ ಸಿಂಗ್ ಪ್ರತಿಪಾದಿಸಿದ್ದಾರೆ.
ಯಲಹಂಕದ ಭಾರತೀಯ ವಾಯುಪಡೆ ಕೇಂದ್ರ (ಐಎಎಫ್) ದಲ್ಲಿ ಮೂರು ದಿನಗಳಿಂದ ನಡೆದಿದ್ದ ವಾಣಿಜ್ಯ ಸಂಬಂಧಿತ ವೈಮಾನಿಕ ಮೇಳದ ಸಮಾರೋಪದಲ್ಲಿ ಬುಧವಾರ ಮಾತನಾಡಿದರು.
ಭಾರತದ ನೆಲದಲ್ಲೇ ರಕ್ಷಣಾ ಸಾಮಗ್ರಿ ಉತ್ಪಾದಿಸುವ ಸರ್ಕಾರದ ಆಶಯಕ್ಕೆ ಪೂರಕವಾಗಿ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳು ಹಾಗೂ ಖಾಸಗಿ ಕಂಪನಿಗಳು ಪಾಲುದಾರಿಕೆಯೊಂದಿಗೆ ಯಶಸ್ಸಿನತ್ತ ಮುನ್ನಡೆಯಲಾಗುತ್ತಿದೆ. ಇದಕ್ಕೆ ಸಾಕ್ಷಿ ಎಂಬಂತೆ ನಮ್ಮ ನೆಲದಲ್ಲೇ ತಯಾರಾದ 33 ದೇಶಿ ಸಾಮಗ್ರಿಗಳನ್ನು ಪ್ರದರ್ಶಿಸಿರುವ ‘ಸಾಮರ್ಥ್ಯ’ ಕಾರ್ಯಕ್ರಮ ಎಲ್ಲರಿಗೂ ಸ್ಫೂರ್ತಿ ನೀಡಿದೆ. ದಶಕದ ಹಿಂದೆ ಶೇ. 65-70 ರಕ್ಷಣಾ ಸಾಮಗ್ರಿಗಳನ್ನು ಆಮದು ಮಾಡಿಕೊಳ್ಳುತ್ತಿದ್ದು, ಈಗ ಅಷ್ಟನ್ನೂ ದೇಶೀಯವಾಗಿ ಉತ್ಪಾದಿಸುತ್ತಿರುವುದು ಪ್ರಧಾನಿಯವರ ‘ಆತ್ಮನಿರ್ಭರ ಪರಿಕಲ್ಪನೆ’ ಸಾಕಾರಗೊಂಡಿದೆ ಎಂದರು.
ತುರ್ತು ಹೆಚ್ಚಳಕ್ಕೆ ಪಾಲುದಾರಿಗೆ ಅಗತ್ಯ:
ಪ್ರಸ್ತುತ ದೇಶದಲ್ಲಿ 16 ರಕ್ಷಣಾ ಸಾರ್ವಜನಿಕ ಸಂಸ್ಥೆಗಳು, 430 ಲೈಸೆನ್ಸ್ ಪಡೆದ ಕಂಪನಿಗಳು ಹಾಗೂ 16 ಸಾವಿರ ಎಂಎಸ್‌ಎಂಇ ಘಟಕಗಳು ಸಕ್ರಿಯವಾಗಿವೆ. ಇದರ ಲವಾಗಿ ನಾವಿಂದು ಫೈಟರ್ ಜೆಟ್, ಕ್ಷಿಪಣಿ ಸೇರಿ ವಿವಿಧ ಯುದ್ಧ ಸಾಮಗ್ರಿಗಳನ್ನು ಉತ್ಪಾದಿಸುತ್ತಿದ್ದೇವೆ. ಖಾಸಗಿ ಸಹಭಾಗಿತ್ವದ ಮೂಲಕ ಹೆಚ್ಚಿನ ಸಾಧನೆ ಮಾಡುವ ಜತೆಗೆ ಜಾಗತಿಕ ಗುಣಮಟ್ಟದೊಂದಿಗೆ ರಕ್ಷಣಾ ಸಾಮಗ್ರಿಗಳನ್ನು ರ್ತು ಮಾಡಲು ಎಲ್ಲರೂ ಒಟ್ಟಿಗೆ ಕಾರ್ಯನಿರ್ವಹಿಸಬೇಕಿದೆ. ಈ ಸಂಕಲ್ಪವು ಏರೋ ಇಂಡಿಯಾ ಮೇಳವು ಗಟ್ಟಿಯಾದ ವೇದಿಕೆ ರೂಪಿಸಿಕೊಳ್ಳಲು ಅವಕಾಶವಾಗಿದೆ ಎಂದು ಸಚಿವರು ತಿಳಿಸಿದರು.
ಕಾರ್ಯಕ್ರಮದಲ್ಲಿ ರಕ್ಷಣಾ ಸಚಿವಾಲಯದ ರಾಜ್ಯ ಖಾತೆ ಸಚಿವ ಸಂಜಯ್ ಸೇಠ್, ರಕ್ಷಣಾ ಕಾರ್ಯದರ್ಶಿ ರಾಜೇಶ್‌ಕುಮಾರ್ ಸಿಂಗ್, ರಕ್ಷಣಾ ಪಡೆಗಳ ಮುಖ್ಯಸ್ಥ ಜನರಲ್ ಅನಿಲ್ ಚವ್ಹಾಣ್, ನೌಕಾಪಡೆ ಮುಖ್ಯಸ್ಥ ಅಡ್ಮೀರಲ್ ದಿನೇಶ್ ಕೆ. ತ್ರಿಪಾಠಿ, ಭೂಸೇನಾ ಮುಖ್ಯಸ್ಥ ಉಪೇಂದ್ರ ದ್ವಿವೇದಿ, ವಾಯುಪಡೆ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ಎ.ಪಿ.ಸಿಂಗ್ ಹಾಗೂ ಮತ್ತಿತರರಿದ್ದರು.