ಗೋಕರ್ಣ: ಮಹಾನ್ ರಾಷ್ಟ್ರ ಸಂಪತ್ತಿಗೆ ಶ್ರೀರಾಮ ರಕ್ಷೆ ಮತ್ತೆ ಒದಗಿ ಬರಬೇಕು. ಶ್ರೀರಾಮನಿಂದಾಗಿ ತ್ರೇತಾಯುಗದಲ್ಲಿ ಅಯೋಧ್ಯೆ ವಿಶ್ವದಲ್ಲೇ ಸುಖ-ಶಾಂತಿ, ನೆಮ್ಮದಿ ಮತ್ತು ಸಮೃದ್ಧಿಯ ಕೇಂದ್ರವಾಗಿತ್ತು. ಅಂತಹ ಸಮೃದ್ಧ ಸುಭಿಕ್ಷೆ ಮತ್ತು ಸುರಕ್ಷೆ ಶ್ರೀರಾಮ ರಕ್ಷೆಯಿಂದ ಭರತಭೂಮಿಗೆ ಪುನರಪಿ ಲಭ್ಯವಾಗುವಂತಾಗಬೇಕು ಎಂದು ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ಆಶಯ ವ್ಯಕ್ತಪಡಿಸಿದರು.
ವಿಷ್ಣುಗುಪ್ತ ವಿಶ್ವವಿದ್ಯಾಪೀಠದಲ್ಲಿ ಹಮ್ಮಿಕೊಂಡಿರುವ ಸಂಘಟನಾ ಚಾತುರ್ವಸ್ಯದ ಧರ್ಮಸಭೆಯಲ್ಲಿ ಭಾನುವಾರ ಶ್ರೀಗಳು ಆಶೀರ್ವಚನ ನೀಡಿದರು.
ಬದುಕಿನಲ್ಲಿ ಸಂಪಾದನೆ ಎಷ್ಟು ಕಷ್ಟಕರವೋ ಗಳಿಸಿದ ಸಂಪತ್ತನ್ನು ಉಳಿಸಿಕೊಳ್ಳುವುದು ಕೂಡ ಅಷ್ಟೇ ಕಷ್ಟಸಾಧ್ಯ ಕಾರ್ಯ. ಸಂಪತ್ತು ಲಭಿಸಿದಾಗ ಅದನ್ನು ಸಂರಕ್ಷಿಸುವ ಬಾಧ್ಯತೆ ಮತ್ತು ಯೋಗ್ಯತೆ ಬೇಕು. ಇದಕ್ಕೆ ಶ್ರೀ ರಾಮಚಂದ್ರಪ್ರಭು ಸಾರ್ವಕಾಲಿಕ ಉದಾಹರಣೆ.
ಸೀತಾಮಾತೆ ಲಕ್ಷ್ಮೀದೇವಿಯ ಪ್ರತಿರೂಪ. ಇಂಥ ಸೀತಾದೇವಿಯನ್ನು ಸಂರಕ್ಷಿಸುವ ಸಾಮರ್ಥ್ಯ ಮತ್ತು ಯೋಗ್ಯತೆ ಶಿವ ಧನುಸ್ಸನ್ನು ಪ್ರಯೋಗಿಸಬಲ್ಲ ರಾಜನಿಗೆ ಮಾತ್ರ ಇರಲು ಸಾಧ್ಯ ಎಂದು ನಿರ್ಧರಿಸಿದ ಜನಕಮಹಾರಾಜ ಶಿವಧನುಸ್ಸನ್ನು ಮುರಿಯುವ ಪಣವನ್ನೊಡ್ಡಿದ. ಇದೇ ರೀತಿಯಲ್ಲಿ ಸಂಪತ್ತು ಸಮೃದ್ಧಿ ಬಂದಾಗ ಸಹಜವಾಗಿ ಜವಾಬ್ದಾರಿ ಮತ್ತು ಸುರಕ್ಷೆಯ ಹೊಣೆಗಾರಿಕೆಯೂ ಬರುತ್ತದೆ. ಇಂತಹ ವೇಳೆ ಸಂಪತ್ತು ಸದ್ವಿನಿಯೋಗವಾಗಿ ಧರ್ಮ ಕಾರ್ಯಗಳಿಗೆ ಕಾರಣವಾಗಬೇಕು. ಇದೇ ಹಿನ್ನೆಲೆಗಳಿಂದ ಅಯೋಧ್ಯೆ ಅಂದು ವಿಶ್ವದ ಆಕರ್ಷಣೆಯ ಕೇಂದ್ರವಾಗಿತ್ತು ಎಂದು ಶ್ರೀ ವಾಲ್ಮೀಕಿ ರಾಮಾಯಣದಲ್ಲಿನ ಉಲ್ಲೇಖಗಳನ್ನು ಶ್ರೀಗಳು ವರ್ಣಿಸಿದರು.
ಅಖಿಲ ಹವ್ಯಕ ಮಹಾಸಭಾದ ಅಧ್ಯಕ್ಷ ಡಾ. ಗಿರಿಧರ ಕಜೆ ಮಾತನಾಡಿ, ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ನಡೆಯುತ್ತಿರುವ ಶ್ರೀಮಠದ ಸಮಾಜಮುಖಿ ಸತ್ಕಾರ್ಯಗಳಲ್ಲಿ ಎಲ್ಲ ವರ್ಗದವರು ಕೈಜೋಡಿಸುತ್ತಿರುವುದು ಹರ್ಷದಾಯಕ. ಶ್ರೀಮಠದ ಜತೆಗಿನ ಸಂಬಂಧ ಸುಭದ್ರ ಮತ್ತು ಸುವೃದ್ಧಿಯಾಗಲಿ. ಇದರಿಂದ ಸಾಮಾಜಿಕ ಮತ್ತು ಕೌಟುಂಬಿಕ ಬಾಂಧವ್ಯಗಳು ಚಿರಸ್ಥಾಯಿಯಾಗುತ್ತವೆ ಎಂದರು.
ಬೈಂದೂರು ಶಾಸಕ ಗುರುರಾಜ ಗಂಟಿಹೊಳಿ ಇತರರು ಶ್ರೀಗಳನ್ನು ಭೇಟಿಯಾಗಿ ಆಶೀರ್ವಾದ ಪಡೆದರು. ಅಖಿಲ ಹವ್ಯಕ ಮಹಾಸಭಾದಿಂದ ಭಿಕ್ಷಾಸೇವೆ ನಡೆಯಿತು.
ಮಹಾಸಭಾದ ಅಧ್ಯಕ್ಷ ಡಾ. ಗಿರಿಧರ ಕಜೆ, ಉಪಾಧ್ಯಕ್ಷ ವೇಣು ವಿಘ್ನೕಶ, ಸದಸ್ಯ ರಮೇಶ ಹೆಗಡೆ, ಆರ್.ಜಿ. ಭಟ್ಟ ಹೊಸಾಕುಳಿ, ಸಂಯೋಜಕ ಪ್ರಮೋದ ಪಂಡಿತ, ಚಾತುರ್ವಸ್ಯ ಸಮಿತಿ ಕಾರ್ಯದರ್ಶಿ ಶ್ರೀಕಾಂತ ಪಂಡಿತ, ಮಹಾಮಂಡಲದ ಗೌರವ ಕಾರ್ಯದರ್ಶಿ ನಾಗರಾಜ ಭಟ್ಟ ಪಿದಮಲೆ, ಪ್ರಧಾನ ಕಾರ್ಯದರ್ಶಿ ಉದಯಶಂಕರ ಮಿತ್ತೂರು, ವಿವಿವಿ ಶಿಕ್ಷಣ ಸಂಯೋಜಕಿ ಅಶ್ವಿನಿ ಉಡುಚೆ, ಆಡಳಿತಾಧಿಕಾರಿ ಪ್ರಸನ್ನಕುಮಾರ ಟಿ.ಜಿ., ಹಿರಿಯ ಲೋಕಸಂಪರ್ಕಾಧಿಕಾರಿ ಜಿ.ಕೆ. ಹೆಗಡೆ ಮತ್ತಿತರರಿದ್ದರು. ಚಾತುರ್ವಸ್ಯ ನಿಮಿತ್ತ ಕುಮಟಾ ಮಂಡಲದ 200ಕ್ಕೂ ಹೆಚ್ಚಿನ ವೈದಿಕರು ಮತ್ತು ರುದ್ರಪಾಠಕರಿಂದ ಮಹಾರುದ್ರ ಹವನ ಸಂಪನ್ನವಾಯಿತು.