ಬೆಂಗಳೂರು: ಭಾರತದ ರೇಷ್ಮೆ ಇಡೀ ವಿಶ್ವದಲ್ಲೇ ನಂಬರ್ ಒನ್ ರೇಷ್ಮೆ ಎನ್ನುವ ಪ್ರಸಿದ್ಧಿ ಪಡೆಯಬೇಕು. ಇದಕ್ಕೆ ರೈತರಿಂದ ಹಿಡಿದು ವರ್ತಕರು, ರ್ತುದಾರರು ಸಹಿತ ಎಲ್ಲರೂ ಒಗ್ಗೂಡಿ ಕೆಲಸ ಮಾಡಬೇಕು ಎಂದು ಸಂಸದ ಡಾ. ಕೆ.ಸುಧಾಕರ್ ಅಭಿಪ್ರಾಯಪಟ್ಟರು.
ಕೇಂದ್ರ ರೇಷ್ಮೆ ಮಂಡಳಿಯು ಶನಿವಾರ ಕೃಷಿ ವಿವಿ ಕ್ಯಾಂಪಸ್ ಜಿಕೆವಿಕೆಯ ಡಾ. ಬಾಬು ರಾಜೇಂದ್ರಪ್ರಸಾದ್ ಅಂತಾರಾಷ್ಟ್ರೀಯ ಸಮಾವೇಶ ಕೇಂದ್ರದಲ್ಲಿ ಹಮ್ಮಿಕೊಂಡಿದ್ದ ಸಂಸ್ಥೆಯ 76ನೇ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಾವು ಯಾವ ದೇಶದ ಮೇಲೂ ಅವಲಂಬಿತ ಆಗಬೇಕಿಲ್ಲ. ಭಾರತ ಒಂದು ಖಂಡ ಇದ್ದಂತೆ, ಇಲ್ಲಿ ಉತ್ಪಾದಿಸೋ ಉತ್ಪನ್ನಗಳನ್ನ ನಾವೇ ಬಳಸುವುದಾದಲ್ಲಿ ಯಾರನ್ನೂ ಅವಲಂಬಿಸುವಂತಿಲ್ಲ. ಈ ಹಿನ್ನೆಲೆಯಿಂದಲೇ ಪ್ರಧಾನಿ ನರೇಂದ್ರ ಮೋದಿಯವರು ಸ್ವದೇಶಿ ಬಳಕೆಗೆ ಕರೆ ಕೊಟ್ಟಿದ್ದಾರೆ. ಇದಕ್ಕೆ ಪ್ರತಿಯೊಬ್ಬ ಭಾರತೀಯನೂ ಸ್ಪಂದಿಸಬೇಕಿದೆ ಎಂದರು.
ಸಂಸದ ಜಿ.ಲಕ್ಷ್ಮೀನಾರಾಯಣ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿಯವರ ವಿಕಸಿತ ಭಾರತ ದೃಷ್ಟಿಕೋನದಲ್ಲಿ ನಮ್ಮ ದೇಶ ಅಭಿವೃದ್ಧಿ ಕಾಣುತಯ್ತಿದೆ. ತಂತ್ರಜ್ಞಾನ ಆವಿಷ್ಕಾರದಲ್ಲೂ ನಮ್ಮ ದೇಶ ಮುಂದುವರಿಯುತ್ತಿದೆ, ಅಲ್ಲದೇ ಕೇಂದ್ರ ರೇಷ್ಮೆ ಮಂಡಳಿ ಕೂಡ ಸಾಧನೆಯಲ್ಲಿ ಹಾದಿಯಲ್ಲಿದೆ ಎಂದು ಶ್ಲಾಘಿಸಿದರು.
ಕಾರ್ಯಕ್ರಮದಲ್ಲಿ ಕರ್ನಾಟಕ ಸೇರಿ ವಿವಿಧ ರಾಜ್ಯಗಳ ಸಾಧಕರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಮಂಡಳಿಯ ಸದಸ್ಯ ಕಾರ್ಯದರ್ಶಿ ಪಿ.ಶಿವಕುಮಾರ್ ಹಾಗೂ ಇತರರಿದ್ದರು.
ವಿಕಸಿತ ಭಾರತ 2047ರಲ್ಲಿ ಭಾರತವು 54 ಸಾವಿರ ಮೆಟ್ರಿಕ್ ಟನ್ ರೇಷ್ಮೆ ಉತ್ಪಾದನೆ ಮಾಡುವ ಗುರಿ ಹೊಂದಿದೆ. ಇದಕ್ಕಾಗಿ ಪ್ರತಿಯೊಬ್ಬರಿಂದಲೂ ಸಹಕಾರ ಅಗತ್ಯವಾಗಿದೆ.
- ಪದ್ಮಿನಿ ಸಿಂಗ್ಲಾ, ಕೇಂದ್ರ ರೇಷ್ಮೆ ಮಂಡಳಿಯ ಜಂಟಿ ಕಾರ್ಯದರ್ಶಿ