ಮೊಳಕಾಲ್ಮೂರು: ವಿಶ್ವದ ಆರ್ಥಿಕ ಶಕ್ತಿಯುತ ಐದು ರಾಷ್ಟ್ರಗಳಲ್ಲಿ ಭಾರತ ಸ್ಥಾನ ಪಡೆದಿದೆ ಎಂದು ತಹಸೀಲ್ದಾರ್ ರೂಪಾ ಹೇಳಿದರು.
ಚಂದ್ರಯಾನ-3 ಯಶಸ್ವಿ ತಂಡದಲ್ಲಿ ಭಾಗಿಯಾಗಿದ್ದ ಮೊಳಕಾಲ್ಮೂರಿನ ಎಂ.ಒ.ಈಶ್ವರಿ ಅವರ ಕುಟಂಬ ಮಾರುತಿ ಬಡಾವಣೆಯಲ್ಲಿ ನೆಲೆಸಿದ್ದು, ಮಂಗಳವಾರ ಅವರ ನಿವಾಸಕ್ಕೆ ತೆರಳಿ ತಾಯಿ ಸರಸ್ವತಿ ಅವರಿಗೆ ಅಭಿನಂದನಾ ಪತ್ರ ನೀಡಿ ಗೌರವ ಸಮರ್ಪಣೆ ಮಾಡಿ ಮಾತನಾಡಿದರು.
ಒಂದು ಕಾಲದಲ್ಲಿ ಬಾಹ್ಯಾಕಾಶ ಸಂಸೋಧನೆಯಲ್ಲಿ ದಾಪುಗಾಲಿಡುತ್ತಿದ್ದ ಭಾರತ ವಿಜ್ಞಾನ ಮತ್ತು ತಂತ್ರಜ್ಞಾನ ಲೋಕದಲ್ಲಿ ಅದ್ವಿತೀಯ ಸಾಧನೆ ಮಾಡಿದೆ ಎಂದು ಸಂತಸ ವ್ಯಕ್ತಪಡಿಸಿದರು.
ಇಂತಹ ಸಾಧನೆಗೆ ಕಾರಣಕರ್ತರಾಗಿರುವ ವಿಜ್ಞಾನಿಗಳ ತಂಡದಲ್ಲಿ ಕಾರ್ಯನಿರ್ವಹಿಸುತ್ತಿರುವ ಈಶ್ವರಿ ಅವರು ಮೊಳಕಾಲ್ಮೂರು ತಾಲೂಕಿನವರು ಎಂಬುದು ನಮ್ಮೆಲ್ಲರ ಹೆಮ್ಮೆ. ಅವರನ್ನು ಹಾಗೂ ಕುಟುಂಬದ ಸದಸ್ಯರನ್ನು ಗೌರವಿಸುವುದು ನಮ್ಮ ಕರ್ತವ್ಯ ಎಂದರು.
ಗೌರವ ಸ್ವೀಕರಿಸಿ ಮಾತನಾಡಿದ ಸರಸ್ವತಿ, ನಮ್ಮದು ಬಡ ಕುಟುಂಬ. ಇಂತಹ ಸಂದರ್ಭ ಕುಟುಂಬದ ಆಧಾರವಾಗಿದ್ದ ನನ್ನ ಪತಿ ಹೃದಯಾಘಾತದಿಂದ ನಿಧನರಾಗಿದ್ದರು. ಬಳಿಕ ಬಹಳಷ್ಟು ಸಮಸ್ಯೆಗಳನ್ನು ಎದುಸಿದೇವು ಎಂದು ಸಂಕಷ್ಟದ ದಿನಗಳನ್ನು ನನೆದು ಭಾವುಕರಾದರು.
ಆದರೂ ಮಗಳ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹ ನೀಡುತ್ತಿದ್ದೇ. ಪರಿಣಾಮ ಅವಳು ಇಂದು ಬಹುದೊಡ್ಡ ಸಾಧನೆಯ ಒಂದು ಸದಸ್ಯಳಾಗಿರುವುದು ಹಾಗೂ ತಾಲೂಕು ಆಡಳಿತವೇ ಮನೆ ಬಾಗಿಲಿಗೆ ಬಂದು ಗೌರವಿಸುತ್ತಿರುವುದು ಜೀವನ ಸಾರ್ಥಕವಾಯಿತು ಎಂಬ ಭಾವನೆ ಮೂಡಿದೆ. ಅವಳು ಇನ್ನಷ್ಟು ಎತ್ತರಕ್ಕೆ ಬೆಳೆಯಬೇಕು. ದೇಶಕ್ಕೆ ಕೊಡುಗೆ ನೀಡಬೇಕು ಎಂಬುದು ನನ್ನ ಹಾರೈಕೆ ಎಂದು ಹೇಳಿದರು.