ಜಿಲ್ಲೆ

ಭಾರತದ ಶಕ್ತಿ ನಿರೂಪಿಸಿದ ಕರೊನಾ : ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಸಂತಸ

ಚಿಕ್ಕಬಳ್ಳಾಪುರ: ಜಾಗತಿಕವಾಗಿ ಕಾಡಿದ ಕರೊನಾವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರಗಳ ಪೈಪೋಟಿಯ ನಡುವೆ ಸಮರ್ಥ ರೀತಿಯಲ್ಲಿ ಎದುರಿಸುವ ಮೂಲಕ ಭಾರತ ಗರಿಮೆ ಹೆಚ್ಚಾಗಿದೆ ಎಂದು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಸಂತಸ ವ್ಯಕ್ತಪಡಿಸಿದರು.

ಮಾನವ ಅಭ್ಯುದಯ ಸತ್ಯಸಾಯಿ ಪುರಸ್ಕಾರ ನೀಡಿ ಮಾತನಾಡಿ, ಕರೊನಾ ಸವಾಲು ಪ್ರಬಲ ರಾಷ್ಟ್ರಗಳಿಗೇ ದೊಡ್ಡ ತಲೆ ನೋವಾಗಿತ್ತು. ಆದರೆ, ಪ್ರಧಾನಿ ನರೇಂದ್ರ ಮೋದಿ ಸಮರ್ಥ ನಾಯಕತ್ವದಲ್ಲಿ ಭಾರತ ಸರಿಯಾದ ರೀತಿಯಲ್ಲಿ ಎದುರಿಸಿತು. ವೈದ್ಯಕೀಯ ಸೌಕರ್ಯಗಳ ಹೆಚ್ಚಳ, ವಿದೇಶಿ ಲಸಿಕೆಗಳಿಗಾಗಿ ಕಾಯದೆ ಸ್ವದೇಶಿ ಲಸಿಕೆ ಸಂಶೋಧನೆ, ಬೃಹತ್ ಆಂದೋಲನ, ಜಾಗತಿಕ ಮಟ್ಟದಲ್ಲಿ ಲಸಿಕೆ ರಫ್ತು, ವಿಶ್ವಸಂಸ್ಥೆಯ ಪ್ರಶಂಸೆಯು ದೇಶದ ಗರಿಮೆಯನ್ನು ಮತ್ತಷ್ಟು ಹೆಚ್ಚಿಸಿತು ಎಂದರು.

ಎಲ್ಲರನ್ನು ಪ್ರೀತಿಸು, ಎಲ್ಲರನ್ನು ಸತ್ಕರಿಸು ಎಂಬ ಬಾಬಾ ತತ್ವದಲ್ಲಿ ಸತ್ಯಸಾಯಿ ಸಂಸ್ಥೆಯು ಶೈಕ್ಷಣಿಕ, ಸಾಮಾಜಿಕ, ವೈದ್ಯಕೀಯ, ಸಾಂಸ್ಕೃತಿಕ ಸೇರಿ ಪ್ರತಿ ಕ್ಷೇತ್ರದಲ್ಲೂ ಮಹತ್ತರವಾದ ಕೊಡುಗೆಯನ್ನು ನೀಡುತ್ತಿದೆ. ಯುವ ಜನತೆಯನ್ನೂ ಪ್ರೋತ್ಸಾಹಿಸುತ್ತಿದೆ. ಇಂತಹ ಮನೋಭಾವನೆಯನ್ನು ಎಲ್ಲರೂ ಬೆಳೆಸಿಕೊಂಡು, ಶಕ್ತಿಗೆ ಅನುಸಾರವಾಗಿ ಸಮಾಜ ಕಲ್ಯಾಣಕ್ಕೆ ಶ್ರಮಿಸಬೇಕು ಎಂದು ಕರೆ ನೀಡಿದರು.

ಆದಿತ್ಯ ಬಿರ್ಲಾ ಎಜುಕೇಷನ್ ಟ್ರಸ್ಟ್‌ನ ಸಂಸ್ಥಾಪಕಿ ನೀರಜ್ ಬಿರ್ಲಾ ಮಾತನಾಡಿ, ಉತ್ತಮ ಸಮಾಜ ನಿರ್ಮಾಣಕ್ಕೆ ಸೂಕ್ತ ಮಾರ್ಗದರ್ಶನ ನೀಡುವ ನಿಟ್ಟಿನಲ್ಲಿ ಸತ್ಯಸಾಯಿ ಲೋಕಸೇವಾ ಸಂಸ್ಥೆಯು ಸೇವಾ ಚಟುವಟಿಕೆಯು ಸರ್ವರಿಗೂ ಪ್ರೇರಣದಾಯಕ ಎಂದರು.