ಜಿಲ್ಲೆ

ಭಾರತೀಯ ಅಂಚೆ ಇಲಾಖೆಯಿಂದ ದರ ಪರಿಷ್ಕರಣೆ: ತೂಕ, ಅಂತರ ಆಧಾರದಲ್ಲಿ ಶುಲ್ಕ

ಹರೀಶ್​​ ಕೆ.ಸಿ.

ಬೆಂಗಳೂರು: ಭಾರತೀಯ ಅಂಚೆ ಇಲಾಖೆ, ಕಾಗದ ಪತ್ರ ಮತ್ತು ಪಾರ್ಸೆಲ್ ಸೇವೆಯ ದರವನ್ನು ಪರಿಷ್ಕರಿಸಿದೆ.ಈ ಬಗ್ಗೆ ಗೆಜೆಟ್ ಅಧಿಸೂಚನೆ ಹೊರಡಿಸಲಾಗಿದ್ದು, ಅ.1ರಿಂದ ಈ ಹೊಸ ದರ ಜಾರಿಗೆ ಬರಲಿದೆ.

ಒಳನಾಡಿನ ಸ್ವೀಡ್ ಪೋಸ್ಟ್ ದರವನ್ನು 2012ರಲ್ಲಿ ಪರಿಷ್ಕರಿಸಲಾಗಿತ್ತು. ಇದೀಗ ಹೆಚ್ಚುತ್ತಿರುವ ಕಾರ್ಯಾಚರಣೆ ವೆಚ್ಚ ಪೂರೈಸಲು,ಹೊಸ ಆವಿಷ್ಕಾರದಲ್ಲಿ ಹೂಡಿಕೆ ಮಾಡುವ ನಿಟ್ಟಿನಲ್ಲಿ ಇಲಾಖೆ, ಪರಿಷ್ಕೃತ ಸುಂಕವನ್ನು ತರ್ಕಬದ್ಧವಾಗಿ ಪರಿಷ್ಕರಿರಿಸಿದೆ.ನೋಂದಣಿಯ ಮೌಲ್ಯವರ್ಧಿತ ಸೇವೆಗೆ ಪ್ರತಿ ಸ್ಪೀಡ್ ಪೋಸ್ಟ್‌ಗೆ (ಡಾಕ್ಯುಮೆಂಟ್/ಪಾರ್ಸೆಲ್) 5 ರೂ.ಜೊತೆಗೆ ಜಿಎಸ್‌ಟಿ ಶುಲ್ಕ ಇರಲಿದೆ. ‘ಒನ್‌ಟೈಮ್ ಪಾಸ್‌ವರ್ಡ್(ಒಟಿಪಿ) ವಿತರಣೆ ಮೌಲ್ಯ ವರ್ಧಿತ ಸೇವೆಗೆ ಪ್ರತಿ ಸ್ಪೀಡ್ ವಸ್ತುವಿಗೆ 5 ರೂ.ಶುಲ್ಕ, ಪ್ರತ್ಯೇಕ ಜಿಎಸ್‌ಟಿ ಇರಲಿದೆ.

ವಿದ್ಯಾರ್ಥಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಸ್ಪೀಡ್ ಪೋಸ್ಟ್ ಸುಂಕದ ಮೇಲೆ ಶೇ.10 ರಿಯಾಯಿತಿ ಕಲ್ಪಿಸಲಾಗಿದೆ. ಹೊಸದಾಗಿ ಸೇರ್ಪಡೆಯಾಗುವ ಗ್ರಾಹಕರಿಗೆ ಶೇ.5 ವಿಶೇಷ ರಿಯಾಯಿತಿ ಇರಲಿದೆ. ದಾಖಲೆ, ಪಾರ್ಸೆಲ್‌ಗಳು ಸ್ವೀಡ್ ಪೋಸ್ಟ್ ಅಡಿ ಮೌಲ್ಯವರ್ಧಿತ ಸೇವೆ ದೊರೆಯಲಿದೆ.ತೂಕ, ದೂರದ ಅಂತರದಲ್ಲಿ ದರ ವಿಧಿಸಲಾಗಿದೆ.ಗ್ರಾಹಕರ ಅಗತ್ಯ ಪೂರೈಸಲು ಸ್ವೀಡ್ ಪೋಸ್ಟ್ ಸೇವೆಗೆ ಹೆಚ್ಚಿನ ಬೇಡಿಕೆ ಬರಲಾರಂಭಿಸಿದೆ. ಬಟವಾಡೆ ಸೇವೆಯನ್ನು ಮತ್ತಷ್ಟು ಬಲಪಡಿಸಲು, ವಿಶ್ವಾಸಾರ್ಹತೆ, ಭದ್ರತೆ ಮತ್ತು ಗ್ರಾಹಕರ ಅನುಕೂಲತೆ ಹೆಚ್ಚಿಸುವ ಉದ್ದೇಶ ಹೊಂದಿರುವ ಇಲಾಖೆ, ಇನ್ನಷ್ಟು ಪರಿಣಾಮಕಾರಿಯಾಗಿ ಸೇವೆ ನೀಡಲು ಮುಂದಾಗಿದೆ.

ಈ ಹಿನ್ನೆಲೆಯಲ್ಲಿ ಓಟಿಪಿ ಆಧಾರಿತ ವಿತರಣೆ, ಆನ್‌ಲೈನ್ ಪಾವತಿ, ಎಸ್‌ಎಂಎಸ್ ಆಧಾರಿತ ಬಟವಾಡೆ, ಆನ್‌ಲೈನ್ ಬುಕಿಂಗ್ ಮತ್ತು ಬಳಕೆದಾರರಿಗೆ ನೋಂದಣಿ ಸೌಲಭ್ಯದಲ್ಲಿ ಮಹತ್ವದ ಬದಲಾವಣೆ ತರಲಾಗಿದೆ. ಈ ಮೂಲಕ ಗ್ರಾಹಕರಿಗೆ ಸುಲಭ ಮತ್ತು ವೇಗವಾಗಿ ಅಂಚೆ ಸೌಲಭ್ಯ ದೊರೆಯಲಿದೆ.ದೇಶಾದ್ಯಂತ ಪತ್ರಗಳು ಮತ್ತು ಪಾರ್ಸೆಲ್‌ಗಳ ವೇಗ, ವಿಶ್ವಾಸಾರ್ಹ ಬಟವಾಡೆ ಒದಗಿಸಲು 1986ರ ಆ.1ರಂದು ಇಲಾಖೆ, ಸ್ವೀಡ್‌ಪೋಸ್ಟ್ ಸೇವೆ ಪರಿಚಯಿಸಿತ್ತು. ಕಾಲಕ್ಕೆ ತಕ್ಕಂತೆ ಪರಿಣಾಮಕಾರಿಯಾಗಿ ಸೇವೆ ಒದಗಿಸಲು ಇಲಾಖೆ ಹೊಸ ವಿಧಾನಗಳನ್ನು ಅವಳಡಿಸಿಕೊಳ್ಳುತ್ತಾ ಬರುತ್ತಿದೆ.