ಜಿಲ್ಲೆ

ಭಾರತಕ್ಕೆ ವಿವೇಕ ಚಿಂತನೆ ಅಗತ್ಯ: ಚಕ್ರವರ್ತಿ ಸೂಲಿಬೆಲೆ

ಮಂಜುನಾಥ ತಿಮ್ಮಯ್ಯ

ಮೈಸೂರು: ಪ್ರಸ್ತುತ ಭಾರತಕ್ಕೆ ವಿವೇಕ ಚಿಂತನೆ ಅಗತ್ಯವಾಗಿದೆ ಎಂದು ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಹೇಳಿದರು.


ನಗರದ ಜಯಮ್ಮ ಗೋವಿಂದೇಗೌಡ ಕಲ್ಯಾಣ ಮಂಟಪದಲ್ಲಿ ಶನಿವಾರ ಹಮ್ಮಿಕೊಂಡಿದ್ದ ರಾಮಕೃಷ್ಣ ವಿವೇಕಾನಂದ ಭಾವಪ್ರಚಾರ ಪರಿಷತ್‌ನ 9ನೇ ವಾರ್ಷಿಕ ಸಮ್ಮೇಳನ ಎರಡನೇ ದಿನದ ಗೋಷ್ಠಿಯಲ್ಲಿ ‘ಆಧ್ಯಾತ್ಮಿಕ ರಾಷ್ಟ್ರೀಯತೆ-ಸ್ವಾಮಿ ವಿವೇಕಾನಂದರ ಪರಿಕಲ್ಪನೆ’ ಕುರಿತು ಉಪನ್ಯಾಸ ನೀಡಿದರು.


ಸ್ವಾಮಿ ವಿವೇಕಾನಂದರ ವಿಚಾರಧಾರೆ-ಚಿಂತನೆ ಮರೆತರೆ ಭಾರತಕ್ಕೆ ಭವಿಷ್ಯ ಇಲ್ಲ. ಅವರ ಪರಿಕಲ್ಪನೆಯಾದ ಆಧ್ಯಾತ್ಮಿಕ ತಳಹದಿಯ ಮೇಲೆ ರಾಷ್ಟ್ರೀಯತೆ ಬಿತ್ತಬೇಕಿದೆ. ಈ ರೀತಿಯ ರಾಷ್ಟ್ರೀಯತೆ ದೇಶಕ್ಕೆ ತುರ್ತು ಅಗತ್ಯವಿದೆ ಎಂದರು.


ಪ್ರಾದೇಶಿಕತೆ, ಭಾಷೆ, ಜಾತಿ, ಧರ್ಮದ ಹೆಸರಿನಲ್ಲಿ ದೇಶವನ್ನು ವಿಭಜನೆ ಮಾಡಲಾಗುತ್ತಿದೆ. ಇದು ದೇಶಕ್ಕೆ ಅಪಾಯ. ಎಲ್ಲರನ್ನೂ ಒಂದುಗೂಡಿಸುವ ರಾಷ್ಟ್ರೀಯತೆ ಬೇಕಾಗಿದೆ. ಇದುವೇ ವಿವೇಕಾನಂದರ ಕನಸು. ಇದರ ಆಧಾರದ ಮೇಲೆ ಹೊಸ ಭಾರತವನ್ನು ಕಟ್ಟಬೇಕಿದೆ ಎಂದರು.


ಅಧ್ಯಾತ್ಮವೇ ಭಾರತದ ಸಿದ್ಧಾಂತ. ಧರ್ಮವೇ ಭಾರತದ ಚೇತನ. ಅಧ್ಯಾತ್ಮ-ಧರ್ಮ ಎರಡರೊಂದಿಗೆ ದೇಶ ಬೆಳೆಯಬೇಕು. ರಾಷ್ಟ್ರೀಯತೆ ಭಾರತದ ರಾಜಕೀಯ ಧರ್ಮ. ಧಾರ್ಮಿಕ ಚಳವಳಿಯಿಂದ ರಾಷ್ಟ್ರೀಯತೆ ಹುಟ್ಟಿಕೊಂಡಿದೆ. ರಾಷ್ಟ್ರೀಯತೆ ಮೂಲ ಧಾರ್ಮಿಕ ಚಳವಳಿಯಾಗಿದೆ ಎಂದರು.


ವ್ಯತ್ಯಾಸ ಬೇಡ: ಉತ್ತರ ಭಾರತ ಮತ್ತು ದಕ್ಷಿಣ ಭಾರತ ಎಂದು ವಿಭಜಿಸಲಾಗುತ್ತಿದೆ. ಹಿಂದೆ ಈ ರೀತಿ ವಿಂಗಡನೆ ಆಗಿರಲಿಲ್ಲ. ಆದರೀಗ ತಾರತಮ್ಯ ಮಾಡಲಾಗುತ್ತಿದೆ. ನೀವು ಬೇರೆ, ನಾವು ಬೇರೆ ಎಂದು ಬಹಿರಂಗವಾಗಿ ಕಿಡಿಕಾರಲಾಗುತ್ತಿದೆ. ಇದು ಸರಿಯಲ್ಲ. ಶಿವ, ವಿಷ್ಣು ದೇವರು ಉತ್ತರ ಭಾರತೀಯರಿಗೂ, ದಕ್ಷಿಣ ಭಾರತೀಯರಿಗೂ ಬೇಕು. ಅವರು ಈ ದೇವರ ಮೂಲ ಆರಾಧಕರು. ದೇವರಲ್ಲಿ ಇಲ್ಲದ ವ್ಯತ್ಯಾಸ ನಮ್ಮಲ್ಲಿ ಏಕೆ ಬೇಕು? ಎಂದು ಪ್ರಶ್ನಿಸಿದರು.


ತ್ಯಾಗ-ಸೇವೆ ಈ ರಾಷ್ಟ್ರದ ಆದರ್ಶ. ಎಲ್ಲವನ್ನೂ ತ್ಯಾಗ ಮಾಡಿ ಸೇವೆ ಮಾಡಬೇಕು. ಇದರಲ್ಲಿ ಜಾತಿ, ಮತ, ಧರ್ಮ ಭೇದಭಾವ ಕಾಣಲ್ಲ. ಶ್ರೇಷ್ಠ ಎಂಬ ವ್ಯಸನವನ್ನು ಬಿಟ್ಟು ಹೋಗುತ್ತದೆ. ಕನಿಷ್ಠರೊಂದಿಗೆ ಮಾಡುವ ತಾರತಮ್ಯವೂ ನಿವಾರಣೆಯಾಗಲಿದೆ ಎಂದರು.

ವಿಭು ಅಕಾಡೆಮಿಯ ಡಾ.ವಿ.ಬಿ.ಆರತಿ ಅವರು ಇಂದಿನ ಯುವ ಜನತೆ ಎದುರಿಸುತ್ತಿರುವ ಸಾಮಾಜಿಕ ಸವಾಲುಗಳು ಕುರಿತು,

ರಾಮಕೃಷ್ಣ ನೈತಿಕ ಮತ್ತು ಆಧ್ಯಾತ್ಮಿಕ ಶಿಕ್ಷಣ ಸಂಸ್ಥೆಯ ಸಂಚಾಲಕ ಸ್ವಾಮಿ ಮಹಾಮೇಧಾನಂದಜೀ ಮಹಾರಾಜ್ ಅವರು ರಾಷ್ಟ್ರ ಜಾಗೃತಿಯ ಸ್ಫೂರ್ತಿ-ಸ್ವಾಮಿ ವಿವೇಕಾನಂದರು ಕುರಿತು ಉಪನ್ಯಾಸ ನೀಡಿದರು.

ದಾವಣಗೆರೆಯ ರಾಮಕೃಷ್ಣ ಮಿಷನ್ ಆಶ್ರಮದ ಅಧ್ಯಕ್ಷ ಸ್ವಾಮಿ ತ್ಯಾಗೀಶ್ವರಾನಂದಜೀ ಮಹಾರಾಜ್ ‘ಜೀವ ಸೇವೆಯೇ ಈಶ ಸೇವೆ’ ಕುರಿತು ವಿಚಾರ ಮಂಡಿಸಿದರು.