ವಿಜಯಪುರ: ಕುರುಬ ಕ್ರಿಶ್ಚಿಯನ್, ಬೋವಿ ಕ್ರಿಶ್ಚಿಯನ್, ಲಂಬಾಣಿ ಕ್ರಿಶ್ಚಿಯನ್... ಹೀಗೆ ಇಲ್ಲದೇ ಇರುವ ಜಾತಿಗಳನ್ನು ಸೃಷ್ಠಿಸುವ ಮೂಲಕ ರಾಜ್ಯ ಕಾಂಗ್ರೆಸ್ ಸರ್ಕಾರ ಹಿಂದು ಧರ್ಮ ಒಡೆಯುವ ಹುನ್ನಾರ ನಡೆಸಿದ್ದು, ಸೋನಿಯಾಗಾಂಧಿ ಅಣತಿಯಂತೆಯೇ ಇದೆಲ್ಲ ನಡೆಯುತ್ತಿದೆ. ಹೀಗಾಗಿ ಸೋನಿಯಾಗಾಂಧಿ ಭಾರತವನ್ನು ಕ್ರಿಶ್ಚಿಯನ್‌ಮಯ ಮಾಡಲು ಹೊರಟಿದ್ದಾರೆಂಬ ಅನುಮಾನ ಕಾಡುತ್ತಿದೆ ಎಂದು ಸಂಸದ ಗೋವಿಂದ ಕಾರಜೋಳ ವಾಗ್ದಾಳಿ ನಡೆಸಿದರು.
ಭಾರತವನ್ನು ಪೋರ್ಚುಗೀಸರು, ಡಚ್ಚರು, ಬ್ರಿಟಿಷರು ಸೇರಿದಂತೆ ಮುಸ್ಲಲ್ಮಾನರು ಸಹ ಆಳಿದ್ದಾರೆ. ಆದರೆ, ಅವರಾರೂ ಹಿಂದು ಧರ್ಮವನ್ನು ಈ ರೀತಿ ವಿಭಜಿಸಿರಲಿಲ್ಲ. ಆದರೆ, ಸಿದ್ದರಾಮಯ್ಯ ಸರ್ಕಾರ ಹಿಂದು ಧರ್ಮವನ್ನು ನುಚ್ಚು ನೂರು ಮಾಡುತ್ತಿದೆ. ಇದನ್ನು ತೀವ್ರವಾಗಿ ಖಂಡಿಸಲಾಗುವುದಲ್ಲದೇ ರಾಜ್ಯದೆಲ್ಲೆಡೆ ಹೋರಾಟ ಹಮ್ಮಿಕೊಳ್ಳಲಾಗುವುದೆಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ಅವರು ತಿಳಿಸಿದರು.
ರಾಜ್ಯದಲ್ಲಿ ಅಧಿಕಾರಕ್ಕೆ ಬಂದು ಎರಡೂವರೆ ವರ್ಷಗಳಾಗುತ್ತ ಬಂದರೂ ಒಂದೇ ಒಂದು ರೂಪಾಯಿ ಅಭಿವೃದ್ಧಿ ಕಾಮಗಾರಿಗಳಾಗಿಲ್ಲ. ಗ್ಯಾರಂಟಿ ಯೋಜನೆಗಳಿಗೆ ಎಸ್‌ಸಿಪಿ-ಟಿಎಸ್‌ಪಿ ಯೋಜನೆಗೆ ಬಳಸಬೇಕಿದ್ದ 38 ಸಾವಿರ ಕೋಟಿ ರೂಪಾಯಿ ಅನುದಾನ ಬಳಸಲಾಗಿದೆ. ದಲಿತ, ಹಿಂದುಳಿದ, ಅಲ್ಪಸಂಖ್ಯಾತ ನಾಯಕ ಎಂದುಕೊಳ್ಳುವ ಸಿಎಂ ಸಿದ್ದರಾಮಯ್ಯ ಅದೇ ಸಮುದಾಯಕ್ಕೆ ಅನ್ಯಾಯ ಮಾಡಿದ್ದಾರೆ.ಅತೀ ಹೆಚ್ಚು ಬಜೆಟ್ ಮಂಡಿಸಿದ್ದಾಗಿ ತಮ್ಮ ಬೆನ್ನು ತಾವೇ ಚಪ್ಪರಿಸಿಕೊಳ್ಳುವ ಸಿದ್ದರಾಮಯ್ಯಗೆ ತಮ್ಮದೇ ಅವಧಿಯಲ್ಲಿ ರಾಜ್ಯದ ಸಾಲ ದಾಖಲೆ ಮೆರೆದಿರುವುದು ಮರೆತಂತಿದೆ. ಹೀಗಾಗಿ ರಾಜ್ಯದ ಜನರ ದಿಕ್ಕು ತಪ್ಪಿಸಲು ಜಾತಿ ಸಮೀಕ್ಷೆ ಕೈಗೊಂಡಿದೆ ಎಂದು ಆರೋಪಿಸಿದರು.
ಈ ಹಿಂದೆ 150 ಕೋಟಿ ಖರ್ಚು ಮಾಡಿ ನಾಗಮೋಹನ ದಾಸ್ ಅವರಿಂದ ವರದಿ ಪಡೆಯಲಾಯಿತು. ಆದರೆ, ಆ ವರದಿಗೆ ಕವಡೆ ಕಾಸಿನ ಕಿಮ್ಮತ್ತು ಸಹ ನೀಡಲಿಲ್ಲ.ಇದೀಗ 420 ಕೋಟಿ ರೂಪಾಯಿ ಜಾತಿ ಸಮೀಕ್ಷೆಗಾಗಿ ಖರ್ಚು ಮಾಡಲಾಗುತ್ತಿದೆ. ಇದು ಯಾರ ಹಣ? ರಾಜ್ಯದ 29400 ಹಳ್ಳಿಗಳಲ್ಲಿ ಯಾವ ಜಾತಿ ಜನ ಎಷ್ಟಿದ್ದಾರೆ ಎಂಬ ವರದಿ ಬ್ರಿಟಿಷರ ಕಾಲದಿಂದಲೂ ಇದೆ. ಇದೀಗ ಹೊಸದಾಗಿ ಸಮೀಕ್ಷೆಗೆ ಕಾರಣವೇನು? ಯಾರನ್ನು ಮೆಚ್ಚಿಸಲು ಈ ಸಮೀಕ್ಷೆ ನಡೆಯುತ್ತಿದೆ ಎಂದು ವಾಗ್ದಾಳಿ ನಡೆಸಿದ ಕಾರಜೋಳ ಅವರು, ರಾಹುಲ್ ಗಾಂಧಿ- ಸೋನಿಯಾ ಗಾಂಧಿ ನಿರ್ದೇಶನದ ಮೇರೆಗೆ ಇದು ನಡೆಯುತ್ತಿದೆ. ಸಂಪುಟ ಸಭೆಯಲ್ಲಿ ತಮ್ಮದೇ ಪಕ್ಷದ ನಾಲ್ವರು ಮಂತ್ರಿಗಳು ತಿರುಗಿ ಬಿದ್ದಾಗ ಸಿದ್ದರಾಮಯ್ಯ ಅತ್ತಿತ್ತ ಓಡಾಡಿದರು. ಬೆಳಗಾಗುವುದರೊಳಗೆ ಅದೇನು ಹೆದರಿಸಿದರೋ ಗೊತ್ತಿಲ್ಲ ಮಂತ್ರಿಗಳೆಲ್ಲ ಸುಮ್ಮನಾದರು. ಮಂತ್ರಿಗಿರಿಯಿಂದ ವಜಾ ಮಾಡುವುದಾಗಿ ಹೇಳಿದ ಕೂಡಲೇ ಸುಮ್ಮನಾಗಿರಬಹುದೆಂದರು.
ರಾಜ್ಯದಲ್ಲಿ ನಡೆಯುತ್ತಿರುವ ಜಾತಿ ಸಮೀಕ್ಷೆ ಅವೈಜ್ಞಾನಿಕವಾಗಿದೆ. ಒಟ್ಟು 1400 ಜಾತಿ ಹುಟ್ಟು ಹಾಕಲಾಗಿದೆ. ಇಷ್ಟೊಂದು ಜಾತಿಗಳು ಎಲ್ಲಿಂದ ಬಂದವು? ಪರಿಶಿಷ್ಟ ಜಾತಿಯಲ್ಲಿ 101 ಜಾತಿಗಳಿವೆ. ಇದೀಗ 49 ಜಾತಿಗೆಳನ್ನು ಹೊಸದಾಗಿ ಸೇರ್ಪಡೆ ಮಾಡಿದ್ದಾರೆ. ಧರ್ಮ ಬದಲಿಸಿದ ಜಾತಿಗಳನ್ನು ಇರಿಸಿದ್ದಾರೆ. ಇದರಿಂದ ಹಿಂದು ಧರ್ಮಕ್ಕೆ ಧಕ್ಕೆಯಾಗಲಿದೆ. ಒಂದು ಸಲ ಒಬ್ಬ ವ್ಯಕ್ತಿ ಧರ್ಮ ಬದಲಿಸಿಕೊಂಡರೆ ಮುಗೀತು ಆತ ತನ್ನ ಪೂರ್ವಾಶ್ರಮ ಕಳೆದುಕೊಳ್ಳುತ್ತಾನೆ. ಇಂಥ ಮೋಸದ ಆಟ ನಿಲ್ಲಿಸಬೇಕು. ಮಾಡುವುದಾದರೆ ವೈಜ್ಞಾನಿಕವಾಗಿ ಸಮೀಕ್ಷೆ ಮಾಡಿ. ನಾವು ಸಾಮಾಜಿಕ ನ್ಯಾಯದ ಪರವಾಗಿದ್ದೇವೆ. ಜಾತಿಗಿಂತಲೂ ಬಡತನಕ್ಕೆ ಆದ್ಯತೆ ಕೊಡಿ. ಹಾಗೊಂದು ವೇಳೆ ಇದನ್ನೇ ಮುಂದುವರಿಸಿದ್ದೇ ಆದರೆ ರಾಜ್ಯದಲ್ಲೇ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಸಿದರು.
ಜಿಲ್ಲಾಧ್ಯಕ್ಷ ಗೋವಿಂದ ಕಾರಜೋಳ, ವಿಧಾನ ಪರಿಷತ್ ಮಾಜಿ ಸದಸ್ಯ ಅರುಣ ಶಹಾಪುರ, ಸಂಜಯ ಪಾಟೀಲ ಕನಮಡಿ, ಉಮೇಶ ಕಾರಜೋಳ, ರವೀಂದ್ರ ಲೋಣಿ, ಶಿಲ್ಪಾ ಕುದರಗೊಂಡ, ಸ್ವಪ್ನ ಕಣ್ಮುಚನಾಳ, ವಿಜಯ ಜೋಷಿ ಮತ್ತಿತರರಿದ್ದರು.