ಪ್ರಮುಖ ಮುಖ್ಯಾಂಶಗಳು
ಮಂಗಳೂರು: ಬೇರೆ ಬೇರೆ ದೇಶಗಳನ್ನು ಅವಲೋಕಿಸಿದಾಗ ಭಾರತವು ಜಾಗತಿಕವಾಗಿ ಸುಸ್ಥಿರವಾಗಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಡಾ. ರಾಧಾಮೋಹನ್ ದಾಸ್ ಅಗರ್ವಾಲ್ ಹೇಳಿದರು.
ಅವರು ಬಿಜೆಪಿ ದಕ್ಷಿಣ ಕನ್ನಡ ಜಿಲ್ಲಾ ವತಿಯಿಂದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಆಡಳಿತದ ಐತಿಹಾಸಿಕ ಮೈಲಿಗಲ್ಲುಗಳ ಬಗ್ಗೆ ಶನಿವಾರ ಮಂಗಳೂರಿನ ಪಾಲೇಮಾರ್ ಗಾರ್ಡನ್‌ನಲ್ಲಿ ನಡೆದ "ವಿಕಸಿತ ಭಾರತ ಸಂಕಲ್ಪ ಸಮಾವೇಶ" ಉದ್ಘಾಟಿಸಿ ಮಾತನಾಡಿದರು.
ಜಾಗತಿಕವಾಗಿ ಬೇರೆ ದೇಶಗಳ ಸ್ಥಿತಿ ಹದಗೆಟ್ಟು ಹೋಗಿದೆ. ಆದರೆ ಇಲ್ಲಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಭಾರತವನ್ನು ಪ್ರಗತಿಯ ಕಡೆಗೆ ಒಯ್ಯುತ್ತಿದ್ದಾರೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಇಂಧನಗಳ ಬೆಲೆ ಏರಿಕೆಯಾಗಿದ್ದರೂ, ಭಾರತದಲ್ಲಿ ಅಷ್ಟೇನೂ ಹೆಚ್ಚಿನ ಏರಿಕೆ ಆಗಿಲ್ಲ. ದೇಶದ ಆರ್ಥಿಕತೆಯೂ ಬಲಿಷ್ಠವಾಗಿದೆ ಎಂದರು.
ಉತ್ಪಾದನಾ ಕ್ಷೇತ್ರವೂ ಪ್ರಬಲ
ಸೇವೆ ಮತ್ತು ಉತ್ಪಾದನಾ ಕ್ಷೇತ್ರದಲ್ಲೂ ಭಾರತ ಉತ್ತಮ ಪ್ರಗತಿ ಸಾಧಿಸುತ್ತಿದೆ. ಇದು ದೇಶದ ಆರ್ಥಿಕತೆ, ಉದ್ಯೋಗ ಸೃಷ್ಟಿಯಲ್ಲಿ ಪೂರಕವಾಗಲಿದೆ. ಕೇಂದ್ರ ಸರ್ಕಾರ ಎಲ್ಲಾ ಕ್ಷೇತ್ರದ ಅಭಿವೃದ್ಧಿಗೆ ಯೋಜನೆಗಳನ್ನು ರೂಪಿಸಿ ಸಮಗ್ರವಾಗಿ ಅಭಿವೃದ್ಧಿ ಮಾಡುತ್ತಿದೆ. ಸಾಮಾನ್ಯ ನಾಗರಿಕರಿಗೆ ವಿವಿಧ ಯೋಜನೆಗಳ ಮೂಲಕ ಸುಧಾರಣಾ ಕಾರ್ಯ ಮಾಡಲಾಗುತ್ತಿದೆ. ಪರಿಣಾಮ ಸಾಮಾನ್ಯರ, ಮಧ್ಯಮ ವರ್ಗದ ಜನರ ಜೀವನ ಸುಧಾರಿಸಿದೆ ಎಂದರು.
ಭಾರತ ವೇಗವಾಗಿ ಅಭಿವೃದ್ಧಿ
ಸಂಸದ ಕ್ಯಾ. ಬ್ರಿಜೇಶ್ ಚೌಟ ಅಧ್ಯಕ್ಷತೆ ವಹಿಸಿ ಮಾತನಾಡಿ, ನರೇಂದ್ರ ಮೋದಿ ಅವರು ಪ್ರಧಾನಿಯಾದ ಬಳಿಕ ಭಾರತ ವೇಗವಾಗಿ ಅಭಿವೃದ್ಧಿ ಪಥದತ್ತ ಸಾಗುತ್ತಿದೆ. 2047ರ ವಿಕಸಿತ ಭಾರತ ಕಲ್ಪನೆಗೆ ಹೊಸ ಅಡಿಪಾಯ ಹಾಕಿದ್ದಾರೆ. ಹೆದ್ದಾರಿಗಳು ಭಾರಿ ವೇಗದಲ್ಲಿ ಅಭಿವೃದ್ಧಿಗೊಳ್ಳುತ್ತಿದ್ದು, ಇಲ್ಲಿನ ಬಿ.ಸಿ.ರೋಡ್-ಬೆಂಗಳೂರು ಹೆದ್ದಾರಿಯನ್ನು ಮುಂದಕ್ಕೆ ಎಕ್ಸ್‌ಪ್ರೆಸ್ ವೇ ಮಾಡಲು ಚಿಂತಿಸಲಾಗಿದ್ದು, ಇದಕ್ಕಾಗಿ ಕಾರ್ಯಯೋಜನೆ ಪ್ರಗತಿಯಲ್ಲಿದೆ. ಮಂಗಳೂರು ನಗರದಲ್ಲೂ ಅಭಿವೃದ್ಧಿ ಕಾರ್ಯಗಳಿಗೆ ವೇಗ ನೀಡಲಾಗುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಮೋದಿ ಸಾಧನೆಯ ಪುಸ್ತಕವನ್ನು ಬಿಡುಗಡೆಗೊಳಿಸಲಾಯಿತು. ಇಬ್ಬರು ವಿಶೇಷ ಚೇತನರಿಗೆ ವೀಲ್ ಚೇರ್ ವಿತರಿಸಲಾಯಿತು. ಗಾರ್ಡನ್ ಆವರಣದಲ್ಲಿ ಗಿಡಗಳನ್ನು ನೆಡಲಾಯಿತು. ವಿವಿಧ ಕ್ಷೇತ್ರದ ಸಾಧಕರುಗಳಾದ ರಾಜೇಶ್ ಹೊಳ್ಳ, ಸುನಿಲ್ ಪೈ, ಬಾಬು ಶೆಟ್ಟಿ, ವತ್ಸಲಾ ಕಾಮತ್, ಸುಂದರ ಶೆಟ್ಟಿಗಾರ್, ಜನಾರ್ದನ ಕರ್ಕೇರ, ಪದ್ಮನಾಭ ಅಂಚನ್, ನಾಗಮ್ಮ, ಶೇಷಪ್ಪ, ಧನಲಕ್ಷ್ಮಿ ಪೂಜಾರಿ, ದಯಾನಂದ ಕತ್ತಲ್‌ಸಾರ್, ವನಜಾ ಖಾರ್ವಿ, ಕೃಷ್ಣ ಪಡ್ರೆಂಬೈಲು ಮೊದಲಾದವರನ್ನು ಸನ್ಮಾನಿಸಲಾಯಿತು. ಹಣ್ಣಿನ ಗಿಡಗಳನ್ನು ವಿತರಿಸಲಾಯಿತು. ನರೇಂದ್ರ ಮೋದಿ ಸರ್ಕಾರದ 12 ವರ್ಷದ ಸಾಧನೆಯ ಪುಸ್ತಕ ಬಿಡುಗಡೆ ಮಾಡಲಾಯಿತು. ಮಾಜಿ ಸಚಿವ ಕೃಷ್ಣ ಜೆ. ಪಾಲೇಮಾರ್ ಅವರು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಡಾ. ರಾಧಾಮೋಹನ್ ದಾಸ್ ಅಗರ್ವಾಲ್ ಅವರನ್ನು ಸನ್ಮಾನಿಸಿದರು.
ಶಾಸಕರುಗಳಾದ ವೇದವ್ಯಾಸ ಕಾಮತ್, ಡಾ. ವೈ. ಭರತ್ ಶೆಟ್ಟಿ, ಉಮಾನಾಥ ಕೋಟ್ಯಾನ್, ಭಾಗೀರಥಿ ಮುರುಳ್ಯ, ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು, ಹರೀಶ್ ಪೂಂಜ, ವಿಧಾನ ಪರಿಷತ್ ಸದಸ್ಯರುಗಳಾದ ಪ್ರತಾಪಸಿಂಹ ನಾಯಕ್, ಕಿಶೋರ್ ಕುಮಾರ್ ಪುತ್ತೂರು, ಮಾಜಿ ಸಚಿವರುಗಳಾದ ಕೃಷ್ಣ ಜೆ. ಪಾಲೇಮಾರ್, ಎಸ್. ಅಂಗಾರ, ಮಾಜಿ ಶಾಸಕ ಮೊನಪ್ಪ ಭಂಡಾರಿ, ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ಮುಖಂಡರುಗಳಾದ ಪ್ರೇಮಾನಂದ ಶೆಟ್ಟಿ, ಕರುಣಾಕರ ಕಾಸಲೆ, ಬಾಲಕೃಷ್ಣ ಭಟ್, ಜಯಂತ ಕೋಟ್ಯಾನ್ ಮತ್ತಿತರರು ಉಪಸ್ಥಿತರಿದ್ದರು.