ಜಿಲ್ಲೆ

ಜಾಗತಿಕ ರಾಷ್ಟ್ರಗಳಲ್ಲಿ ಆರ್ಥಿಕವಾಗಿ ಭಾರತ ಸದೃಢ: ಶಶಿಧರ್ ಡೋಂಗ್ರೆ ಅಭಿಪ್ರಾಯ

ಮೈಸೂರು: ಜಾಗತಿಕ ರಾಷ್ಟ್ರಗಳು ಆರ್ಥಿಕವಾಗಿ ಶಕ್ತಿಗುಂದಿದ್ದರೂ ಭಾರತ ಮಾತ್ರ ನಿಜವಾಗಿಯೂ ಪ್ರಕಾಶಿಸುತ್ತಿದೆ ಎಂದು ಮೈಸೂರಿನ ಎಲ್ ಆ್ಯಂಡ್ ಟಿ ಟೆಕ್ನಾಲಜಿ ಸರ್ವೀಸಸ್‌ನ ಜಾಗತಿಕ ಮುಖ್ಯಸ್ಥ ಶಶಿಧರ್ ಡೋಂಗ್ರೆ ಅಭಿಪ್ರಾಯಪಟ್ಟರು.
ನಗರದ ವಿದ್ಯಾವರ್ಧಕ ಪ್ರಥಮ ದರ್ಜೆ ಕಾಲೇಜಿನಲ್ಲಿ ಶುಕ್ರವಾರ ಆಯೋಜಿಸಿದ್ದ ರಾಜ್ಯಮಟ್ಟದ ವಿದ್ವತ್-2ಕೆ24 ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಜಿಡಿಪಿಯಲ್ಲಿ ಜಾಗತಿಕವಾಗಿ ನಾವು 3ನೇ ಸ್ಥಾನದಲಿದ್ದು, ದೇಶದಲ್ಲಿ ಬಹಳಷ್ಟು ಉದ್ಯೋಗಾವಕಾಶಗಳು ಯುವಜನರಿಗೆ ದೊರೆಯುತ್ತಿವೆ. ವಿಶ್ವದ ಇತರ ರಾಷ್ಟ್ರಗಳು ಆರ್ಥಿಕವಾಗಿ ಸಂಕಷ್ಟದಲ್ಲಿದ್ದರೂ, ಭಾರತ ಮಾತ್ರ ಆರ್ಥಿಕವಾಗಿ ಸದೃಢವಾಗಿದೆ ಎಂದು ಹೇಳಿದರು.
ವಿದ್ವತ್ ಎಂಬುದು ವಿದ್ಯಾರ್ಥಿಗಳ ಕಾರ್ಯಕ್ರಮವಾಗಿದ್ದು, ಅವರಲ್ಲಿರುವ ಕ್ರಿಯಾಶೀಲತೆ, ಕೌಶಲ ಪ್ರದರ್ಶಿಸುವುದಕ್ಕೆ ಈ ವೇದಿಕೆ ಅತ್ಯಂತ ಸೂಕ್ತವಾಗಿದೆ. ಅವರ ಭವಿಷ್ಯಕ್ಕೆ ದಿಕ್ಸೂಚಿಯಾಗಲಿದೆ ಎಂದರು.
ಇಂದಿನ ಯುವಪೀಳಿಗೆ ಹಿರಿಯರಿಂದ ಸಮಯ ಪಾಲನೆ, ಜೀವನೋತ್ಸಾಹ ಮುಂತಾದ ಉತ್ತಮ ಅಂಶಗಳನ್ನು ನೋಡಿ, ಕೇಳಿ ತಿಳಿದು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಬೆಂಗಳೂರಿನ ಕ್ವಾಲಿಟಿ ರೋಸಲ್‌ಟೆಕ್ ಸಿಸ್ಟಮ್ಸ್ ಡಿವಿಸನ್ ಆಫ್ ರೋಸಲ್ ಇಂಡಿಯಾ ಲಿಮಿಟೆಡ್‌ನ ಉಪಾಧ್ಯಕ್ಷ ಬಿ.ಪಿ.ಪ್ರಸಾದ್ ಮಾತನಾಡಿ, ಇಂದಿನ ಆಧುನಿಕ ಯುಗದಲ್ಲಿ ಮನುಷ್ಯನಿಗಿಂತಲೂ ಕೃತಕ ಬುದ್ಧಿಮತ್ತೆ ಹೆಚ್ಚೆಚ್ಚು ಬಳಕೆಯಾಗುತ್ತಿದ್ದು ವಿದ್ಯಾರ್ಥಿಗಳಲ್ಲಿನ ಕ್ರಿಯಾಶೀಲತೆ, ಯೋಚನಾ ಸಾಮರ್ಥ್ಯವನ್ನು ಇದು ಗಣನೀಯವಾಗಿ ಕ್ಷೀಣಿಸುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಹೀಗಾಗಿ ಪ್ರತಿಯೊಬ್ಬ ವ್ಯಕ್ತಿಗೂ ಕಲಿಕೆ ಎನ್ನುವುದು ನಿರಂತರವಾಗಿದ್ದು. ಕಾಲಕಾಲಕ್ಕೆ ದೈನಂದಿನ ಆಗುಹೋಗುಗಳಿಗೆ ತಮ್ಮನ್ನು ತಾವು ಒಡ್ಡಿಕೊಳ್ಳುವ ಮೂಲಕ ಕೌಶಲ ಬೆಳೆಸಿಕೊಳ್ಳಬೇಕು. ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಕೇವಲ ಪಠ್ಯಾಧಾರಿತ ಶಿಕ್ಷಣಕ್ಕೆ ಆದ್ಯತೆ ನೀಡದೆ ವೈಯಕ್ತಿಕವಾಗಿ 6 ತಿಂಗಳ ಕೌಶಲಾಧಾರಿತ ತರಬೇತಿ ನೀಡಿ ಪಠ್ಯೇತರ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸುವುದರ ಮೂಲಕ ಪ್ರತಿಯೊಬ್ಬ ವಿದ್ಯಾರ್ಥಿಯೂ ಜಾಗತಿಕ ಸ್ಪರ್ಧೆ ಎದುರಿಸಲು ಸಜ್ಜು ಮಾಡಬೇಕು ಎಂದು ಸಲಹೆ ನೀಡಿದರು.
ಕಾಲೇಜಿನ ಪ್ರಾಂಶುಪಾಲ ಡಾ.ಎಸ್.ಮರೀಗೌಡ ಮಾತನಾಡಿ, 2007ರಲ್ಲಿ ಕಾಲೇಜು ಮಟ್ಟದಲ್ಲಿ ಆರಂಭವಾದ ವಿದ್ವತ್ ಮುಂದಿನ ವರ್ಷಗಳಲ್ಲಿ ವಿಶ್ವವಿದ್ಯಾಲಯ, ಜಿಲ್ಲಾ ಮಟ್ಟಕ್ಕೆ ವಿಸ್ತರಣೆಯಾಗಿತ್ತು. ಈಗ ರಾಜ್ಯಮಟ್ಟದ ಕಾರ್ಯಕ್ರಮವಾಗಿ ಬದಲಾವಣೆಯಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಒಟ್ಟು ಸಾಂಘಿಕ, ಅನುಸಾಂಘಿಕವೆಂಬ 15 ವಿವಿಧ ಸ್ಪರ್ಧೆಗಳನ್ನು ವಿದ್ಯಾರ್ಥಿಗಳಿಗಾಗಿ ಏರ್ಪಡಿಸಲಾಗಿದೆ. ಅವರಲ್ಲಿರುವ ಕೌಶಲ ಹಾಗೂ ಸಾಮರ್ಥ್ಯ ಹೊರಹೊಮ್ಮಿಸುವ ಚಿಮ್ಮು ಹಲಗೆಯಂತೆ ನಮ್ಮೀ ಕಾರ್ಯಕ್ರಮ ಪ್ರತಿ ವರ್ಷವೂ ನಡೆಯುತ್ತಾ ಬಂದಿದ್ದು ಪ್ರಸ್ತುತ 16ನೇ ಆವೃತ್ತಿಯಾಗಿದ್ದು ಇದರ ಸದುಪಯೋಗ ಪಡೆದುಕೊಳ್ಳುವಂತೆ ಸ್ಪರ್ಧಿಗಳಿಗೆ ತಿಳಿಸಿದರು.
ಸಂಸ್ಥೆ ಅಧ್ಯಕ್ಷ ಗುಂಡಪ್ಪಗೌಡ ಅಧ್ಯಕ್ಷತೆ ವಹಿಸಿದ್ದರು. ವಿದ್ಯಾವರ್ಧಕ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಪಿ.ವಿಶ್ವನಾಥ್, ಕೋಶಾಧ್ಯಕ್ಷ ಶ್ರೀಶೈಲರಾಮಣ್ಣವರ್, ಕಾಲೇಜು ನಿರ್ವಹಣಾ ಮಂಡಳಿ ಅಧ್ಯಕ ಟಿ.ನಾಗರಾಜು ಇತರರು ಇದ್ದರು.