ಮುಂಡರಗಿ: ಭಾರತದ ಮಣ್ಣಿನ ಕಣಕಣದಲ್ಲೂ ಗುರುತತ್ವದ ಪರಂಪರೆ ಇದೆ. ಭಾರತ ದೇಶ ಗುರು ಪರಂಪರೆಯ ದೇಶವಾಗಿದೆ. ಮನುಷ್ಯನಿಗೆ ಗುರುವಿನ ಬೋಧನೆ ಅವಶ್ಯಕ ಎಂದು ಶ್ರೀ ನಿಜಗುಣಪ್ರಭು ತೋಂಟದಾರ್ಯ ಸ್ವಾಮೀಜಿ ಹೇಳಿದರು.
ಪಟ್ಟಣದ ಜಗದ್ಗುರು ತೋಂಟದಾರ್ಯ ಶಾಖಾಮಠದಲ್ಲಿ ಬುಧವಾರ ಆಯೋಜಿಸಿದ್ದ ವಿಶ್ವಧರ್ಮ ಪ್ರವಚನದಲ್ಲಿ ಮಾತನಾಡಿದ ಅವರು, ಭಾರತಕ್ಕೆ ಜ್ಞಾನದ ಕೊರತೆಯಿಲ್ಲ, ಮಾರ್ಗದರ್ಶಕರ ಕೊರತೆ ಇಲ್ಲ, ಜನಸಂಖ್ಯೆ ಕೊರತೆಯೂ ಇಲ್ಲ. ಆದರೆ ದೇಶದಲ್ಲಿ ಗುರುತತ್ವವನ್ನು ಅನುಷ್ಠಾನಗೊಳಿಸುವ ಜನರ ಸಂಖ್ಯೆ ಬಹಳ ಕಡಿಮೆ ಇದೆ.
ಮನುಷ್ಯ ಪರಿಪೂರ್ಣತೆ ಹೊಂದಲು ತಾಯಿ, ಪ್ರಾಥಮಿಕ ಶಾಲಾ ಶಿಕ್ಷಕ, ಜೀವನದ ಅನುಭಾವದಲ್ಲಿ ಆಧ್ಯಾತ್ಮದ ದಾರಿಯಲ್ಲಿ ನಡೆಸುವಂತಹ ಗುರು ಈ ಮೂವರು ಜೀವನದಲ್ಲಿ ಅತ್ಯವಶ್ಯಕ ಎಂದರು.
ಆತ್ಮವನ್ನು ವಿಕಾಸ ಮಾಡಿಕೊಂಡರೆ ಶರೀರ ಮತ್ತು ಮನಸಿಗೆ ಭವಿಷ್ಯವಿದೆ. ಶರೀರಕ್ಕೆ ಶರಣರು ಕಾಯಕ ಧರ್ಮ ಸೂಚಿಸಿದರು.
ಶರಣರು ಆತ್ಮ, ಭಾವದ ಭಾಗದ ಕಡೆಗೆ ಹೋಗಲಿಲ್ಲ, ಕರ್ಮವಾದವನ್ನು ಒಪ್ಪಲಿಲ್ಲ. ಜಾತಿ, ನೀತಿಯಿಂದ ಗುರುತ್ವ ಬರುವುದಿಲ್ಲ, ಆಧ್ಯಾತ್ಮದಿಂದ ಗುರುತ್ವ ಬರುತ್ತದೆ. ಜಾತಿಯಿಂದ ಗುರುತ್ವ ಹೇಳುವುದು ಅಜ್ಞಾನ. ಖಾವಿ ಹಾಕಿದವರೆಲ್ಲ ಗುರುಗಳಲ್ಲ.
ಅರಿವು, ಆಚಾರ, ಅನುಭಾವ ಇದ್ದರೆ ಮಾತ್ರ ಗುರು. ಅರಿವೇ ಗುರು, ಆಚಾರವೇ ಲಿಂಗ, ಅನುಭಾವವೇ ಜಂಗಮ. ಶರಣರು ವಿಜ್ಞಾನ ಸಮ್ಮತವಾದ ಆಚಾರವನ್ನು ತಂದರು ಎಂದರು.