ವಿಜಯಪುರದ ಬಿಎಲ್​ಡಿಇ ಸಂಸ್ಥೆಯ ವಚನ ಪಿತಾಮಹ ಡಾ. ಫ.ಗು. ಹಳಕಟ್ಟಿ ಇಂಜಿನಿಯರಿಂಗ್​ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಐಇಇಇ ಇನ್ನೊವ&2024 ಕಾರ್ಯಕ್ರಮವನ್ನು ಸಚಿವ ಎಂ.ಬಿ. ಪಾಟೀಲ ಉದ್ಘಾಟಿಸಿದರು. ಸಿಮ್​ ವಿ ಮೆಂಗ್​, ಶ್ರೀನಿವಾಸನ್​, ರವಿ ಹೊಸಮನಿ, ಡಾ. ಪ್ರಶಾಂತ ಮಿಶ್ರಾ ಮತ್ತಿತರರಿದ್ದಾರೆ. 
ಜಿಲ್ಲೆ

ಭಾರತ ಯುವ ಶಕ್ತಿಯ ಕಣಜ

ವಿಜಯಪುರ: ನಮ್ಮ ಉತ್ತರ ಕರ್ನಾಟಕದ ಯುವಕರು ಹೆಚ್ಚು ಪ್ರತಿಭಾವಂತರು. ತಮಗೆ ವಹಿಸಿದ ಕಾರ್ಯವನ್ನು ಶ್ರದ್ಧೆ, ಪ್ರಾಮಾಣಿಕತೆ ಹಾಗೂ ನಿಯತ್ತಿನಿಂದ ಮಾಡುತ್ತಾರೆ. ಅವರಿಗೆ ಆಂಗ್ಲಭಾಷೆಯ ಸಂವಹನ ಕುರಿತು ಜಾಗೃತಿ ಮೂಡಿಸುವ ಜತೆಗೆ ಬೃಹತ್​ ಉದ್ಯೋಗ ಮೇಳ ಆಯೋಜಿಸಿ ಉದ್ಯೋಗ ಒದಗಿಸಲಾಗುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಂ.ಬಿ. ಪಾಟೀಲ ಹೇಳಿದರು.

ಶುಕ್ರವಾರ ನಗರದ ಬಿಎಲ್​ಡಿಇ ಸಂಸ್ಥೆಯ ವಚನ ಪಿತಾಮಹ ಡಾ. ಫ.ಗು. ಹಳಕಟ್ಟಿ ಇಂಜಿನಿಯರಿಂಗ್​ ಕಾಲೇಜಿನಲ್ಲಿ ನಡೆಯುತ್ತಿರುವ ಐಇಇಇ&ಇನ್ನೊವ&2024 ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಭಾರತ ಹೇರಳವಾದ ಪ್ರಾಕೃತಿಕ ಸಂಪನ್ಮೂಲ ಮತ್ತು ಯುವ ಶಕ್ತಿಯ ಕಣಜವಾಗಿದೆ. ಇಲ್ಲಿನ ಯುವಕರು ಮಾತಿಗಿಂತ ಕಾಯಕದ ಮೂಲಕ ಅಭಿವೃದ್ಧಿಗೆ ಅವರದೇ ಆದ ಕೊಡುಗೆ ನೀಡುತ್ತಿದ್ದಾರೆ ಎಂದು ತಿಳಿಸಿದರು.

ಅಭಿವೃದ್ಧಿ ವಿಚಾರದಲ್ಲಿ ಬೆಂಗಳೂರು, ಸಿಂಗಾಪುರ ಜೊತೆ ಆರೋಗ್ಯಯುತ ಸ್ಪರ್ಧೆ ಮಾಡುತ್ತಿದೆ. ರಾಜ್ಯ ಸರ್ಕಾರ ಬೆಂಗಳೂರು ಹೊರತು ಪಡಿಸಿ ಬಿಯಾಂಡ್​ ಬೆಂಗಳೂರು ಯೋಜನೆಯಡಿ ಕೈಗಾರಿಕೆಗಳಿಗೆ ಉತ್ತೇಜನ ನೀಡುವ ಮೂಲಕ ರಾಜ್ಯದ ಇತರೆ ಜಿಲ್ಲೆಗಳಿಗೂ ಆದ್ಯತೆ ನೀಡುತ್ತಿದೆ ಎಂದು ತಿಳಿಸಿದರು.

ದೇಶ& ವಿದೇಶಗಳ ಹೆಸರಾಂತ ಉದ್ಯಮ ಮತ್ತು ಉದ್ಯಮಿಗಳನ್ನು ಕರ್ನಾಟಕದಲ್ಲಿಯೇ ಹೂಡಿಕೆ ಮಾಡಿ ಉತ್ಪಾದನೆಗೆ ಆಹ್ವಾನ ನೀಡುತ್ತಿದ್ದೇವೆ. ಬೆಂಗಳೂರು ಐಟಿ ರಾಜಧಾನಿಯಾಗಿದ್ದು, ಏರೊಸ್ಪೇಸ್​ನಲ್ಲಿಯೂ ಮುಂಚೂಣಿಯಲ್ಲಿದೆ. ಭಾರತದಲ್ಲಿ ಯುವಕರ ಸಂಖ್ಯೆ ಹೆಚ್ಚಾಗಿದ್ದು, ಅದು ನಮ್ಮ ದೇಶದ ಶಕ್ತಿಯಾಗಿದೆ. ಏರೊಸ್ಪೇಸ್​ ವಿಭಾಗದಲ್ಲಿ ಕರ್ನಾಟಕ ಮುಂಚೂಣಿಯಲ್ಲಿದೆ. ಐಟಿಯಲ್ಲಿ ಮೊದಲ ಸ್ಥಾನದಲ್ಲಿದ್ದೇವೆ. ಮಶೀನ್​ ಟೂಲ್ಸ್​ನಲ್ಲಿ ನಂಬರ್​ 1 ಸ್ಥಾನದಲ್ಲಿದ್ದೇವೆ. ಉದ್ಯಮಗಳಿಗೆ ಹಸಿರು ವಿದ್ಯುತ್​ ಭವಿಷ್ಯದ ವಿದ್ಯುತ್​ ಶಕ್ತಿಯಾಗಿದೆ. ಮಿನರಲ್ಸ್​ನಲ್ಲಿ ನಾವು ಮುಂಚೂಣಿಯಲ್ಲಿದ್ದೇವೆ ಎಂದರು.

ರಾಜ್ಯದಲ್ಲಿ ಅತೀ ದೊಡ್ಡ ಸ್ಟೀಲ್​ ಕಾರ್ಖಾನೆ ಜಿಂದಾಲ್​ ಕೂಡ ಇದೆ. ಅಂತಾರಾಷ್ಟ್ರೀಯ ಖ್ಯಾತಿಯ ಕೈಗಾರಿಕೆಗಳು ನಮ್ಮಲ್ಲಿದ್ದು, ಇಲ್ಲಿನ ವೈದ್ಯಕಿಯ, ಇಂಜಿನಿಯರಿಂಗ್​, ಫಾರ್ಮಸಿ ಕಾಲೇಜುಗಳು ಹೊರ ರಾಜ್ಯಗಳಷ್ಟೇ ಅಲ್ಲ ವಿದೇಶಗಳಿಂದಲೂ ವಿದ್ಯಾರ್ಥಿಗಳನ್ನು ಓದಲು ಆಕರ್ಷಿಸುತ್ತಿವೆ ಎಂದು ಅವರು ಹೇಳಿದರು.

ಸಿಂಗಾಪುರ ರೈಲ್​ ಟೆಸ್ಟ್​ ಸೆಂಟರ್​ ಹಿರಿಯ ನಿರ್ದೇಶಕ ಸಿಮ್​ ವಿ. ಮೆಂಗ್​ ಮಾತನಾಡಿ, ತಮ್ಮ ದೇಶದಲ್ಲಿರುವ ರೈಲ್ವೆ ಜಾಲ, ಅದರ ಉತಷ್ಟ ತಾಂತ್ರಿಕತೆಯ ಕುರಿತು ಮಾತನಾಡಿದರು. ಸ್ಯಾಮಸಂಗ್​ ರಿಸರ್ಚ್​ ಹಿರಿಯ ನಿರ್ದೇಶಕ ಶ್ರೀನಿವಾಸನ್​ ಸ್ವಾಮಿನಾಥನ್​ ಮಾತನಾಡಿದರು.

ಐಇಇಇ& ಎನ್​ಕೆಎಸ್​ಎಸ್​ ಅಧ್ಯ ಪ್ರೊ. ರವಿ ಹೊಸಮನಿ, ಐಇಇಇ ಇಂಡಸ್ಟ್ರಿಯ ಡಾ. ಪ್ರಶಾಂತ ಮಿಶ್ರಾ, ಬಿಎಲ್​ಡಿಇ ಡೀಮ್ಡ್​ ವಿವಿ ಸಮಕುಲಾಧಿಪತಿ ಡಾ. ವೈ.ಎಂ. ಜಯರಾಜ, ಕಾಲೇಜಿನ ಡೈರೆಕ್ಟರ್​ ಡಾ. ವಿ.ಜಿ. ಸಂಗಮ, ಸಮ್ಮೇಳನದ ಆಯೋಜಕ ಡಾ. ವಿರೇಶ ಗೋನಾಳ ಮತ್ತಿತರರಿದ್ದರು. ಡಾ. ಅನುರಾಧಾ ಟಂಕಸಾಲಿ ನಿರೂಪಿಸಿದರು. ಡಾ. ಪುಷ್ಪಾ ಬಿ. ಪಾಟೀಲ ವಂದಿಸಿದರು.