ಜಿಲ್ಲೆ

ಭಾರತ ಡೇಟಾ ಸಾರ್ವಭೌಮತ್ವ ಸಾಧಿಸಬೇಕಿದೆ: ಸಾಯಿರಾಂ ಭಟ್

ಆರ್.ಕೃಷ್ಣ

ಮೈಸೂರು: ಆಧುನಿಕ ತಂತ್ರಜ್ಞಾನದಲ್ಲಿ ಮುಂದುವರಿದಿದ್ದರೂ ಭಾರತ ಇತರ ರಾಷ್ಟ್ರಗಳಂತೆ ಡೇಟಾ ಕೇಂದ್ರವನ್ನು ಹೊಂದಿಲ್ಲ. ನಮ್ಮ ದೇಶ ಕೂಡ ಡೇಟಾ ಸಾರ್ವಭೌಮತ್ವ ಸಾಧಿಸಬೇಕಿದೆ ಎಂದು ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಸಾಯಿರಾಂ ಭಟ್ ಹೇಳಿದರು.
ಜೆಎಸ್‌ಎಸ್ ಕಾನೂನು ಕಾಲೇಜಿನಲ್ಲಿ ಶನಿವಾರ ಆಯೋಜಿಸಿದ್ದ ಕೃತಕ ಬುದ್ಧಿಮತ್ತೆ ಮತ್ತು ಐಪಿಆರ್‌ಆರ್-ಮಾದರಿ ಬದಲಾವಣೆ ಮತ್ತು ಭವಿಷ್ಯದ ಪರಿಣಾಮಗಳು ಕುರಿತ ರಾಷ್ಟ್ರೀಯ ವಿಚಾರಸಂಕಿರಣದಲ್ಲಿ ಅವರು ಮಾತನಾಡಿದರು.
ಯಾವುದೇ ನಿಯಮಗಳಿಲ್ಲದೆ ಏಕಾಏಕಿ ಈ ತಂತ್ರಜ್ಞಾನವನ್ನು ಬಳಸುವುದರಿಂದ ಉಂಟಾಗುವ ಪರಿಣಾಮಗಳ ಬಗ್ಗೆ ಆಲೋಚಿಸಬೇಕು. ಬೇರೆ ದೇಶಗಳಂತೆ ಭಾರತ ಡೇಟಾ ಕೇಂದ್ರವನ್ನು ಹೊಂದಿಲ್ಲ. ಹೀಗಾಗಿ, ಐರ್ಲೆಂಡ್‌ನಿಂದ ಪಡೆದುಕೊಳ್ಳಲಾಗುತ್ತಿದೆ. ನಮ್ಮ ದೇಶ ಡೇಟಾ ಸಾರ್ವಭೌಮತ್ವ ಸಾಧಿಸಬೇಕಿದೆ ಎಂದರು.
ಕೃತಕಬುದ್ಧಿ ಮತ್ತೆ ತಂತ್ರಜ್ಞಾನವನ್ನು ವಿಶೇಷವಾಗಿ ಹಕ್ಕುಸ್ವಾಮ್ಯ, ಪೇಟೆಂಟ್‌ಗಳು ಟ್ರೇಡ್ ಮಾರ್ಕ್ ವಿಚಾರದಲ್ಲಿ ಪರಿಣಾಮಕಾರಿಯಾಗಿ ಕಾನೂನು ಬಳಕೆ ಮಾಡಬಹುದಾಗಿದೆ. ವಕೀಲರು ಕೃತಕಬುದ್ಧಿ ಮತ್ತೆ ಮತ್ತು ಬೌದ್ಧಿಕ ಆಸ್ತಿ ಹಕ್ಕುಗಳ ಮೇಲೆ ಅದರ ಪ್ರಭಾವದ ಬಗ್ಗೆ ಹೆಚ್ಚಿನ ಜ್ಞಾನ ಸಂಪಾದಿಸಬೇಕು. ಕೃತಕಬುದ್ಧಿ ಮತ್ತೆ ತಂತ್ರಜ್ಞಾನವನ್ನು ವಿಶೇಷವಾಗಿ ಹಕ್ಕುಸ್ವಾಮ್ಯ, ಪೇಟೆಂಟ್‌ಗಳು ಟ್ರೇಡ್ ಮಾರ್ಕ್ ವಿಚಾರ ಅರಿಯಬೇಕು ಎಂದು ಹೇಳಿದರು.
ವೈಯಕ್ತಿಕ ಮಾಹಿತಿಗೆ ಅನಧಿಕೃತ ಪ್ರವೇಶ ಸಾಧ್ಯತೆಗಳಿರುವುದರಿಂದ ಮೂಲಭೂತ ಹಕ್ಕುಗಳು ಮತ್ತು ಖಾಸಗಿತನಕ್ಕೆ ಧಕ್ಕೆಯಾಗಿದೆ ಎಂಬ ಚರ್ಚೆ ನಡೆಯುತ್ತಿದೆ. ಇದಲ್ಲದೆ ನಕಲಿ ಆಡಿಯೋ, ವಿಡಿಯೋಗಳ ಸೃಷ್ಟಿಸಲಾಗುತ್ತಿದೆ ಎಂಬ ಆರೋಪಗಳು ಕೇಳಿಬರುತ್ತಿವೆ. ಈ ರೀತಿಯ ಚಟುವಟಿಕೆಗಳಲ್ಲಿ ಕೃತಕ ಬುದ್ಧಿಮತ್ತೆ ಬಳಕೆಯಾಗುತ್ತಿದೆ. ಈ ನಕಲಿ ಆಡಿಯೋ, ವಿಡಿಯೋ ಜಾಲಕ್ಕೆ ಸಿನಿಮಾ ನಟ ನಟಿಯರು ಒಳಗಾಗುತ್ತಿದ್ದಾರೆ. ಈ ವಿದ್ಯಮಾನಗಳ ಬಗ್ಗೆ ವಕೀಲರಿಗೆ ತಿಳಿವಳಿಕೆ ಅಗತ್ಯ ಎಂದು ಸಲಹೆ ನೀಡಿದರು.
ಕೃತಕ ಬುದ್ಧಿಮತ್ತೆಯಿಂದ ಉಂಟಾಗುತ್ತಿರುವ ವ್ಯತಿರಿಕ್ತ ಪರಿಣಾಮಗಳನ್ನು ಗಮನದಲ್ಲಿಟ್ಟುಕೊಂಡು ಈ ತಂತ್ರಜ್ಞಾನವನ್ನು ನಿಷೇಧಿಸಬೇಕೆ ಎಂಬ ಚರ್ಚೆಯೂ ಹುಟ್ಟುಕೊಂಡಿದೆ. ಆದ್ದರಿಂದ ಸಾಧಕ-ಬಾಧಕಗಳ ಕುರಿತು ಚರ್ಚೆ ನಡೆಯಬೇಕಿದೆ ಎಂದರು.
ಜೆಎಸ್‌ಎಸ್ ಕಾನೂನು ಕಾಲೇಜಿನ ಮುಖ್ಯ ಕಾರ್ಯನಿರ್ವಾಹಕ ಪ್ರೊ.ಕೆ.ಎಸ್.ಸುರೇಶ್, ಪ್ರಾಂಶುಪಾಲ ಡಾ.ಎಸ್.ನಟರಾಜು ಇದ್ದರು.