ಅಕ್ಕಿಆಲೂರ: ಕಣ್ಣಿಗೆ ಬಟ್ಟೆ ಕಟ್ಟಿಕೊಂಡು 2.28 ಕಿಲೋಮೀಟರ್ ಸೈಕಲ್ ಮೇಲೆ ತನಕ ರಕ್ತದಾನ ಕುರಿತು ಜಾಗೃತಿ ಮಾಡಿದ ಪಟ್ಟಣದ ಕುಮಾರನಗರದ ಬಾಲಕ ಹೊಯ್ಸಳ ಕರಬಸಪ್ಪ ಗೊಂದಿಗೆ ಇಂಡಿಯಾ ಬುಕ್ ಆಫ್ ರೆಕಾರ್ಡ್ ಪ್ರಶಸ್ತಿ ದೊರೆತಿದೆ.
ಜೂನ್ 14ರಂದು ಸ್ಥಳೀಯ ವಿರಕ್ತಮಠದಲ್ಲಿ ಸ್ನೇಹಮೈತ್ರಿ ಬ್ಲಡ್ ಆರ್ವಿುಯಿಂದ ಆಯೋಜಿಸಿದ್ದ ವಿಶ್ವ ರಕ್ತದಾನಿಗಳ ದಿನದ ಸಮಾರಂಭದಲ್ಲಿ, ಹೊಯ್ಸಳ ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಸೈಕಲ್ ಸವಾರಿ ಮಾಡಿದ್ದ. ಸ್ಥಳೀಯ ವಿರಕ್ತಮಠದಿಂದ ಪೇಟೆ ಓಣಿ, ಬಸ್ ನಿಲ್ದಾಣ, ಶಿರಸಿ-ಹಾವೇರಿ ರಾಜ್ಯ ಹೆದ್ದಾರಿ ಮಾರ್ಗವಾಗಿ ಕುಮಾರನಗರ ಮೂಲಕ ಮತ್ತೆ ವಿರಕ್ತಮಠದ ವರೆಗೆ 14.27 ನಿಮಿಷದಲ್ಲಿ 2.28 ಕಿಲೋ ಮೀಟರ್ ಸೈಕಲ್ ಚಲಾಯಿಸಿದ್ದ.
‘ರಕ್ತದಾನ ಮಾಡಿ, ಜಾಣ ಕುರುಡರಾಗಬೇಡಿ’ ಎಂಬ ಸಂದೇಶದೊಂದಿಗೆ ರಕ್ತದಾನ ಮಾಡಿದ್ದ ಹೊಯ್ಸಳನ ಸೈಕಲ್ ಸವಾರಿಗೆ ರಾಷ್ಟ್ರೀಯ ಸೈಕ್ಲಿಂಗ್ ಪಟು ಬಿಜಾಪುರದ ಭೀಮಾಶಂಕರ ಮಾಡಗ್ಯಾಳ, ಮನಗುಂಡಿಯ ಬಸವಾನಂದ ಶ್ರೀ ಚಾಲನೆ ನೀಡಿದ್ದರು. ಹೊಯ್ಸಳನ ಸೈಕಲ್ ಜಾಗೃತಿಗೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿತ್ತು. ಈಗ ಇಂಡಿಯಾ ಬುಕ್ ಆಫ್ ರಿಕಾರ್ಡ್ ಪ್ರಶಸ್ತಿ ದೊರೆತಿದೆ.