ವಿಜಯಪುರ: ಇಂಡಿ ತಾಲೂಕಿನ ಮಾರ್ಸನಹಳ್ಳಿಯಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಅವಮಾನಿಸಿದ ದುಷ್ಕರ್ಮಿಗಳನ್ನು ಕೂಡಲೇ ಬಂಧಿಸುವಂತೆ ಆಗ್ರಹಿಸಿ ರಾಜ್ಯ ದಲಿತ ಸಮನ್ವಯ ಸಮಿತಿ ವತಿಯಿಂದ ಬುಧವಾರ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು. ಸಮಿತಿ ರಾಜ್ಯ ಸಂಚಾಲಕ ಅಡಿವೆಪ್ಪ ಸಾಲಗಲ್ಲ ಮಾತನಾಡಿ, ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಜಾತಿವಾದಿ, ದೇಶದ್ರೋಹಿಗಳು, ದುಷ್ಕರ್ಮಿಗಳು, ಚಪ್ಪಲಿ ಹಾರ ಹಾಕಿ ಅವಮಾನ ಮಾಡಿದ್ದಾರೆ. ವಿಶ್ವದಲ್ಲಿಯೇ ಶ್ರೇಷ್ಠ ಸಂವಿಧಾನವನ್ನು ನೀಡಿದ ರಾಷ್ಟ್ರ ನಾಯಕ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ ಅವರಿಗೆ ಗೌರವಿಸಬೇಕಾದ ಕರ್ತವ್ಯ ಪ್ರತಿಯೊಬ್ಬ ಭಾರತೀಯರದ್ದಾಗಿದೆ. ಕೆಲವು ಕೋಮುವಾದಿಗಳು, ಮನುವಾದಿಗಳು ಇಂತಹ ಕೃತ್ಯ ಎಸಗಿರುವುದು ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು. ಜಿಲ್ಲಾ ಸಂಚಾಲಕ ಮಲ್ಲು ಬನಸೋಡೆ ಮಾತನಾಡಿ, ಇಂತಹ ದುಷ್ಕೃತ್ಯ ಎಸಗಿದ ದೇಶದ್ರೋಹಿಗಳನ್ನು ಕೂಡಲೇ ಬಂಧಿಸಿ ಗಡಿಪಾರು ಮಾಡಬೇಕು. ಅಲ್ಲದೆ ದೇಶದಲ್ಲಿರುವ ರಾಷ್ಟ್ರ ನಾಯಕರ ವೃತ್ತಗಳಿಗೆ ಮುಂಜಾಗ್ರತೆಯಾಗಿ ರಕ್ಷಣಾ ಕ್ರಮಗಳನ್ನು ಕೈಗೊಳ್ಳಬೇಕು. ಒಂದು ವೇಳೆ ಜಿಲ್ಲಾಡಳಿತ ನಿರ್ಲಕ್ಷೃ ಧೋರಣೆ ತಾಳಿದರೆ ಜಿಲ್ಲಾದ್ಯಂತ ಉಗ್ರ ಹೋರಾಟ ಮಾಡಲಾಗುತ್ತದೆ ಎಂದು ಎಚ್ಚರಿಸಿದರು. ಮುಖಂಡರಾದ ವಿಕಾಸ ಹೊಸಮನಿ, ಷಣ್ಮುಖ ಢವಳೇಶ್ವರ, ರಾಜು ಬನಸೋಡೆ, ಜೈಭೀಮ ಬನಸೋಡೆ, ಸಿದ್ದಾರ್ಥ ಬೂದಿಹಾಳ, ಯಲ್ಲಪ್ಪ ಗಾಂಜನ್ವರ, ಚಂದ್ರು ಕಾಂಬಳೆ, ಬಸವರಾಜ ದೊಡಮನಿ, ರಾಹುಲ ಬನಸೋಡೆ, ಸರ್ರಾಜ ಜಮಾದಾರ ಮುಂತಾದವರು ಉಪಸ್ಥಿತರಿದ್ದರು.
ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಅವಮಾನ ಮಾಡಿದ್ದನ್ನು ಖಂಡಿಸಿ ದಲಿತ ಸಂಘರ್ಷ ಸಮಿತಿ ಪದಾಧಿಕಾರಿಗಳು ರಾಜ್ಯಪಾಲರಿಗೆ ಜಿಲ್ಲಾಕಾರಿಗಳ ಮೂಲಕ ಮನವಿ ಸಲ್ಲಿಸಲಾಯಿತು. ರಾಜ್ಯ ಸಂಘಟನಾ ಸಂಚಾಲಕ ಜಿತೇಂದ್ರ ಕಾಂಬಳೆ, ಜಿಲ್ಲಾ ಪ್ರಧಾನ ಸಂಚಾಲಕ ಸಂಜು ಕಂಬಾಗಿ, ಮುಖಂಡರಾದ ಶಂಕರ ಚಲವಾದಿ, ಭಾಸ್ಕರ್ ಬೋಗಿರ, ಶ್ರೀಮಂತ ಪವಾರ, ಪಾಂಡು ರಾಠೋಡ, ಪ್ರದೀಪ ಚಲವಾದಿ, ಸೋಮು ರಣದೇವಿ, ಹುಚ್ಚಪ್ಪ ಲೋಕೂರ, ಪರಸು ಚಲವಾದಿ, ರಾಮು ಕಾಂಬಳೆ,ವಿಠ್ಠಲ ರಾಠೋಡ ಮುಂತಾದವರು ಇದ್ದರು.