ಜಿಲ್ಲೆ

ಅಧ್ಯಕ್ಷರಾಗಿ ಸುನೀತಾ, ಉಪಾಧ್ಯಕ್ಷರಾಗಿ ಶ್ವೇತಾ ಆಯ್ಕೆ

ಇಂಡಿ: ತಾಲೂಕಿನ ಲಾಳಸಂಗಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಚುನಾವಣೆ ಗುರುವಾರ ನಡೆಯಿತು. ಅಧ್ಯಕ್ಷರಾಗಿ ಸುನೀತಾ ಹರಿಜನ ಹಾಗೂ ಉಪಾಧ್ಯಕ್ಷರಾಗಿ ಶ್ವೇತಾ ಬಬಲೇಶ್ವರ ಆಯ್ಕೆಯಾದರು.

ಅಧ್ಯಕ್ಷ ಸ್ಥಾನ ಪರಿಶಿಷ್ಟ ಜಾತಿ ಮಹಿಳೆ ಹಾಗೂ ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿತ್ತು. ಅಧ್ಯಕ್ಷ ಸ್ಥಾನಕ್ಕೆ ಸುನೀತಾ ಹರಿಜನ ಹಾಗೂ ಆರತಿ ಗೂಗಿಹಾಳ ನಾಮಪತ್ರ ಸಲ್ಲಿಸಿದ್ದರು. ಉಪಾಧ್ಯಕ್ಷ ಸ್ಥಾನಕ್ಕೆ ಶ್ವೇತಾ ಬಬಲೇಶ್ವರ ಹಾಗೂ ಮಲ್ಲವ್ವ ಕುಂಬಾರಿ ನಾಮಪತ್ರ ಸಲ್ಲಿಸಿದ್ದರು.

ಸುನೀತಾ ಹರಿಜನ 8 ಮತಗಳನ್ನು ಪಡೆದು ಅಧ್ಯಕ್ಷರಾಗಿ ಆಯ್ಕೆಯಾದರೆ, ಆರತಿ ಗೂಗಿಹಾಳ 7 ಮತಗಳನ್ನು ಪಡೆದು ಪರಾಭವಗೊಂಡರು. ಉಪಾಧ್ಯಕ್ಷ ಸ್ಥಾನಕ್ಕೆ ಶ್ವೇತಾ ಬಬಲೇಶ್ವರ 8 ಮತಗಳನ್ನು ಪಡೆದು ಉಪಾಧ್ಯಕ್ಷರಾಗಿ ಆಯ್ಕೆಯಾದರೆ, ಮಲ್ಲವ್ವ ಕುಂಬಾರಿ 7 ಮತಗಳನ್ನು ಪಡೆದು ಪರಾಭವಗೊಂಡಿದ್ದಾರೆ ಎಂದು ಚುನಾವಣಾಧಿಕಾರಿ ಮಹಾದೇವಪ್ಪ ಏವೂರ ತಿಳಿಸಿದ್ದಾರೆ.

ವಿಜಯೋತ್ಸವ

ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಯಾಗುತ್ತಿದ್ದಂತೆ ಅವರ ಹಿಂಬಾಲಕರು, ಅಭಿಮಾನಿಗಳು ಪಟಾಕಿ ಸಿಡಿಸಿ, ಗುಲಾಲು ಎರಚಿ ಸಂಭ್ರಮಿಸಿದರು.