ಜಿಲ್ಲೆ

ಶಿಕ್ಷಣ ಕಾಳಜಿ ಮೆರೆದ ಗೆಳೆಯರ ಬಳಗ

Vijayapura

ವಿಜಯಪುರ: ಸರ್ಕಾರಿ ಶಾಲೆ ವಿದ್ಯಾರ್ಥಿಗಳಿಗೆ ರಂಗು ರಂಗಿನ ಡೆಸ್ಕ್ ಕುರ್ಚಿ ಮತ್ತು ಆಟದ ಸಾಮಗ್ರಿ ಸೇರಿದಂತೆ ಅಂದಾಜು 30 ಸಾವಿರ ರೂ. ಮೌಲ್ಯದ ಕಲಿಕಾ ಸಾಮಗ್ರಿ ಕಲ್ಪಿಸುವ ಮೂಲಕ ಗೆಳೆಯರ ಬಳಗವೊಂದು ಶಿಕ್ಷಣ ಕಾಳಜಿ ಮೆರೆದಿದೆ.
ಇಂಡಿ ತಾಲೂಕಿನ ಹಿರೇರೂಗಿ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಗೀಗ ಖಾಸಗಿ ಶಿಕ್ಷಣ ಸಂಸ್ಥೆಗಳ ಮೆರಗು ಬಂದಿದೆ. ರಂಗು ರಂಗಿನ ದುಂಡು ಮೇಜು, ಚಿಕ್ಕ ಕುರ್ಚಿ, ಆಟದ ಸಾಮಗ್ರಿ ಹೀಗೆ ಹಲವು ವಸ್ತುಗಳೀಗ ವಿದ್ಯಾರ್ಥಿಗಳ ಕಲಿಕಾಸಕ್ತಿಯನ್ನು ಹೆಚ್ಚಿಸಿವೆ. ವಿದ್ಯಾರ್ಥಿಗಳ ಹರ್ಷವನ್ನು ಶಿಕ್ಷಕರು ನಗುಮೊಗದಿಂದ ಕಣ್ತುಂಬಿಕೊಳ್ಳುತ್ತಿದ್ದಾರೆ.

ಸಹೃದಯತೆಯ ನೆರವು

ಶಾಲೆ ಶಿಕ್ಷಕರಾದ ಸಂತೋಷ ಎಸ್. ಬಂಡೆ ಅವರ ವಿನಂತಿ ಮೇರೆಗೆ ಅವರ ಗೆಳೆಯರ ಬಳಗದವರು 30 ಸಾವಿರ ರೂ.ನೆರವು ನೀಡಿದ್ದಾರೆ. ಆ ಮೊತ್ತದಲ್ಲಿ ನಲಿ-ಕಲಿ ಟೇಬಲ್ ತಟ್ಟೆಗಳು-5, ಮಕ್ಕಳ ಕುರ್ಚಿಗಳು-20, ಶುದ್ದ ಕುಡಿಯುವ ನೀರಿನ ಕ್ಯಾನ್‌ಗಳು-6, ಕ್ಯಾನ್ ಇಡಲು ಸ್ಟ್ಯಾಂಡ್‌ಗಳು-6, ಡಸ್ಟ್ ಬಿನ್‌ಗಳು-6, ಫೋಟೋ ಫ್ರೇಮ್, ಶಾಲಾ ನಾಮ ಫಲಕಗಳು-7, ಊಟದ ತಟ್ಟೆ ಇಡುವ ಸ್ಟ್ಯಾಂಡ್-1, ಪಿಕಾಸಿ-1, ಬೆಡಗು-1, ಬುಟ್ಟಿ-2 ಖರೀದಿಸಲಾಗಿದೆ.

ಸಿಬ್ಬಂದಿ ಕಾಳಜಿ

ಇಂಡಿ ಬಿಇಒ ವಸಂತ ರಾಠೋಡ ಅವರು ಶಾಲೆಗೆ ಭೇಟಿ ನೀಡಿದ್ದು ಶಿಕ್ಷಕರ ಕಾಳಜಿ ಕಂಡು ಹರ್ಷ ವ್ಯಕ್ತಪಡಿಸಿದ್ದಾರೆ. ಶಿಕ್ಷಕರಾದ ಬಸವರಾಜ ಕರಜಗಿ, ಯುಬಿಎಸ್ ಶಾಲೆಯ ಎಸ್‌ಡಿಎಂಸಿ ಪದಾಧಿಕಾರಿಗಳು ಗೆಳೆಯರ ಬಳಗದ ಕಾರ್ಯ ಶ್ಲಾಘಿಸಿದ್ದಾರೆ. ವಿದ್ಯಾರ್ಥಿಗಳು ತುಂಬು ಹೃದಯದಿಂದ ಗೆಳೆಯರ ಬಳಗ್ಗೆ ಅಭಿನಂದನೆ ಸಲ್ಲಿಸಿದ್ದಾರೆ. ಇಂಥ ಗೆಳೆಯರ ಬಳಗದ ಸಂಖ್ಯೆಹೆಚ್ಚಲಿ ಎಂಬುದೇ ಎಲ್ಲರ ಸದಾಶಯವಾಗಿದೆ.