ಜಿಲ್ಲೆ

ಅಂಗನವಾಡಿ ನೌಕರರಿಂದ ಪ್ರತಿಭಟನೆ

ಇಂಡಿ: ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿ ಅಂಗನವಾಡಿ ನೌಕರರು ಪಟ್ಟಣದಲ್ಲಿ ಸೋಮವಾರ ಪ್ರತಿಭಟನೆ ನಡೆಸಿ ಸಿಡಿಪಿಒ ಕಚೇರಿ ಮೇಲ್ವಿಚಾರಕಿ ಸವಿತಾ ಪಾಟೀಲ ಅವರಿಗೆ ಮನವಿ ಪತ್ರ ಸಲ್ಲಿಸಿದರು.

ನಗರದ ಜೆಡಿಎಸ್ ಕಚೇರಿಯಿಂದ ಹೊರಟ ಪ್ರತಿಭಟನಾಕಾರರು, ವಿವಿಧ ವೃತ್ತಗಳಲ್ಲಿ ಹಾದು ಅಂಬೇಡ್ಕರ್ ವೃತ್ತದ ಸಮೀಪವಿರುವ ಅಂಗನವಾಡಿ ಮುಂದೆ ಕೆಲ ಕಾಲ ಧರಣಿ ನಡೆಸಿದರು.

ಜೆಡಿಎಸ್ ತಾಲೂಕು ಅಧ್ಯಕ್ಷ ಬಿ.ಡಿ. ಪಾಟೀಲ ಧರಣಿಗೆ ಬೆಂಬಲ ವ್ಯಕ್ತಪಡಿಸಿ ಮಾತನಾಡಿ, ಬಜೆಟ್‌ನಲ್ಲಿ ಅಂಗನವಾಡಿ ನೌಕರರಿಗೆ ಯಾವುದೇ ಸೌಲಭ್ಯ ನೀಡದಿರುವ ಸರ್ಕಾರದ ಕ್ರಮ ಖಂಡಿಸಿದರು.

ಅಂಗನವಾಡಿ ನೌಕರರಿಗೆ ಸೇವಾ ಭದ್ರತೆ ಒದಗಿಸಬೇಕು. ನೌಕರರಿಗೆ ಕನಿಷ್ಠ 25 ಸಾವಿರ ರೂ. ವೇತನ ನೀಡಬೇಕು. ಅಂಗನವಾಡಿ ನೌಕರರ ಹಿತವನ್ನು ಗಣನೆಗೆ ತೆಗೆದುಕೊಂಡು ಇವರ ಬೇಡಿಕೆಗಳನ್ನು ಈಡೇರಿಸಬೇಕು. ಇದಕ್ಕೆ ಹಿಂದೇಟು ಹಾಕಿದರೆ ಮುಂಬರುವ ದಿನದಲ್ಲಿ ರಾಜ್ಯಾದ್ಯಂತ ಅಂಗನವಾಡಿ ನೌಕರರೊಂದಿಗೆ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುತ್ತದೆ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

ಅಂಗನವಾಡಿ ನೌಕರರ ಸಂಘದ ಮುಖಂಡೆ ಭಾರತಿ ವಾಲಿ ಮಾತನಾಡಿದರು. ಜೆಡಿಎಸ್ ಮುಖಂಡರಾದ ಸಿದ್ದು ಡಂಗಾ, ಶ್ರೀಶೈಲಗೌಡ ಪಾಟೀಲ, ಅಂಗನವಾಡಿ ನೌಕರರ ಸಂಘದ ದಾನಮ್ಮ ಗುಗ್ಗರಿ, ಎಸ್.ಎ. ಕುಂಬಾರ, ಕನ್ಯಾಕುಮಾರಿ ಗೊಳಸಾರ, ಪಾರ್ವತಿ ಅಲಗೊಂಡ, ಲಲಿತಾ ಹೂಗಾರ, ಭಾಗೀರಥಿ ತಳವಾರ, ಭಾರತಿ ಹತ್ತರಕಿ, ಪದ್ಮಾವತಿ ಬಿರಾದಾರ, ಲಲಿತಾ ಕೋರೆ, ಗಿರಿಜಾ ಸಕ್ಕರಿ, ರಾಜಶ್ರೀ ಪೂಜಾರಿ, ಅನಸೂಯಾ ಕಂಬಾರ, ಶಂಕ್ರೇಮ್ಮ ಪುಠಾಣಿ, ಇಂದ್ರಾ ಅಂಬಾರೆ ಮತ್ತಿತರಿದ್ದರು.