ವಿಜಯಪುರ: ಭೀಮಾತೀರ ಭಾಗದ ನಾಲ್ಕು ತಾಲೂಕುಗಳಲ್ಲಿ ಎರಡನೇ ಹಂತದ ಗ್ರಾಮ ಪಂಚಾಯಿತಿ ಚುನಾವಣೆ ಡಿ.27ರಂದು ನಡೆಯಲಿದೆ. ಇಂಡಿ, ಚಡಚಣ, ಸಿಂದಗಿ ಹಾಗೂ ದೇವರಹಿಪ್ಪರಗಿ ಭಾಗದ 88 ಗ್ರಾಪಂಗಳಲ್ಲಿ ಅಖಾಡಕ್ಕಿಳಿದಿರುವ ಅಭ್ಯರ್ಥಿಗಳ ಭವಿಷ್ಯವನ್ನು ಮತದಾರರು ಬರೆಯಲಿದ್ದಾರೆ. ಈಗಾಗಲೇ ಮೊದಲ ಹಂತದಲ್ಲಿ ಎಂಟು ತಾಲೂಕುಗಳಲ್ಲಿ 111 ಗ್ರಾಪಂಗಳಿಗೆ ಮತದಾನ ಮುಕ್ತಾಯಗೊಂಡಿದ್ದು, ಎರಡನೇ ಹಂತದ ಚುನಾವಣೆಗಾಗಿ ಜಿಲ್ಲಾಡಳಿತ ಸಕಲ ಸಿದ್ಧತೆ ಕೈಗೊಂಡಿದೆ.
ಎರಡನೇ ಹಂತದ ಚುನಾವಣೆಯಲ್ಲಿ ಒಟ್ಟು 572 ಕ್ಷೇತ್ರಗಳಲ್ಲಿ 1628 ಸ್ಥಾನಗಳಲ್ಲಿ 1505 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. 119 ಸ್ಥಾನಗಳಿಗೆ ಅವಿರೋಧವಾಗಿ ಆಯ್ಕೆ ಮಾಡಲಾಗಿದೆ. ಪರಿಶಿಷ್ಟ ಜಾತಿಯ 998, ಪರಿಶಿಷ್ಟ ಪಂಗಡದಲ್ಲಿ 154, ಹಿಂದುಳಿದ ‘ಅ’ ವರ್ಗದಲ್ಲಿ 792, ಹಿಂದುಳಿದ ವರ್ಗ ‘ಬ’ ವರ್ಗದಲ್ಲಿ 172, ಸಾಮಾನ್ಯ ವಿಭಾಗದಲ್ಲಿ 2134 ಅಭ್ಯರ್ಥಿಗಳು ಅಂತಿಮ ಕಣದಲ್ಲಿದ್ದಾರೆ. ಒಟ್ಟು 6165 ನಾಮಪತ್ರಗಳು ಸ್ವೀಕಾರಗೊಂಡಿದ್ದು, ಅದರಲ್ಲಿ 149 ಉಮೇದುವಾರಿಕೆಗಳು ತಿರಸ್ಕೃತಗೊಂಡಿವೆ. 1586 ಅಭ್ಯರ್ಥಿಗಳು ನಾಮಪತ್ರ ಹಿಂಪಡೆದಿದ್ದು, ಒಟ್ಟು 4250 ಅಭ್ಯರ್ಥಿಗಳು ಅಂತಿಮ ಕಣದಲ್ಲಿದ್ದಾರೆ.
ಒಟ್ಟು 784 ಮತಗಟ್ಟೆಗಳಲ್ಲಿ ಮತದಾನ ಪ್ರಕ್ರಿಯೆ ನಡೆಯಲಿದ್ದು, ಅದರಲ್ಲಿ 113 ಸೂಕ್ಷ್ಮ ಮತಗಟ್ಟೆಗಳಿದ್ದು, 89 ಅತಿ ಸೂಕ್ಷ್ಮ ಮತಗಟ್ಟೆಗಳಿವೆ. ಇನ್ನೂ 582 ಸಾಧಾರಣ ಮತಗಟ್ಟೆಗಳಿವೆ. 99 ಚುನಾವಣಾಧಿಕಾರಿಗಳು ಕಾರ್ಯ ನಿರ್ವಹಿಸಲಿದ್ದು, 108 ಸಹಾಯಕ ಚುನಾವಣಾಧಿಕಾರಿಗಳನ್ನು ನೇಮಿಸಲಾಗಿದೆ. 43 ಸೆಕ್ಟೆರ್ ಅಧಿಕಾರಿಗಳು, ನಾಲ್ಕು ಎಂಸಿಸಿ ತಂಡ, 876 ಪೋಲಿಂಗ್ ಪಾರ್ಟಿಗಳಿದ್ದು, 190 ಮತ ಎಣಿಕೆ ಟೇಬಲ್ ವ್ಯವಸ್ಥೆ, 208 ಮತ ಎಣಿಕೆ ಮೇಲ್ವಿಚಾರಕರು, 417 ಮತ ಎಣಿಕೆ ಸಹಾಯಕರನ್ನು ನೇಮಕ ಮಾಡಲಾಗಿದೆ.
ಗ್ರಾಪಂ ಚುನಾವಣೆ ಹಿನ್ನೆಲೆ ಪ್ರತಿ ಮತಗಟ್ಟೆಗಳಲ್ಲಿ ಪೊಲೀಸ್ ಬಿಗಿಬಂದೋಬಸ್ತ್ ಏರ್ಪಡಿಸಲಾಗಿದೆ. ನಾಲ್ವರು ಡಿವೈಎಸ್‌ಪಿ, 12 ಸಿಪಿಐ, 48 ಪಿಎಸ್‌ಐ, 88 ಎಎಸ್‌ಐ, 100 ಎಚ್‌ಸಿ, 866 ಪಿಸಿ ಸೇರಿ ಒಟ್ಟು 1118 ಸಿಬ್ಬಂದಿಯನ್ನು ಜಿಲ್ಲಾ ಪೊಲೀಸ್ ಇಲಾಖೆ ನಿಯೋಜಿಸಿದೆ. ಸೂಕ್ಷ್ಮ ಹಾಗೂ ಅತಿಸೂಕ್ಷ್ಮ ಮತಗಟ್ಟೆಗಳಲ್ಲಿ ಹೆಚ್ಚಿನ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ. ಇನ್ನೂ ವಾಹನಗಳ ವ್ಯವಸ್ಥೆಯನ್ನು ಕೈಗೊಂಡಿದ್ದು, 108 ಸಾರಿಗೆ ಬಸ್, 14 ಖಾಸಗಿ ಬಸ್, 26 ಕ್ರೂಸರ್, 18 ಜೀಪ್‌ಗಳ ವ್ಯವಸ್ಥೆ ಮಾಡಲಾಗಿದೆ.
ಚುನಾವಣೆಯಲ್ಲಿ ಒಟ್ಟು 5,45,655 ಮತದಾರರು ಮತದಾನ ಮಾಡಲು ಅರ್ಹತೆ ಪಡೆದಿದ್ದಾರೆ. ಇಂಡಿ ತಾಲೂಕಿನ ವ್ಯಾಪ್ತಿಯಲ್ಲಿ 2,18,974, ಚಡಚಣ 89,351, ಸಿಂದಗಿ 1,35,287, ದೇವರ ಹಿಪ್ಪರಗಿ 88,465 ಮತದಾರರಿದ್ದಾರೆ. ಅದರಲ್ಲಿ 2.83,186 ಪುರುಷರು, 2,62,424 ಮಹಿಳೆಯರು ಹಾಗೂ 45 ಇತರ ಮತದಾರರು, 484 ಸೇವಾ ಮತದಾರರು ತಮ್ಮ ಮತ ಚಲಾಯಿಸಲಿದ್ದಾರೆ ಎಂದು ಜಿಲ್ಲಾಡಳಿತ ಮಾಹಿತಿ ನೀಡಿದೆ.