ಜಿಲ್ಲೆ

ಇಂದಿರಾ ಕ್ಯಾಂಟೀನ್ ಹೆಸರಲ್ಲಿ ಕೋಟಿ..ಕೋಟಿ ಪೋಲು

ಮಂಗಳೂರು/ಉಡುಪಿ: ದಿನಕ್ಕೆ ಗ್ರಾಹಕರ ಸಂಖ್ಯೆ 300ರ ಗಡಿ ದಾಟುವುದಿಲ್ಲ. ಆದರೆ, ಪ್ರತಿ ಹೊತ್ತು 500 ಮಂದಿಯಂತೆ ಒಟ್ಟು 1,500 ಗ್ರಾಹಕರಂತೆ ಬಿಲ್ ಮಾಡಲಾಗುತ್ತಿದೆ!

ಇದು ಬಡವರಿಗೆ ಕನಿಷ್ಠ ದರದಲ್ಲಿ ಉಪಾಹಾರ, ಊಟ ನೀಡಲು ಕಾಂಗ್ರೆಸ್ ಸರ್ಕಾರ ಜಾರಿಗೊಳಿಸಿದ್ದ ಇಂದಿರಾ ಕ್ಯಾಂಟೀನ್‌ನ ಸದ್ಯದ ಸ್ಥಿತಿ. ಕ್ಯಾಂಟೀನ್ ಹೆಸರಿನಲ್ಲಿ ಜನರ ತೆರಿಗೆ ಹಣ ಪೋಲಾಗುತ್ತಿದೆ. ಇಲ್ಲಿ ಕೇಳುವವರು, ಹೇಳುವವರು ಯಾರೂ ಇಲ್ಲ.

ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ 5 ಕ್ಯಾಂಟೀನ್‌ಗಳಲ್ಲಿ ಬರುವ ಗ್ರಾಹಕರ ಸಂಖ್ಯೆಯೇ ಕಡಿಮೆ. ಆದರೆ ಬಿಲ್‌ನಲ್ಲಿ ಯಾವುದೇ ಇಳಿಕೆಯಾಗಿಲ್ಲ. ಪಾಲಿಕೆ ಕಳೆದ 17 ತಿಂಗಳಲ್ಲಿ ಒಟ್ಟು 1.91 ಕೋಟಿ ರೂ.ಬಿಲ್ ಪಾವತಿ ಮಾಡಿದೆ.

ಉಡುಪಿಯಲ್ಲೂ ಇದೇ ಸ್ಥಿತಿ. ಅಲ್ಲಿರುವ 4 ಕ್ಯಾಂಟೀನ್ 2018 ಜೂನ್‌ನಿಂದ 2019 ಡಿಸೆಂಬರ್‌ವರೆಗೆ 1.95 ಕೋ.ರೂ ಪಾವತಿಸಲಾಗಿದೆ. ಅಲ್ಲೂ ಗ್ರಾಹಕರಿಲ್ಲ. ಅದರೆ ಹಣ ಮಾತ್ರ ಪೂರ್ತಿ ಪಾವತಿಯಾಗಿದೆ.

ದಿನಕ್ಕೆ ಎಷ್ಟು ಊಟ-ಉಪಾಹಾರ ಖರ್ಚಾಗುತ್ತದೆ ಎನ್ನುವುದನ್ನು ಖಚಿತಪಡಿಸಿಕೊಳ್ಳಲು ಸರ್ಕಾರದ ಬಳಿಕ ಯಾವುದೇ ವ್ಯವಸ್ಥೆಗಳಿಲ್ಲ. ಕ್ಯಾಂಟೀನ್‌ನವರು ಕೊಟ್ಟ ಲೆಕ್ಕಾಚಾರವೇ ಅಂತಿಮ. ಅಧಿಕಾರಿಗಳು ಎಂದಿಗೂ ಆ ಕಡೆಗೆ ತಲೆ ಹಾಕುವುದೂ ಇಲ್ಲ. ಅದೇ ಕಾರಣಕ್ಕೆ ಗ್ರಾಹಕರ ಸಂಖ್ಯೆ ಇಳಿರುವುದು ಕೂಡಾ ಅಧಿಕಾರಿಗಳಿಗೆ ಗೊತ್ತಿಲ್ಲ.

ಇಂದಿರಾ ಕ್ಯಾಂಟೀನ್‌ನಲ್ಲಿ ಗ್ರಾಹಕರಿಗೆ 5 ರೂ.ಗೆ ಉಪಾಹಾರ ಹಾಗೂ 10 ರೂ.ಗೆ ಊಟ ನೀಡಲಾಗುತ್ತಿದೆ. 11.66 ರೂ.ಗೆ ಉಪಾಹಾರ ಮತ್ತು 23.33 ರೂ.ಗೆ ಊಟ ಒದಗಿಸುವ ಟೆಂಡರನ್ನು ಮುಂಬೈಯ ಸಂಸ್ಥೆಯೊಂದು ಪಡೆದುಕೊಂಡಿದೆ. ತೆರಿಗೆ ಸಹಿತ ಹೆಚ್ಚುವರಿ ಮೊತ್ತದ ಶೇ.70 ಭಾಗವನ್ನು ಮನಪಾ ಹಾಗೂ ಶೇ.30 ಭಾಗವನ್ನು ಕಾರ್ಮಿಕ ಇಲಾಖೆ ಮೂಲಕ ಗುತ್ತಿಗೆದಾರ ಸಂಸ್ಥೆಗೆ ನೀಡಲಾಗುತ್ತಿದೆ.

ಗ್ರಾಹಕರ ಸಂಖ್ಯೆ ಕಡಿಮೆ

ಒಂದು ಕ್ಯಾಂಟೀನ್‌ನಲ್ಲಿ ಗರಿಷ್ಠ ಒಂದು ಹೊತ್ತು 500 ಮಂದಿಗೆ ಊಟ, ಉಪಾಹಾರ ಪೂರೈಕೆ ಬಿಲ್ ನೀಡಲಾಗುತ್ತಿದೆ. ಕ್ಯಾಂಟೀನ್‌ಗೆ ಪ್ರತಿ ಹೊತ್ತು 500 ಗ್ರಾಹಕರು ಬಂದರೆ ಗುತ್ತಿಗೆದಾರ ಸಂಸ್ಥೆಗೆ ದಿನಕ್ಕೆ 17500 ರೂ. ಸಿಗುತ್ತದೆ. ತಿಂಗಳಿಗೆ 5.25ಲಕ್ಷ ರೂ. ಆದರೆ ಅಷ್ಟು ಸಂಖ್ಯೆಯ ಗ್ರಾಹಕರು ಎಲ್ಲೂ ಬರುತ್ತಿಲ್ಲ. ಆದರೆ ಬಿಲ್ ಮಾತ್ರ ಪುಲ್. ಮಂಗಳೂರು ನಗರ ಹಾಗೂ ಉಡುಪಿಯ ಇಂದಿರಾ ಕ್ಯಾಂಟೀನ್‌ಗಳಲ್ಲಿ ವಿಜಯವಾಣಿ ತಂಡ ರಿಯಾಲಿಟಿ ಚೆಕ್ ನಡೆಸಿದಾಗ ವಿವರಗಳಿವು.

ಕ್ಯಾಂಟೀನ್‌ಗಳಲ್ಲಿ ಕಂಡಿದ್ದೇನು?

ಮಂಗಳೂರು ಉರ್ವಸ್ಟೋರ್‌ನ ಇಂದಿರಾ ಕ್ಯಾಂಟೀನ್‌ನಲ್ಲಿ ಬೆಳಗ್ಗೆ 8.30ರ ವೇಳೆಗಿದ್ದವರು ಬೆರಣಿಕೆ ಮಂದಿ ಮಾತ್ರ. ಕೆಲವರು 2-3 ಟೋಕನ್ ಪಡೆದು ತಿಂಡಿ ಪಾರ್ಸೆಲ್ ಮಾಡುತ್ತಿದ್ದರು. ಆದರೆ ಮಧ್ಯಾಹ್ನ 350 ಮಂದಿ, ರಾತ್ರಿ 250 ಮಂದಿ ಊಟ ಮಾಡುತ್ತಾರೆ ಎನ್ನುತ್ತಾರೆ ಇಲ್ಲಿನ ಸಿಬ್ಬಂದಿ.

ಕಾವೂರಿನಲ್ಲಿ ಮಧ್ಯಾಹ್ನ 1.30ರ ವೇಳೆಗೆ ಮೂವರು ಗ್ರಾಹಕರಿದ್ದರು. ಮಧ್ಯಾಹ್ನ 12.30ರಿಂದ 2.30ರ ಅವಧಿಯಲ್ಲಿ 285 ಮಂದಿ ಊಟ ಮಾಡಿದ್ದಾರೆ. ಶುಕ್ರವಾರ, ಶನಿವಾರ ಹಾಗೂ ಭಾನುವಾರ ಗ್ರಾಹಕರ ಸಂಖ್ಯೆ ಕಡಿಮೆ ಇರುತ್ತದೆ. ಉಳಿದ ಆಹಾರವನ್ನು ಉರ್ವಸ್ಟೋರ್‌ನಲ್ಲಿರುವ ಮಾಸ್ಟರ್ ಕಿಚನ್‌ಗೆ ಕೊಂಡೊಯ್ಯಲಾಗುತ್ತಿದೆ ಎನ್ನುತ್ತಾರೆ ಇಲ್ಲಿನ ಸಿಬ್ಬಂದಿ.

ಸ್ಟೇಟ್‌ಬ್ಯಾಂಕ್‌ನಲ್ಲಿರುವ ಇಂದಿರಾ ಕ್ಯಾಂಟೀನ್‌ಗೆ ಮಧ್ಯಾಹ್ನ ವಿಜಯವಾಣಿ ತಂಡ ಭೇಟಿ ನೀಡಿದಾಗ 10 ಮಂದಿ ಊಟ ಸೇವಿಸುತ್ತಿದ್ದರು. ಮತ್ತೆ 15 ಮಂದಿ ಭೇಟಿ ನೀಡಿದ್ದಾರೆ. ಪಕ್ಕದಲ್ಲಿನ ಅಂಗಡಿಯವರಲ್ಲಿ ವಿಚಾರಿಸಿದರೆ ಮಧ್ಯಾಹ್ನ ಸುಮಾರು 150 ಮಂದಿ ರಾತ್ರಿ , 75 ಮಂದಿ ಮತ್ತು 150 ಮಂದಿ ಬೆಳಗ್ಗಿನ ಉಪಾಹಾರ ಸೇವಿಸುತ್ತಾರೆ ಎನ್ನುವ ಚಿತ್ರಣವನ್ನು ಮುಂದಿಟ್ಟರು. ಕ್ಯಾಂಟೀನ್‌ಗೆ ಸಿಸಿಟಿವಿ ಕ್ಯಾಮರಾ ಅಳವಡಿಸಲಾಗಿದೆ. ಆದರೆ ಟಿವಿ ಮಾನಿಟರ್‌ನಲ್ಲಿ ಚಿತ್ರೀಕರಣ ನೋಡಲು ಸಾಧ್ಯವಾಗುತ್ತಿಲ್ಲ.

ಪಂಪ್‌ವೆಲ್‌ನಲ್ಲಿರುವ ಇಂದಿರಾ ಕ್ಯಾಂಟೀನ್‌ನಲ್ಲಿ ವಿಜಯವಾಣಿ ತಂಡ ಪರಿಶೀಲಿಸಿದಾಗ ಸಿಬ್ಬಂದಿ ಹೊರತುಪಡಿಸಿ ಯಾರೂ ಇರಲಿಲ್ಲ. ಆದರೆ, ಈ ಬಗ್ಗೆ ಕೇಳಿದಾಗ 250 ಮಂದಿ ಊಟ ಮಾಡಿ ತೆರಳಿದ್ದಾರೆ ಎನ್ನುವ ಉತ್ತರ ಮೇಲ್ವಿಚಾರಕರದ್ದು. ವಿಜಯವಾಣಿ ತಂಡ ಅಲ್ಲಿದ್ದ ಹದಿನೈದು ನಿಮಿಷದ ಅವಧಿಯಲ್ಲಿ ಕೇವಲ 3 ಮಂದಿ ಮಾತ್ರ ಭೇಟಿ ನೀಡಿದ್ದಾರೆ. ಭಾನುವಾರ ಗ್ರಾಹಕರ ಸಂಖ್ಯೆ ಎಂದಿಗಿಂತ ಕಡಿಮೆಯಿರುತ್ತದೆ ಎಂದು ಮೇಲ್ವಿಚಾರಕರೇ ಮಾಹಿತಿ ನೀಡಿದ್ದಾರೆ.

ಪ್ರಮಾಣದ ಬಗ್ಗೆ ನಿಗಾ ಇಲ್ಲ

ಕ್ಯಾಂಟೀನ್‌ಗೆ ಮಾಸ್ಟರ್‌ಕಿಚನ್‌ನಿಂದ ಪೂರೈಕೆಯಾಗುವ ಊಟ, ತಿಂಡಿ ಮತ್ತು ಖರ್ಚಾದ ಪ್ರಮಾಣದ ಬಗ್ಗೆ ನಿಗಾ ಇಡಲು ಮೇಲ್ವಿಚಾರಣೆ ವ್ಯವಸ್ಥೆ ಇಲ್ಲ. ಕ್ಯಾಂಟೀನ್‌ನವರು ಪಾಲಿಕೆಗೆ ನೀಡುವ ಲೆಕ್ಕವೇ ಅಂತಿಮ. 100 ಊಟ ಖರ್ಚಾದರೂ 500 ಊಟದ ಬಿಲ್ ಪಾವತಿಯಾಗುತ್ತದೆ. ಪ್ರತಿ ಕ್ಯಾಂಟೀನ್‌ನಲ್ಲಿ ಬೆಳಗ್ಗೆ 500 ತಿಂಡಿ, ಮಧ್ಯಾಹ್ನ ಹಾಗೂ ಸಂಜೆ ತಲಾ 500 ಊಟ ಪೂರೈಸಬೇಕು ಎಂಬ ನಿಯಮವನ್ನು ಸರ್ಕಾರ ರೂಪಿಸಿದೆ. ಗ್ರಾಹಕರ ಸಂಖ್ಯೆ ಕಡಿಮೆಯಾಗಿರುವುದರಿಂದ ಗುತ್ತಿಗೆ ವಹಿಸಿಕೊಂಡವರು ಕ್ಯಾಂಟೀನ್‌ಗಳಿಗೆ ಕಡಿಮೆ ಪ್ರಮಾಣದಲ್ಲಿ ತಿಂಡಿ, ಊಟ ಪೂರೈಕೆ ಮಾಡುತ್ತಾರೆ. ಒಂದು ಕ್ಯಾಂಟೀನ್‌ನಲ್ಲಿ 500 ತಿಂಡಿ ಹಾಗೂ 1 ಸಾವಿರ ಊಟ ಖರ್ಚಾಗಿದೆ ಎಂದು ಗುತ್ತಿಗೆ ಸಂಸ್ಥೆ ಸುಳ್ಳು ಲೆಕ್ಕ ನೀಡಿ ಪಾಲಿಕೆಯಿಂದ ಭರ್ತಿ ಹಣ ಪಡೆಯುತ್ತದೆ. ಈ ಅವ್ಯವಸ್ಥೆ ರಾಜ್ಯದಲ್ಲೇ ಇದ್ದು, ಸರ್ಕಾರವೇ ನಿಯಮದಲ್ಲಿ ಬದಲಾವಣೆ ಮಾಡದ ಹೊರತು ಇಲ್ಲಿನ ಅವ್ಯವಸ್ಥೆ ತಡೆ ಸಾಧ್ಯವಿಲ್ಲ ಎಂದು ಮೂಲಗಳು ತಿಳಿಸಿವೆ.

ಉಡುಪಿಯಲ್ಲಿ ಬಿಲ್ 1.95 ಕೋಟಿ ರೂ. ಪಾವತಿ ಉಡುಪಿಯ ಇಂದಿರಾ ಕ್ಯಾಂಟೀನ್‌ಗಳಿಗೆ ಗ್ರಾಹಕರ ಸಂಖ್ಯೆ ಕಡಿಮೆಯಾಗಿದ್ದರೂ, ಇಂಡೆಂಟ್ ಪ್ರಕಾರವೇ ಗುತ್ತಿಗೆ ಸಂಸ್ಥೆಗೆ ಹಣ ಪಾವತಿಯಾಗುತ್ತಿದೆ. ಜಿಲ್ಲೆಯಲ್ಲಿ ಕುಂದಾಪುರ, ಕಾರ್ಕಳ, ಮಣಿಪಾಲ, ಉಡುಪಿಯಲ್ಲಿ ನಾಲ್ಕು ಇಂದಿರಾ ಕ್ಯಾಂಟೀನ್‌ಗಳಿವೆ. ಈ ಹಿಂದೆ ಪ್ರತಿ ಹೊತ್ತಿಗೆ 500 ಮಂದಿಗೆ ತಯಾರಿಸಲಾಗುತ್ತಿದ್ದು , ಈಗ ಅದನ್ನು ಪ್ರಸ್ತುತ ಬೆಳಗ್ಗೆ 200 ಉಪಹಾರ, ಮಧ್ಯಾಹ್ನ 300 ಊಟ , ರಾತ್ರಿ 100 ಊಟಕ್ಕೆ ಇಂಡೆಂಟ್ ಇಳಿಸಲಾಗಿದೆ. ಉಡುಪಿ ನಗರದ ಕ್ಯಾಂಟೀನ್ ಸ್ವಲ್ಪ ಪ್ರಮಾಣದಲ್ಲಿ ಹೆಚ್ಚಿನ ಗ್ರಾಹಕರನ್ನು ಹೊಂದಿದೆ. ಇದನ್ನು ಹೊರತುಪಡಿಸಿ ಬೇರೆ ಇಂದಿರಾ ಕ್ಯಾಂಟಿನ್‌ಗಳಲ್ಲಿ ಗ್ರಾಹಕರ ಸಂಖ್ಯೆ ಕಡಿಮೆ. ಇಂಡೆಂಟ್ ಪ್ರಕಾರ 2 ತಿಂಗಳಿಗೊಮ್ಮೆ ಬಿಲ್ ಪಾವತಿಯಾಗುತ್ತಿದೆ. ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ 4 ಇಂದಿರಾ ಕ್ಯಾಂಟೀನ್‌ಗಳಿಗೆ ಜೂ.25, 2018ರಿಂದ ಡಿ. 2019ರವರೆಗೆ ಒಟ್ಟು 1,95,41,317ರೂ. ಪಾವತಿ ಮಾಡಲಾಗಿದೆ.

ಇಂದಿರಾ ಕ್ಯಾಂಟೀನ್‌ಗಳಲ್ಲಿ ಗುಣಮಟ್ಟದ ಆಹಾರ ಪೂರೈಸಲಾಗುತ್ತಿದೆ. ಶುಚಿತ್ವಕ್ಕೆ ಆದ್ಯತೆ ನೀಡಲಾಗಿದೆ. ಸರ್ಕಾರ ರೂಪಿಸಿದ ನಿಯ ಮ ಪ್ರಕಾರ ಗುತ್ತಿಗೆದಾರ ಸಂಸ್ಥೆಗೆ ಪಾಲಿಕೆಯಿಂದ ಬಿಲ್ ಪಾವತಿಯಾಗುತ್ತಿದೆ. ಕ್ಯಾಂಟೀನ್‌ಗಳಲ್ಲಿ ಗ್ರಾಹಕರ ಸಂಖ್ಯೆ ಕಡಿಮೆ ಇರುವ ಮಾಹಿತಿ ಇಲ್ಲ. ಸಾರ್ವಜನಿಕರಿಂದ ದೂರುಗಳು ಬಂದರೆ ಪರಿಶೀಲಿಸಲಾಗುವುದು. -ಅಜಿತ್‌ಕುಮಾರ್ ಹೆಗ್ಡೆ ಶಾನಾಡಿ ಆಯುಕ್ತರು, ಮನಪಾ