ಜಿಲ್ಲೆ

ಆ.15ರಂದು ಸ್ವಾತಂತ್ರ್ಯೋತ್ಸವ ಯಕ್ಷ ವೈಭವ, ಸಾಧಕರಿಗೆ ಸನ್ಮಾನ

ಇಂದಿರಾ ಎನ್ ಕೆ

ಕುಂದಾಪುರ: ಆದಿತ್ಯ ಟ್ರಸ್ಟ್ ಕ್ಯಾದಗಿ ನೇತೃತ್ವದಲ್ಲಿ ಸ್ವಾತಂತ್ರೃ ದಿನಾಚರಣೆ ಅಂಗವಾಗಿ ಯಕ್ಷ ವೈಭವ ಮತ್ತು ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಕೋಟೇಶ್ವರ ಅಂಕದಕಟ್ಟೆಯಲ್ಲಿ ಆ.15ರಂದು ನಡೆಯಲಿದೆ.

ಅಂದು ಮಧ್ಯಾಹ್ನ 3ಕ್ಕೆ ವಿಶಿಷ್ಟ ಹಾಗೂ ವಿನೂತನ ಶೈಲಿಯ ಯಕ್ಷಗಾನ ಪ್ರದರ್ಶನ ನಡೆಯಲಿದೆ. 86ರ ಇಳಿ ವಯಸ್ಸಿನ ಗೋಡೆಯವರ ರಾಮ, ಯಾಜಿ ಮತ್ತು ಕೊಂಡದ ಕುಳಿಯವರ ಲವಕುಶ, ತೀರ್ಥಳ್ಳಿಯವರ ಶತ್ರುಘ್ನ ಮತ್ತು ಯಲಗುಪ್ಪರ ಉರ್ವಶಿ ಹಾಗೂ ಒಂದು ಪ್ರಸಂಗವನ್ನು 15ಕ್ಕೂ ಮಿಕ್ಕಿ ಹಾಸ್ಯಗಾರರು ಪ್ರದರ್ಶಿಸಲಿದ್ದಾರೆ. ಯಕ್ಷಗಾನದಲ್ಲಿ ಡಾಕ್ಟರೇಟ್ ಪಡೆದ ಬಾರ್ಕೂರು ದೀಪಕ್ ಶೆಟ್ಟಿ, ಹಿರಿಯ ಯಕ್ಷ ಕಲಾವಿದ ಶ್ರೀ ಗೋಡೆಯವರಿಗೆ ಯಕ್ಷ ಬ್ರಹ್ಮ ಬಿರುದಾವಳಿ ಪ್ರಶಸ್ತಿ ಮತ್ತು ಕಲಾ ಪೋಷಕ , ವೈದ್ಯ ಡಾ.ಆದರ್ಶ ಹೆಬ್ಬಾರ್ ಅವರನ್ನು ಸನ್ಮಾನಿಸಲಾಗುವುದು.

ಸಂಸದ ಕೋಟ ಶ್ರೀನಿವಾಸ ಪೂಜಾರಿ, ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ, ಶಾಸಕ ಕಿರಣ್ ಕುಮಾರ್ ಕೊಡ್ಗಿ, ಸಮಾಜ ಸೇವಕ ದಿನೇಶ್ ಹೆಗ್ಡೆ ಮೊಳಹಳ್ಳಿ, ಮೇಳದ ಯಜಮಾನ ಕಿಶನ್ ಹೆಗ್ಡೆ, ಬಂಟರ ಸಂಘದ ಮುಖಂಡರಾದ ಸುಗ್ಗಿ ಸುಧಾಕರ್ ಶೆಟ್ಟಿ, ಹೊಟೇಲ್ ಉದ್ಯಮಿಗಳಾದ ಹಾಲಾಡಿ ಆದರ್ಶ ಹೆಗ್ಡೆ, ಯೋಗೀಶ್ ಗಾಣಿಗ ಮುಂಬೈ, ಶರತ್ ಶೆಟ್ಟಿ, ಸಮಾಜ ಸೇವಕರಾದ ಡಾ.ಉಮೇಶ್ ಪುತ್ರನ್, ಸುಧೀರ್ ಕುಮಾರ್ ಶೆಟ್ಟಿ, ರಾಜಾರಾಮ ಶೆಟ್ಟಿ ಬ್ರಹ್ಮಾವರ, ಗೋಪಾಡಿ ಚಿಕ್ಕು ಅಮ್ಮ ದೇವಸ್ಥಾನ ಮೊಕ್ತೇಸರ ಆನಂದ ಬಿಳಿಯ ಮೊದಲಾದವರು ಪಾಲ್ಗೊಳ್ಳಲಿದ್ದಾರೆ ಎಂದು ಆದಿತ್ಯ ಟ್ರಸ್ಟ್ ಅಧ್ಯಕ್ಷ ಕ್ಯಾದಗಿ ಮಹಾಬಲೇಶ್ವರ ಭಟ್ ಹಾಗೂ ಕಾರ್ಯದರ್ಶಿ ಪ್ರಭಾ ಭಟ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.