ಜಿಲ್ಲೆ

ಸದೃಢ ಭಾರತಕ್ಕೆ ಯುವಕರು ಶ್ರಮಿಸಿ ; ಶಾಸಕ ಎನ್.ಎಚ್.ಶಿವಶಂಕರರೆಡ್ಡಿ ಕರೆ

Chikkaballapur

ಗೌರಿಬಿದನೂರು: ಸ್ವಾತಂತ್ರ್ಯಕ್ಕಾಗಿ ಪ್ರಾಣಾರ್ಪಣೆ ಮಾಡಿದ ಮಹನೀಯರನ್ನು ಸ್ಮರಿಸುವ ಜತೆಗೆ ಅವರ ಆದರ್ಶಗಳನ್ನು ಪಾಲಿಸುವ ಮೂಲಕ ಬಲಿಷ್ಠ ಭಾರತದ ನಿರ್ಮಾಣಕ್ಕೆ ಯುವ ಪೀಳಿಗೆ ಶ್ರಮಿಸಬೇಕು ಎಂದು ಶಾಸಕ ಎನ್.ಎಚ್.ಶಿವಶಂಕರರೆಡ್ಡಿ ಕರೆ ನೀಡಿದರು.

ನಗರದ ನೇತಾಜಿ ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ 75 ವರ್ಷಗಳಲ್ಲಿ ಭಾರತ ವಿವಿಧ ರಂಗಗಳಲ್ಲಿ ಅಭಿವೃದ್ಧಿ ಹೊಂದುವ ಮೂಲಕ ವಿಶ್ವದ ಮುಂದುವರಿದ ದೇಶಗಳೊಂದಿಗೆ ಗುರುತಿಸಿಕೊಂಡಿದೆ ಹಾಗೂ ಸಂವಿಧಾನದ ಆಶಯಗಳ ಪಾಲನೆಯೊಂದಿಗೆ ಸದೃಢಗೊಂಡಿದೆ ಎಂದರು.

ಇಲ್ಲಿನ ವಿದುರಾಶ್ವತ್ಥ ಕರ್ನಾಟಕದ ಜಲಿಯನ್ ವಾಲಾಬಾಗ್ ಎಂದು ಖ್ಯಾತಿ ಪಡೆಯುವ ಮೂಲಕ ಗೌರಿಬಿದನೂರು ತಾಲೂಕು ಇತಿಹಾಸದ ಪುಟ ಸೇರಿದೆ. 1938ರ ಏ.25 ರಂದು ವಿದುರಾಶ್ವತ್ಥ ಸತ್ಯಾಗ್ರಹದಲ್ಲಿ ಹಲವರು ಪ್ರಾಣತ್ಯಾಗ ಮಾಡಿದ್ದಾರೆ. ವಿದುರಾಶ್ವತ್ಥದ ಹೋರಾಟದ ಕುರಿತು ಅರಿವು ಮೂಡಿಸಲು ಬೀದಿ ನಾಟಕ, ನಾಮಫಲಕ ಸ್ಥಾಪನೆ, ಪುಸ್ತಕಗಳನ್ನು ಮುದ್ರಿಸಿ ವಿತರಿಸಲು ವ್ಯವಸ್ಥೆ ಮಾಡುವುದಾಗಿ ಶಿವಶಂಕರರೆಡ್ಡಿ ತಿಳಿಸಿದರು.

ನಗರಸಭೆ ಅಧ್ಯಕ್ಷ ಗಾಯಿತ್ರಿ ಬಸವರಾಜು, ಪೌರಾಯುಕ್ತ ಸತ್ಯನಾರಾಯಣ್, ತಾಪಂ ಇಒ ಎನ್.ಮುನಿರಾಜು, ವೃತ್ತ ನಿರೀಕ್ಷಕ ಶಶಿಧರ್, ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀನಿವಾಸಮೂರ್ತಿ, ನಗರಸಭೆ ಸದಸ್ಯರಾದ ಅಮರನಾಥ್, ವಿ.ರಮೇಶ್, ಮಂಜುಳಾ, ರಾಮಾಂಜೀನಪ್ಪ, ಮಾರ್ಕೆಟ್ ಮೋಹನ್ ಸೇರಿ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.

ಸುಸಜ್ಜಿತ ಆಸ್ಪತ್ರೆಗೆ ಅನುಮೋದನೆ: ತಾಲೂಕು ವಿವಿಧ ರಂಗಗಳಲ್ಲಿ ಸಾಕಷ್ಟು ಅಭಿವೃದ್ಧಿ ಹೊಂದಿದೆ. ನಗರದಲ್ಲಿ 27 ಕೋಟಿ ರೂ. ವೆಚ್ಚದಲ್ಲಿ ಸುಸಜ್ಜಿತ ಆಸ್ಪತ್ರೆ ನಿರ್ಮಾಣಕ್ಕೆ ಅನುಮೋದನೆ ಸಿಕ್ಕಿದೆ. ಹೊಸೂರು ಬಳಿಯ ಎಚ್.ಎನ್ ವಿಜ್ಞಾನ ಕೇಂದ್ರ ಹಾಗೂ ನಗರದಲ್ಲಿನ ಡಾ. ಬಿ.ಆರ್.ಅಂಬೇಡ್ಕರ್ ಸ್ಮರಣಾರ್ಥ ನಿರ್ಮಿಸಲಾಗಿರುವ ‘ಸಮಾನತಾಸೌಧ’ ವಿದ್ಯಾರ್ಥಿಗಳ ಕಲಿಕೆಗೆ ಅನುಕೂಲವಾಗಲಿದೆ ಎಂದು ಶಿವಶಂಕರರೆಡ್ಡಿ ಸಂತಸ ವ್ಯಕ್ತಪಡಿಸಿದರು.