ಜಿಲ್ಲೆ

ಐತಿಹಾಸಿಕ ಚನ್ನಮ್ಮ ಕಿತ್ತೂರು ತಾಲೂಕಿನ ಅಮೃತ ಸರೋವರಗಳಲ್ಲಿ ಸ್ವಾತಂತ್ರ್ಯೋತ್ಸವ ಧ್ವಜಾರೋಹಣ

ಬೆಳಗಾವಿ : ‘ಆಜಾದಿ ಕಾ ಅಮೃತ ಮಹೋತ್ಸವ’ದ ಅಂಗವಾಗಿ ಐತಿಹಾಸಿಕ ಚನ್ನಮ್ಮ ಕಿತ್ತೂರು ತಾಲೂಕಿನಲ್ಲಿ ಅಸ್ತಿತ್ವದಲ್ಲಿರುವ ಕೆರೆಗಳನ್ನ   ಅಮೃತ ಸರೋವರಗಳನ್ನಾಗಿ ಅಭಿವೃದ್ಧಿ ಪಡಿಸಲಾಗುತ್ತಿದೆ.  ಆ. 15ರಂದು 76ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ತಾಲೂಕಿನ ಎರಡು ಅಮೃತ ಸರೋವರದ ಸ್ಥಳಗಳಲ್ಲಿ ಧ್ವಜಾರೋಹಣ ಕಾರ್ಯಕ್ರಮ ನೆರವೇರಿಸಲಾಗುವುದು ಎಂದು ತಾಲೂಕು ಪಂಚಾಯಿತಿ ಇಒ ಸುಭಾಷ ಸಂಪಗಾವಿ ತಿಳಿಸಿದ್ದಾರೆ.

ತಾಲೂಕಿನ ಉಗರಖೋಡ ಹಾಗೂ ಅವರಾದಿ ಗ್ರಾಮದ ಅಮೃತ ಸರೋವರಗಳ ಸ್ಥಳದಲ್ಲಿ ಧ್ವಜಾರೋಹಣ ಕಾರ್ಯಕ್ರಮವನ್ನು ಸ್ವಾತಂತ್ರ್ಯ ಹೋರಾಟಗಾರರು, ಅವರ ಕುಟುಂಬಸ್ಥರು, ಹುತಾತ್ಮರ ಕುಟುಂಬಸ್ಥರು, ನಿವೃತ್ತ ಯೋಧರು, ಗ್ರಾಮದ ಗಣ್ಯಮಾನ್ಯರು, ಹಿರಿಯ ನಾಗರಿಕರು ನೆರವೇರಿಸಲಿದ್ದಾರೆ. ಆಯಾ ಗ್ರಾಪಂಗಳಲ್ಲಿ ಚುನಾಯಿತ ಪ್ರತಿನಿಧಿಗಳು,  ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು, ಆಯಾ ಗ್ರಾಮದ ಮಹನಿಯರು ಹಾಗೂ ನಾಗರಿಕರೊಂದಿಗೆ ಆ. 15ರಂದು ಗ್ರಾಮದ ಕೇಂದ್ರಸ್ಥಳದಿಂದ ಅಮೃತ ಸರೋವರದ ಸ್ಥಳದವರೆಗೆ  ಜಾಥ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ಇದಲ್ಲದೇ, ತಾಲೂಕಿನ ಎಲ್ಲಾ ಗ್ರಾಮ ಪಂಚಾಯತಗಳಲ್ಲಿ ದೇಶಕ್ಕಾಗಿ ಪ್ರಾಣ ತೆತ್ತ  ವೀರಯೋಧರ ಸ್ಮರಣಾರ್ಥ ನಿರ್ಮಿಸಲಾದ ಶಿಲಾಫಲಕದ ಮೇಲೆ ಯೋಧರ ಹೆಸರು ಬರೆಸುವ ಮೂಲಕ ಹಾಗೂ ಅವರ ಕುಟುಂಬದವರಿಗೆ ಸನ್ಮಾನಿಸುವ ಮೂಲಕ ಗೌರವ ಸಲ್ಲಿಸಲಾಗುವುದು. ಹಾಗೂ ಶಿಲಾ ಫಲಕದಲ್ಲಿ ಹುತಾತ್ಮರಾದ ವೀರಯೋಧರಿಗೆ ಗೌರವ ನಮನಗಳನ್ನು ಹಾಗೂ ಸಮಾಜ ಸುಧಾರಕರಾದ ಬಸವಣ್ಣನವರ ವಚನ ಮತ್ತು  ಮಾನ್ಯ ಪ್ರಧಾನ ಮಂತ್ರಿ, ಮಾನ್ಯ ಮುಖ್ಯಮಂತ್ರಿ ಯವರ ಘೋಷವಾಕ್ಯ ಬರೆಯಿಸಲಾಗುತ್ತಿದೆ.

ನನ್ನ ಮಣ್ಣು ನನ್ನ ದೇಶ (ಮೇರಿ ಮಟ್ಟಿ, ಮೇರಾ ದೇಶ್) ಅಭಿಯಾನದ ಅಂಗವಾಗಿ ಸರಕಾರದ ನಿರ್ದೇಶನದನ್ವಯ  ತಾಯ್ನೆಲಕ್ಕೆ ನಮನ ಮತ್ತು ವೀರಯೋಧರಿಗೆ ವಂದನೆ ಸಲ್ಲಿಸುವ ಉದ್ದೇಶ ಹೊಂದಲಾಗಿದೆ. ಮತ್ತು ವಸುಧಾ ವಂದನ್ ಕಾರ್ಯಕ್ರಮದಡಿ ಭೂಮಿಯನ್ನು ಹಸಿರೀಕರಣಗೊಳಿಸಲು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ 75 ಸಸಿಗಳನ್ನು ನೆಡುವ ಮೂಲಕ ಪರಸರ ಸಂರಕ್ಷಣೆ ಮಾಡುವ ಉದ್ದೇಶ ಹೊಂದಲಾಗಿದೆ ಎಂದು ತಾಪಂ ಇಒ ಸುಭಾಷ ಸಂಪಗಾವಿ ತಿಳಿಸಿದ್ದಾರೆ.