ಜಿಲ್ಲೆ

ದೇಶಪ್ರೇಮ ರಕ್ತಗತವಾಗಬೇಕು : ಸಚಿವ ಮಹದೇವಪ್ಪ

ಸದೇಶ್ ಕಾರ್ಮಾಡ್

ಮೈಸೂರು: ಜಿಲ್ಲಾಡಳಿತ ವತಿಯಿಂದ ನಗರದ ಬನ್ನಿಮಂಟಪದ ಪಂಜಿನಕವಾಯತು ಮೈದಾನದಲ್ಲಿ ಮಂಗಳವಾರ 77ನೇ ಸ್ವಾತಂತ್ರೃ ದಿನವನ್ನು ಸಡಗರ, ಸಂಭ್ರಮದೊಂದಿಗೆ ಆಚರಿಸಲಾಯಿತು.

ಜಿಲ್ಲಾ ಉಸ್ತುವಾರಿ ಸಚಿವ ಸಚಿವ ಡಾ.ಎಚ್.ಸಿ. ಮಹದೇವಪ್ಪ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ನೇತೃತ್ವದಲ್ಲಿ ನಡೆದ ಅಹಿಂಸಾತ್ಮಕ ಹೋರಾಟ ವಿಶ್ವದ ಇತಿಹಾಸದಲ್ಲೇ ಮಾದರಿಯಾಗಿದೆ. ಯಾವುದೇ ರಕ್ತಪಾತವಿಲ್ಲದೆ, ಮದ್ದುಗುಂಡುಗಳ ಕಾಳಗವಿಲ್ಲದೆ ಸತ್ಯ, ಅಹಿಂಸೆ, ಸತ್ಯಾಗ್ರಹದಂತಹ ಅಹಿಂಸಾತ್ಮಕ ಅಸ್ತ್ರಗಳ ಮೂಲಕ ಬ್ರಿಟಿಷರನ್ನು ದೇಶ ಬಿಟ್ಟು ಹೋಗುವಂತೆ ಮಾಡಿದ ವಿನೂತನ ಹೋರಾಟವಿದು. ಸ್ವಾತಂತ್ರೃಕ್ಕಾಗಿ ತ್ಯಾಗ, ಬಲಿದಾನ ಗೈದವರನ್ನು ನಾವಿಂದು ಸ್ಮರಿಸಿಕೊಳ್ಳಬೇಕು ಎಂದರು.

ನಮ್ಮ ದೇಶ ಪ್ರೇಮ ಸ್ವಾತಂತ್ರೃ ದಿನಾಚರಣೆ ಸಂದರ್ಭಕಷ್ಟೇ ಸೀಮಿತಗೊಳ್ಳದೆ ಪ್ರತಿದಿನ, ಪ್ರತಿಕ್ಷಣ ರಕ್ತಗತವಾಗಬೇಕು. ಭಾಷೆ ಧರ್ಮ, ಸಂಸ್ಕೃತಿಗಳನ್ನು ಮೀರಿ ಮನುಷ್ಯರೆಲ್ಲ ಒಂದೇ ಎಂಬ ಭಾವದಲ್ಲಿ ನಾವೆಲ್ಲ ಒಂದಾಗಬೇಕು. ಆ ಮೂಲಕ ದೇಶದ ಏಳಿಗೆಗೆ ದುಡಿಯಬೇಕು. ಸ್ವಾತಂತ್ರೃ ಹೋರಾಟದಲ್ಲಿ ಕರ್ನಾಟಕದ ಪಾತ್ರ ಅಭೂತಪೂರ್ವವಾದುದು. ಬ್ರಿಟಿಷರ ಕಾನೂನುಗಳ ವಿರುದ್ಧ ಹೋರಾಡಿದ ಹಲಗಲಿಯ ಬೇಡವೀರರು, ಬೈಲಹೊಂಗಲದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ, ವೀರರಾಣಿ ಕಿತ್ತೂರು ಚೆನ್ನಮ್ಮ, ಬೂದಿ ಬಸಪ್ಪ ನಾಯಕ, ಸುರಪುರದ ವೆಂಕಟಪ್ಪ ನಾಯಕ, ‘ಕರ್ನಾಟಕದ ಸಿಂಹ’ ಗಂಗಾಧರರಾವ್ ದೇಶಪಾಂಡೆ ಮೊದಲಾದ ಧೀರ ಹೋರಾಟಗಾರರ ಬಲಿದಾನವನ್ನು ನಾವು ಈ ದಿನ ಸ್ಮರಿಸಬೇಕಾಗಿದೆ ಎಂದು ಹೇಳಿದರು.

ನಮ್ಮದು ಜನಪರ ಸರ್ಕಾರ, ನಾಡಿನ ಜನತೆಯ ಶ್ರೇಯೋಭಿವೃದ್ಧಿಯೇ ನಮ್ಮ ಆದ್ಯ ಕರ್ತವ್ಯ. ಚುನಾವಣಾ ಪ್ರಣಾಳಿಕೆಯಲ್ಲಿ ನಾಡಿನ ಜನತೆಗೆ ನೀಡಿರುವ ವಚನದಂತೆ ಸಮೃದ್ಧ ಕರ್ನಾಟಕವನ್ನು ನಿರ್ಮಿಸಲು ಬದ್ಧರಾಗಿದ್ದೇವೆ. ಹಲವು ಯೋಜನೆಗಳನ್ನು ರೂಪಿಸಿ ಅನುಷ್ಠಾನಕ್ಕೆ ತಂದಿದ್ದೇವೆ. ಈಗಾಗಲೇ ಶಕ್ತಿ ಯೋಜನೆ, ಅನ್ನ ಭಾಗ್ಯ ಹಾಗೂ ಗೃಹಜ್ಯೋತಿ ಯೋಜನೆಗಳು ಜಾರಿಗೆ ತಂದಿದ್ದೇವೆ. ಗೃಹಲಕ್ಷ್ಮಿ ಯೋಜನೆಗೆ ನೋಂದಣಿ ಪ್ರಕ್ರಿಯೆ ನಡೆಯುತ್ತಿದ್ದು, ಯುವ ನಿಧಿ ಯೋಜನೆಯನ್ನೂ ಶೀಘ್ರದಲ್ಲೇ ಜಾರಿಗೊಳಿಸಲಾಗುವುದು ಎಂದರು.

ಮೈಸೂರು ಮಲ್ಲಿಗೆ, ನಂಜನಗೂಡು ರಸಬಾಳೆ ಹಾಗೂ ಮೈಸೂರು ವೀಳ್ಯದೆಲೆಗಳು ವಿಶೇಷ ಮಾನ್ಯತೆ ಪಡೆದಿವೆ. ಇವುಗಳ ಉತ್ಪಾದನೆ, ಸಂಶೋಧನೆ, ಮಾರುಕಟ್ಟೆ ಮತ್ತು ಬ್ರಾೃಂಡಿಂಗ್ ಉತ್ತೇಜಿಸಲು ನೂತನ ಕಾರ್ಯಕ್ರಮಗಳನ್ನು ರೂಪಿಸುವುದಾಗಿ ಸರ್ಕಾರ ಘೋಷಣೆ ಮಾಡಿದೆ. ಜಿಲ್ಲೆಯಲ್ಲಿ ಖಾಸಗಿ ಸಹಭಾಗಿತ್ವದಲ್ಲಿ ಚಿತ್ರನಗರಿ ನಿರ್ಮಾಣ ಮಾಡಲಾಗುವುದು ಎಂದು ಹೇಳಿದರು.

ನಗರದಲ್ಲಿ ಗುಂಪು ವಸತಿ ಯೋಜನೆ ಅನುಷ್ಠಾನಗೊಳಿಸಲು ಉದ್ದೇಶಿಸಲಾಗಿದ್ದು, ವಿಜಯನಗರ 4ನೇ ಹಂತದ 2ನೇ ಘಟದಲ್ಲಿ ಮೊದಲ ಹಂತದಲ್ಲಿ 560 ಮನೆಗಳನ್ನು 12 ಬಹುಮಹಡಿ ಕಟ್ಟಡದಲ್ಲಿ ನಿರ್ಮಿಸಲಾಗುವುದು. ನಗರದ ಬೆಳವಣಿಗೆಯನ್ನು ಗಮನದಲ್ಲಿಟ್ಟುಕೊಂಡು ಹೊರ ಪರಿಧಿರಸ್ತೆ ನಿರ್ಮಾಣ ಮಾಡಲು ಉದ್ದೇಶಿಸಲಾಗಿದ್ದು, ಒಟ್ಟು 73.25 ಕಿ.ಮೀ. ಉದ್ದದ ಹೊರ ಪರಿಧಿ ರಸ್ತೆ ನಿರ್ಮಿಸಲಾಗುವುದು ಎಂದು ಹೇಳಿದರು.

ಸ್ವಾತಂತ್ರೃ ಹೋರಟಗಾರರಿಗೆ ಸನ್ಮಾನ

ಸ್ವಾತಂತ್ರೃ ಹೋರಟಗಾರರಾದ ವೈ.ಸಿ. ರೇವಣ್ಣ, ಎಂ.ಬಿ. ಹಾಲೇಗೌಡ, ಸಿ.ಆರ್. ರಂಗಶೆಟ್ಟಿ, ಡಾ.ಎಂ. ಸೋಮಶೇಖರಯ್ಯ, ಸ್ವಾತಂತ್ರೃ ಹೋರಾಟಗಾರರ ಪತ್ನಿಯರಾದ ವೇದಾಂಬ, ಗಿರಿಜಾ, ನಾಗರತ್ನಮ್ಮ, ವಿಮಲಮ್ಮ, ಎಂ. ಪ್ರೇಮಾವತಿ ಹಾಗೂ ಮಾಣಿಕ್ಯ ಅವರನ್ನು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ಸನ್ಮಾನಿಸಿದರು.

ಆಕರ್ಷಕ ಪಥ ಸಂಚಲನ

ಪೊಲೀಸ್, ಅಬಕಾರಿ, ಅಗ್ನಿಶಾಮಕ ದಳ, ಎನ್‌ಸಿಸಿ, ಸ್ಕೌಟ್ ಆ್ಯಂಡ್ ಗೈಡ್ಸ್, ಸೇವಾದಳ, ಶಾಲಾ ವಿದ್ಯಾರ್ಥಿಗಳು ಸೇರಿದಂತೆ 23 ತಂಡಗಳಿಂದ ಆಕರ್ಷಕ ಪಥ ಸಂಚಲನ ನಡೆಯಿತು. ಪಥ ಸಂಚಲನದಲ್ಲಿ ಪಾಲ್ಗೊಂಡ ತಂಡಗಳಿಗೆ ಮೂರು ವಿಭಾಗದಲ್ಲಿ ಬಹುಮಾನ ವಿತರಿಸಲಾಯಿತು. ಸಶಸ್ತ್ರ ವಿಭಾಗದಲ್ಲಿ ನಗರ ಸಶಸ್ತ್ರ ಮೀಸಲು ಪಡೆ ಪ್ರಥಮ, ಕೆಎಸ್‌ಆರ್‌ಪಿ ದ್ವಿತೀಯ ನಗರ ನಾಗರಿಕ ಪೊಲೀಸ್ ತೃತೀಯ, ಶಸ್ತ್ರರಹಿತ ವಿಭಾಗದಲ್ಲಿ ಎನ್‌ಸಿಸಿ ಪ್ರಥಮ, ಅಬಕಾರಿ ದ್ವಿತೀಯ, ಅಗ್ನಿ ಶಾಮಕ ದಳ ತೃತೀಯ, ಶಾಲಾ ವಿಭಾಗದಲ್ಲಿ ಪೊಲೀಸ್ ಪಬ್ಲಿಕ್ ಸ್ಕೂಲ್ ಬಾಲಕಿಯರ ತಂಡ ಪ್ರಥಮ, ಪೊಲೀಸ್ ಪಬ್ಲಿಕ್ ಸ್ಕೂಲ್ ಬಾಲಕರ ತಂಡ ದ್ವಿತೀಯ, ಭಾರತ ಸೇವಾದಳ ಬಾಲಕರ ತಂಡ ತೃತೀಯ ಬಹುಮಾನ ಪಡೆಯಿತು.
ವೇದಿಕೆಯಲ್ಲಿ ಮೇಯರ್ ಶಿವಕುಮಾರ್, ಶಾಸಕ ತನ್ವೀರ್ ಸೇಠ್, ವಿಧಾನ ಪರಿಷತ್ ಸದಸ್ಯರಾದ ಮರಿತಿಬ್ಬೇಗೌಡ, ಸಿ.ಎನ್. ಮಂಜೇಗೌಡ, ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ, ನಗರ ಪೊಲೀಸ್ ಆಯುಕ್ತ ರಮೇಶ್ ಬಾನೋತ್ ಹಾಗೂ ಇತರರು ಇದ್ದರು.