ಮಂಡ್ಯ: ಹಲವಾರು ನಾಯಕರು ಹೋರಾಟದ ಜತೆಗೆ ಪ್ರಾಣ ತ್ಯಾಗ ಮಾಡಿ ನಮಗೆ ಸ್ವಾತಂತ್ರ್ಯ ದೊರಕಿಸಿಕೊಟ್ಟಿದ್ದಾರೆ. ಅವರ ಸ್ಮರಣೆ ಜತೆಗೆ ಆದರ್ಶವನ್ನು ಮೈಗೂಡಿಸಿಕೊಂಡು ಉತ್ತಮ ನಾಗರೀಕರಾಗುವಂತೆ ವಿದ್ಯಾರ್ಥಿಗಳಿಗೆ ಶಿಕ್ಷಕ ಕೆ.ಆರ್.ಶಶಿಧರ ಈಚಗೆರೆ ಕರೆ ನೀಡಿದರು.
ತಾಲೂಕಿನ ಜೋಡಿ ಹೊಡಾಘಟ್ಟ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಮಂಡ್ಯ ಸಕ್ಕರೆನಾಡು ಲಯನ್ಸ್ ಸಂಸ್ಥೆ ಸಹಯೋಗದೊಂದಿಗೆ ಆಯೋಜಿಸಿದ್ದ ಸ್ವಾತಂತ್ರ್ಯೋತ್ಸವದಲ್ಲಿ ಪ್ರಧಾನ ಭಾಷಣ ಮಾಡಿದ ಅವರು, ಇಡೀ ವಿಶ್ವದಾದ್ಯಂತ ಭಾರತೀಯರು ಸ್ವಾತಂತ್ರ್ಯ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸುವ ಮೂಲಕ ಭಾಷೆ, ಧಾರ್ಮಿಕ ಹಾಗೂ ಸಾಂಸ್ಕೃತಿಕವಾಗಿ ನಾವೆಲ್ಲ ಒಂದೇ ಎನ್ನುವ ಸಂದೇಶ ಸಾರಿದ್ದಾರೆ. ವಿದ್ಯಾರ್ಥಿಗಳು ಸ್ವಾತಂತ್ರ್ಯ ಹೋರಾಟಗಾರರ ಆದರ್ಶಗಳನ್ನು ಪಾಲಿಸುವ ಮೂಲಕ ಸುಂದರ ಭಾರತ ನಿರ್ಮಾಣಕ್ಕೆ ಮುಂದಾಗಬೇಕು ಎಂದರು.
ಎಸ್‌ಡಿಎಂಸಿ ಅಧ್ಯಕ್ಷೆ ಶ್ವೇತಾ ಧ್ವಜಾರೋಹಣ ಮಾಡಿದರು. ಗ್ರಾಮ ಪಂಚಾಯಿತಿ ಅಧ್ಯಕ್ಷ ಬಿ.ಎಸ್.ಮಹೇಶ್, ಉಪಾಧ್ಯಕ್ಷೆ ಮಂಜುಳಮ್ಮ, ಪಿಡಿಒ ಕೋಮಲಾ, ಮುಖಂಡ ರಾಮಕೃಷ್ಣೇಗೌಡ, ಪ್ರಭಾರಿ ಮುಖ್ಯ ಶಿಕ್ಷಕ ನಾರಾಯಣಅರಸ್, ಶಿಕ್ಷಕರಾದ ಡಿ.ಎಸ್.ಕೃಷ್ಣೇಗೌಡ, ಆರ್.ಚಂದ್ರಮತಿ, ಬಿ.ಸಿ.ಶಿಲ್ಪಾ, ಪವಿತ್ರಾ, ಶೋಭಾ, ಎಸ್‌ಡಿಎಂಸಿ ಸದಸ್ಯರಾದ ಮರಿದಾಸ, ಸಿದ್ದರಾಜು, ತನುಜಾ ಇದ್ದರು.
ಇದೇ ಸಂದರ್ಭದಲ್ಲಿ ಸಕ್ಕರೆನಾಡು ಲಯನ್ಸ್ ಸಂಸ್ಥೆ ಆಯೋಜಿಸಿದ್ದ ನನ್ನ ಕನಸಿನ ಭಾರತ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಶಿಕ್ಷಕ ಎಂ.ಜಿ.ಚಂದ್ರಶೇಖರ್ ಶಾಲೆಗೆ ಅಕ್ಷರದಾಸೋಹ ಕಾರ್ಯಕ್ರಮಕ್ಕೆ ಕುಕ್ಕರ್ ಹಾಗೂ ಪಾತ್ರೆಗಳನ್ನು ಉಚಿತವಾಗಿ ನೀಡಿದರು.