ಜಿಲ್ಲೆ

ಅಚ್ಚರಿಗೆ ವೇದಿಕೆಯಾದ ಸ್ವಾತಂತ್ರ್ಯ ಸಂಭ್ರಮ

ಗಂಗಾಧರ ಬಿ ವಿ

ರಾಮನಗರ: ಸ್ವಾತಂತ್ರ್ಯ ದಿನದ ಸಂಭ್ರಮ ಜಿಲ್ಲೆಯಲ್ಲಿ ರಾಜಕೀಯ ವೇದಿಕೆಗೆ ಸಾಯಾಯಿತು. ಡಿಸಿಎಂ ಡಿ.ಕೆ.ಶಿವಕುಮಾರ್​ ಚನ್ನಪಟ್ಟಣದಲ್ಲಿ ಧ್ವಜಾರೋಹಣ ನೆರವೇರಿಸಿ, ಹೊಸ ಇತಿಹಾಸ ಬರೆದರೆ ಮತ್ತೊಂದೆಡೆ ನೂತನ ಸಂಸದ ಡಾ.ಸಿ.ಎನ್​.ಮಂಜುನಾಥ್​ ಕನಕಪುರದಲ್ಲಿ ನಡೆದ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಮೂಲಕ ರಾಜಕೀಯ ಸಂದೇಶ ರವಾನೆ ಮಾಡಿದ್ದಾರೆ.

ಒಂದೇ ವೇದಿಕೆಯಲ್ಲಿ ರಾಜಕೀಯ ವೈರಿಗಳು

ಉಪಚುನಾವಣೆಯನ್ನು ಗಮನದಲ್ಲಿ ಇಟ್ಟುಕೊಂಡು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್​ ಇದೇ ಮೊದಲ ಬಾರಿಗೆ ಚನ್ನಪಟ್ಟಣದಲ್ಲಿ ಸ್ವಾತಂತ್ರ್ಯ ದಿನದಂದು ಧ್ವಜಾರೋಹಣ ನೆರವೇರಿಸಿದರು. ಈ ಮೂಲಕ ಜೆಡಿಎಸ್​ & ಬಿಜೆಪಿ ಮೈತ್ರಿಯ ಭದ್ರಕೋಟೆಯಾಗಿರುವ ಚನ್ನಪಟ್ಟಣದಲ್ಲಿ ತಮ್ಮ ಛಾಪು ಮೂಡಿಸುವ ಯತ್ನ ಬಲ ತುಂಬುವ ಕೆಲಸ ಮಾಡಿದರು. ಇದೇ ವೇದಿಕೆಯನ್ನು ವಿಧಾನ ಪರಿಷತ್​ ಸದಸ್ಯ ಹಾಗೂ ಬಿಜೆಪಿ ನಾಯಕ ಸಿ.ಪಿ.ಯೋಗೇಶ್ವರ್​ ಡಿ.ಕೆ.ಶಿವಕುಮಾರ್​ ಅವರೊಟ್ಟಿಗೆ ಹಂಚಿಕೊಳ್ಳುವ ಮೂಲಕ ಉಪಚುನಾವಣೆ ಟಿಕೆಟ್​ ಸಂಬಂಧ ನಡೆಯುತ್ತಿರುವ ಗುಸು ಗುಸು ಚರ್ಚೆಗೆ ಮತ್ತಷ್ಟು ಅವಕಾಶವನ್ನು ಮಾಡಿಕೊಟ್ಟಿದ್ದಾರೆ.

ಡಾಕ್ಟರ್​ ಸದ್ದಿಲ್ಲದೆ ಆಪರೇಷನ್​

ಒಂದೆಡೆ ಡಿ.ಕೆ.ಶಿವಕುಮಾರ್​ ಎಚ್​.ಡಿ.ಕುಮಾರಸ್ವಾಮಿ ಪ್ರತಿನಿಧಿಸುತ್ತಿದ್ದ ಚನ್ನಪಟ್ಟಣ ಕ್ಷೇತ್ರವನ್ನು ಕಬ್ಜಾ ಮಾಡಲು ಸರ್ಕಸ್​ ಮಾಡುತ್ತಿರುವ ನಡುವೆಯೇ ಬೆಂಗಳೂರು ಗ್ರಾಮಾಂತರ ಲೋಕಸಭೆ ಕ್ಷೇತ್ರದ ಸಂಸದ ಡಾ.ಸಿ.ಎನ್​.ಮಂಜುನಾಥ್​ ಸದ್ದಿಲ್ಲದೆ ಕನಕಪುರದಲ್ಲಿ ಆಪರೇಷನ್​ ಆರಂಭಿಸಿದ್ದಾರೆ.

ಡಿ.ಕೆ. ಸಹೋದರರ ಪ್ರಭಾವ ಹೆಚ್ಚಿರುವ ರಾಮನಗರ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯ ಹಾರೋಹಳ್ಳಿ ಮತ್ತು ಕನಕಪುರದಲ್ಲಿ ಸ್ವಾತಂತ್ರ$್ಯ ಸಂಭ್ರಮದಲ್ಲಿ ಪಾಲ್ಗೊಳ್ಳುವ ಮೂಲಕ ಎಚ್ಚರಿಕೆ ಗಂಟೆ ನೀಡಿದ್ದಾರೆ.

ಇಷ್ಟು ಮಾತ್ರವಲ್ಲದೇ, ಕನಕಪುರದಲ್ಲಿ ತಮ್ಮ ಕಚೇರಿಯನ್ನೂ ತೆರೆಯುವ ಮೂಲಕ ಪಕ್ಷ ಸಂಟನೆಗೆ ಮುಂದಾಗಿರುವ ಮುನ್ಸೂಚನೆಯನ್ನು ನೀಡಿದ್ದಾರೆ.

ಅಧಿಕಾರಿಗಳ ಅಲೆದಾಟ

ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ಇಬ್ಬರು ಸಚಿವರು ಬೇರೆ ಬೇರೆ ಕಡೆ ಧ್ವಜಾರೋಹಣ ಮಾಡಿದ ಕಾರಣ ಜಿಲ್ಲಾಮಟ್ಟದ ಅಧಿಕಾರಿಗಳು ಶಿಷ್ಠಾಚಾರ ಪಾಲನೆ ಅಡ ಕತ್ತರಿಯಲ್ಲಿ ಸಿಲುಕಿದ್ದರು.

ಜಿಲ್ಲಾಧಿಕಾರಿ ಯಶವಂತ್​ ವಿ ಗುರುಕರ್​, ಎಸ್​ಪಿ ಕಾರ್ತಿಕ್​ ರೆಡ್ಡಿ, ಸಿಇಓ ದಿಗ್ವಿಜಯ್​ ಬೋಡ್ಕೆ ಜಿಲ್ಲಾಕೇಂದ್ರದಲ್ಲಿ ಸಚಿವ ರಾಮಲಿಂಗಾರೆಡ್ಡಿ ಧ್ವಜಾರೋಹಣ ನೆರವೇರಿಸುತ್ತಿದ್ದಂತೆ, ಜಿಲ್ಲಾ ಕ್ರೀಡಾಂಗಣದಿಂದ ಚನ್ನಪಟ್ಟಣದತ್ತ ದೌಡಾಯಿಸುವ ಮೂಲಕ ಡಿಸಿಎಂ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.