walkathan 
ಜಿಲ್ಲೆ

ಹರ್ ಘರ್ ತಿರಂಗದೊಂದಿಗೆ ಸ್ವಾತಂತ್ರ್ಯೋತ್ಸವ

ಶಿವರಾಜ.ಎಂ

ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ಗ್ರಾಮಾಂತರ ಜಿಲ್ಲಾಡಳಿತದಿಂದ ಈ ಬಾರಿಯ 78 ಸ್ವಾತಂತ್ರ್ಯ ದಿನ ಆಚರಿಸಲು ದೇವನಹಳ್ಳಿ ಟೌನ್ ಕ್ರೀಡಾಂಗಣದ ಮದುವಣಗಿತ್ತಿಯಂತೆ ಸಿಂಗಾರಗೊಳ್ಳಲಿದೆ. ಹರ್ ಘರ್ ತಿರಂಗ ಅಭಿಯಾನ ಯಶಸ್ವಿಗೊಳಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ ಸರ್ವ ಸಿದ್ದತೆ ನಡೆಸುವ ನಡುವೆಯೇ ಎಲ್ಲೆಡೆ ರಾಷ್ಟ್ರಧ್ವಜ ಮಾರಾಟ ಭರ್ಜರಿಯಾಗಿ ನಡೆಯುತ್ತಿದೆ.
ನಗರ ಹಾಗೂ ಪಟ್ಟಣ ಪ್ರದೇಶಗಳು ಸೇರಿ ಗ್ರಾಮೀಣ ಪ್ರದೇಶಗಳ ಪ್ರತಿ ಅಂಗಡಿಗಳಲ್ಲೂ ರಾಷ್ಟ್ರಧ್ವಜಗಳನ್ನು ಕಾಣಬಹುದಾಗಿದೆ, ಪ್ಲಾಸ್ಟಿಕ್ ಉತ್ಪನ್ನ ಬಳಕೆಯನ್ನು ಕಟ್ಟುನಿಟ್ಟಾಗಿ ನಿಷೇಧಿಸಿರುವ ಹಿನ್ನೆಲೆಯಲ್ಲಿ ಬಟ್ಟೆ ಹಾಗೂ ಕಾಗದದ ಧ್ವಜಗಳ ಮಾರಾಟ ಅಬ್ಬರವಾಗಿದೆ. ಈ ಬಾರಿಯ ಸ್ವಾತಂತ್ರ ಸಂಭ್ರಮವನ್ನು ವೈವಿಧ್ಯಮಯವಾಗಿ ಮತ್ತು ವರ್ಣರಂಜಿತವಾಗಿ ಆಚರಿಸಲು ಜಿಲ್ಲಾಡಳಿತ ಹೆಚ್ಚಿನ ಉತ್ಸುಕತೆ ತೋರಿದೆ. ಈ ಸಂಭ್ರಮದ ಒಂದು ಭಾಗವಾಗಿ ಹರ್‌ಘರ್ ತಿರಂಗಾ ಎಂಬ ಘೋಷವಾಕ್ಯದೊಂದಿಗೆ ಆ. 15 ರವರೆಗೆ ಜಿಲ್ಲೆಯ ಪ್ರತಿ ಮನೆ-ಮನೆಯಲ್ಲೂ ರಾಷ್ಟ್ರಧ್ವಜ ಹಾರಿಸಿ,ದೇಶಾಭಿಮಾನ ಬಿಂಬಿಸುವ ಮೂಲಕ ರಾಷ್ಟ್ರ ಪ್ರೇಮವನ್ನು ಅಭಿವ್ಯಕ್ತಗೊಳಿಸುವಂತೆ ಜಿಲ್ಲಾಧಿಕಾರಿ ಡಾ.ಎನ್.ಶಿವಶಂಕರ್ ಕರೆ ನೀಡಿದ್ದಾರೆ. ದೇವನಹಳ್ಳಿ ಟೌನ್ ಕ್ರೀಡಾಂಗಣದಲ್ಲಿ ಗಣ್ಯರಿಂದ ಧ್ವಜಾರೋಹಣದೊಂದಿಗೆ ಪೊಲೀಸ್ ಕವಾಯತು ನಡೆಯಲಿದೆ, ವಿವಿಧ ಶಾಲಾ ಕಾಲೇಜು ವಿದ್ಯಾರ್ಥಿಗಳು ದೇಶಾಭಿಮಾನ ಬಿಂಬಿಸುವ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಡಲು ತಾಲೀಮು ನಡೆಸಿದ್ದಾರೆ.
ಶಾಲಾ ಕಾಲೇಜುಗಳಲ್ಲಿ ಕಾರ್ಯಕ್ರಮ: ಹರ್‌ಘರ್ ತಿರಂಗಾ ಅಭಿಯಾನದಡಿ ರಾಷ್ಟ್ರಧ್ವಜದ ಮಹತ್ವದ ಕುರಿತು ಜಿಲ್ಲೆಯ ವಿವಿಧ ಶಾಲಾ-ಕಾಲೇಜುಗಳಲ್ಲಿ ಚರ್ಚಾ ಸ್ಫರ್ಧೆ. ಸಂಗೀತ ಕಛೇರಿಗಳನ್ನು ಆಯೋಜಿಸಲಾಗಿದೆ ತ್ರಿವರ್ಣ ಧ್ವಜಗಳನ್ನು ಹಿಡಿದು ಜಾಥಾ, ಮೆರವಣಿಗಳನ್ನು ಮಾಡಿ ಸ್ವಾತಂತ್ರೋತ್ಸವಕ್ಕೆ ಸಂಬಂಧಿಸಿದ ಗೀತ ಗಾಯನಗಳನ್ನು ಏರ್ಪಡಿಸುವ ಸಂಬಂಧ ಸಂಬಂಧ ಶಿಕ್ಷಣ ಇಲಾಖೆ ಕಾರ್ಯಕ್ರಮ ರೂಪಿಸಿದೆ. ಗ್ರಾಮಾಂತರ ಪ್ರದೇಶಗಳಲ್ಲಿ ಎಲ್ಲ ಪಂಚಾಯಿತಿಗಳಲ್ಲಿ ಹರ್‌ಘರ್ ತಿರಂಗಾ ಅಭಿಯಾನ ಕಾರ್ಯಕ್ರಮದ ಅಂಗವಾಗಿ ಬೈಕ್ ರ‌್ಯಾಲಿ, ಸೈಕಲ್ ರ‌್ಯಾಲಿ, ಇನ್ನಿತರ ವಾಹನಗಳ ಮೂಲಕ ರ‌್ಯಾಲಿ ನಡೆಸಲು ಸಿದ್ದತೆ ನಡೆದಿದೆ, ನಗರ ಹಾಗೂ ಗ್ರಾಮೀಣ ಪ್ರದೇಶದ ಸಾರ್ವಜನಿಕರು ತಮ್ಮ ಮನೆಗಳ ಮೇಲೆ 15 ರ ವರೆಗೆ ತ್ರಿವರ್ಣ ಧ್ವಜವನ್ನು ಹಾರಿಸಿ, ತಿರಂಗ ಅಭಿಯಾನದ ಛಾಯಾಚಿತ್ರಗಳನ್ನು ಅಪ್‌ಲೋಡ್ ಮಾಡುವಂತೆ ಡಿಸಿ ಕರೆ ನೀಡಿದ್ದಾರೆ.
9 ಗಂಟೆಗೆ ಧ್ವಜಾರೋಹಣ: ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯಿತಿ ವತಿಯಿಂದ 15 ರಂದು ಬೆಳಗ್ಗೆ 9 ಗಂಟೆಗೆ ದೇವನಹಳ್ಳಿ ಟೌನ್ ಕ್ರೀಡಾಂಗಣದಲ್ಲಿ ರಾಷ್ಟ್ರ ಧ್ವಜಾರೋಹಣ ಹಮ್ಮಿಕೊಳ್ಳಲಾಗಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್.ಮುನಿಯಪ್ಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ಧ್ವಜಾರೋಹಣ ನೆರವೇರಿಸಲಿದ್ದಾರೆ.
5ನೇ ಹಣಕಾಸು ಆಯೋಗದ ಅಧ್ಯಕ್ಷ ಸಿ. ನಾರಾಯಣಸ್ವಾಮಿ, ರಾಜ್ಯ ವಿದ್ಯುನ್ಮಾನ ಅಭಿವೃದ್ಧಿ ನಿಗಮ ನಿಯಮಿತದ ಅಧ್ಯಕ್ಷ ಶರತ್ ಬಚ್ಚೇಗೌಡ, ಸಂಸದ ಡಾ.ಕೆ.ಸುಧಾಕರ್, ಎಂಎಲ್‌ಸಿ ಎಂಟಿಬಿ ನಾಗರಾಜ್ ಸೇರಿ ವಿವಿಧ ಜನಪ್ರತಿನಿಧಿಗಳು ಹಾಜರಿರಲಿದ್ದಾರೆ. ಮೊದಲಿಗೆ ಸಚಿವರಿಂದ ಧ್ವಜಾರೋಹಣ ಮತ್ತು ರಾಷ್ಟ್ರಗೀತೆ ನಡೆಯಲಿದ್ದು ನಂತರ ನಾಡಗೀತೆ, ಪರೇಡ್ ವೀಕ್ಷಣೆ, ಗೌರವ ರಕ್ಷೆ,ಸ್ವಾತಂತ್ರ್ಯ ದಿನಾಚರಣೆಯ ಸಂದೇಶ, ಅಂಗಾಂಗ ದಾನ ಮಾಡಿರುವ ಕುಟುಂಬದ ಸದಸ್ಯರಿಗೆ ಪ್ರಶಂಸನಾ ಪತ್ರ ವಿತರಣೆ ಬಳಿಕ ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.