ಹುಬ್ಬಳ್ಳಿ: ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಕರ್ನಾಟಕ ರಾಜ್ಯ ಕಟ್ಟಡ ಮತ್ತು ಅಸಂಘಟಿತ ಕಾರ್ಮಿಕರ ಒಕ್ಕೂಟ ಹಾಗೂ ಧಾರವಾಡ ವಿಭಾಗದ ಕಟ್ಟಡ ಕಾರ್ಮಿಕರ ಸಂಘಗಳಿಂದ ನಗರದಲ್ಲಿ ಸೋಮವಾರ ಪ್ರತಿಭಟನಾ ಮೆರವಣಿಗೆ ನಡೆಯಿತು.
ಇಲ್ಲಿಯ ಅಂಬೇಡ್ಕರ್ ವೃತ್ತದಿಂದ ಪ್ರತಿಭಟನಾ ಮೆರವಣಿಗೆ ನಡೆಸಿ ಕಾರ್ಮಿಕ ಭವನದ ಮುಂದೆ ಅನಿರ್ದಿಷ್ಟಾವಧಿ ಧರಣಿ ಆರಂಭಿಸಲಾಯಿತು.
2023ರಿಂದ ಅರ್ಜಿ ಸಲ್ಲಿಸಿದ ಶೈಕ್ಷಣಿಕ ಧನಸಹಾಯವನ್ನು ಕೂಡಲೇ ಮಂಜೂರು ಮಾಡಬೇಕು. ಮೊದಲಿನಂತೆ ಧನಸಹಾಯವನ್ನು ಹೆಚ್ಚಿಸಬೇಕು. ಹೊಸ ನೋಂದಣಿ ಹಾಗೂ ನವೀಕರಣವನ್ನು ಮೂರು ವರ್ಷಕ್ಕೆ ಸೀಮಿತಗೊಳಿಸಬೇಕು. ಟೂಲ್ ಕಿಟ್‌ಗಳನ್ನು ನೀಡುವುದು ಹಾಗೂ ಟೆಂಡರ್ ಪ್ರಕ್ರಿಯೆ ಕೂಡಲೇ ಸ್ಥಗಿತಗೊಳಿಸಬೇಕು. ವಿವಿಧ ಧನಸಹಾಯಕ್ಕೆ ಮಂಜೂರಾದ ಹಣವನ್ನು ಬಿಡುಗಡೆ ಮಾಡಬೇಕು. ಕುಟುಂಬ ಆ್ಯಪ್‌ನಿಂದ ಆಗುವ ತೊಂದರೆ ನಿವಾರಿಸಬೇಕು. ತಾಂತ್ರಿಕ ದೋಷದಿಂದ ಆಗುತ್ತಿರುವ ಅರ್ಜಿ ವಿಳಂಬವನ್ನು ತಪ್ಪಿಸಬೇಕು. ಹಿರಿಯ ಕಾರ್ಮಿಕರಿಗೆ ಪೆನ್ಷನ್ ವ್ಯವಸ್ಥೆ ಸರಿಪಡಿಸಬೇಕು. ಆರೋಗ್ಯ ತಪಾಸಣೆ ಹೆಸರಲ್ಲಿ ಆಗುತ್ತಿರುವ ಅನ್ಯಾಯ ನಿಲ್ಲಿಸಬೇಕು ಎಂದು ಪ್ರತಿಭಟನಾ ನಿರತರು ಆಗ್ರಹಿಸಿದರು.
ಕಾರ್ಮಿಕ ಸಚಿವ ಸಂತೋಷ ಲಾಡ್, ಸ್ಥಳಕ್ಕೆ ಆಗಮಿಸಿ ಬೇಡಿಕೆ ಈಡೇರಿಸುವವರೆಗೆ ಧರಣಿ ಮುಂದುವರಿಸಲಾಗುವುದು ಎಂದು ಪ್ರಧಾನ ಕಾರ್ಯದರ್ಶಿ ದುರಗಪ್ಪ ಚಿಕ್ಕತುಂಬಳ ಎಚ್ಚರಿಕೆ ನೀಡಿದರು.
ಅಧ್ಯಕ್ಷ ಶಿವಕುಮಾರ ಬಂಡಿವಡ್ಡರ್, ಪ್ರಮುಖರಾದ ವಾಸು ಲಮಾಣಿ, ಮುಸ್ತಾಕ್ ನದಾಫ್, ಅಶ್ವಥ್ ಮರಿಗೌಡ್ರ, ಎಸ್.ಪಿ. ಕರಿಸೋಮನಗೌಡ್ರ, ಶರಣಪ್ಪ ರೊಟ್ಟಿ, ಅಹಮದ್ ಅಲಿಖಾನ್, ಶಿವಕುಮಾರ ಗೌಡ್ರ, ಕುಮಾರ ವೈ., ಕಾಸಿಮ್ ಕೂಡಲಗಿ, ಪ್ರಕಾಶ ಬೀರಲದಿನ್ನಿ ಇತರರು ಪ್ರತಿಭಟನೆಯಲ್ಲಿದ್ದರು.