ಕೊಳ್ಳೇಗಾಲ: ಕೃಷಿ ಪಂಪ್‌ಸೆಟ್‌ಗಳಲ್ಲಿನ ವಿದ್ಯುತ್ ಸಂಪರ್ಕ ಕಡಿತಗೊಳಿಸಿರುವುದನ್ನು ಖಂಡಿಸಿ ಕುಂತೂರು ಗ್ರಾಮದ ರೈತ ರವಿ ಸೇರಿದಂತೆ ಗ್ರಾಮಸ್ಥರು ಪಟ್ಟಣದ ಉಪವಿಭಾಗಾಧಿಕಾರಿ ಕಚೇರಿ ಮುಂಭಾಗ ಸೋಮವಾರ ಅನಿರ್ದಿಷ್ಟಾವಧಿ ಧರಣಿ ಆರಂಭಿಸಿದರು.
ಕುಂತೂರು ಗ್ರಾಮದಲ್ಲಿರುವ ಸರ್ವೇ ನಂ. 149ಎ ರಲ್ಲಿ ಸುಮಾರು 2 ವರ್ಷಗಳ ಹಿಂದೆ ಬೋರ್‌ವೆಲ್ ಕೊರೆಸಲಾಗಿದೆ. ಅಲ್ಲಿಂದ ಸುಮಾರು 1 ಕಿಮೀ ದೂರದವರೆಗೆ ಪೈಪ್‌ಲೈನ್ ಅಳವಡಿಸಿ ಜಮೀನಿಗೆ ನೀರು ಪೂರೈಕೆ ಮಾಡಲಾಗುತ್ತಿದೆ. ಸುಮಾರು 10 ಎಕರೆಯಲ್ಲಿ ಕಬ್ಬು ಬೆಳೆಯಲಾಗಿದೆ ನನ್ನ ಬೋರ್‌ವೆಲ್ ಗ್ರಾಮದ ಕುಡಿಯುವ ನೀರಿನ ಬೋರ್‌ವೆಲ್ ಹತ್ತಿರವಿರುವುದರಿಂದ ಸಾರ್ವಜನಿಕರಿಗೆ ನೀರಿನ ಸಮಸ್ಯೆಯಾಗಿದೆ ಎಂದು ಕುಂ ತೂರು ಗ್ರಾಪಂಗೆ ವೈಯಕ್ತಿಕ ದ್ವೇಷದಿಂದ ಇತ್ತೀಚೆಗೆ ನಮ್ಮ ಗ್ರಾಮದ ಕೆಲವು ಜನರು ದೂರು ಸಲ್ಲಿಸಿದ್ದಾರೆ ಎಂದು ರವಿ ಅಸಮಾಧಾನ ವ್ಯಕ್ತಪಡಿಸಿದರು.
ದೂರಿನ ಹಿನ್ನೆಲೆಯಲ್ಲಿ ಪಿಡಿಒ ಮಲ್ಲೇಶ್ ಪರಿಶೀಲನೆ ಮಾಡದೆ, ನೇರವಾಗಿ ಸೆಸ್ಕ್ ಅಧಿಕಾರಿಗಳಿಗೆ ಪತ್ರ ಬರೆದು ಬೋರ್‌ವೆಲ್‌ಗೆ ನೀಡಲಾದ ವಿದ್ಯುತ್ ಸಂಪರ್ಕವನ್ನು ಏಕಾಏಕಿ ಸ್ಥಗಿತಗೊಳಿಸಿದ್ದಾರೆ.ಪರಿಣಾಮವಾಗಿ ಕಬ್ಬಿನ ಸಸಿಗಳು ನೀರಿಲ್ಲದೆ ಒಣಗುತ್ತಿವೆ. ಈ ಪರಿಸ್ಥಿತಿಗೆ ಕಾರಣರಾದ ಪಿಡಿಒ ಮಲ್ಲೇಶ್ ಹಾಗೂ ಸೆಸ್ಕ್ ಎಇಇ ರಾಜು ಅವರನ್ನು ಕರ್ತವ್ಯದಿಂದ ವಜಾಗೊಳಿಸಬೇಕು. ನನಗಾಗಿರುವ ನಷ್ಟ ವನ್ನು ಭರಿಸಬೇಕು. ಕಡಿತಗೊಂಡಿರುವ ವಿದ್ಯುತ್ ಸಂಪರ್ಕವನ್ನು ಮತ್ತೆ ನೀಡಬೇಕು ಎಂದು ಆಗ್ರಹಿಸಿದರು.
ಇದೇ ವೇಳೆ ಪ್ರತಿಭಟನಾಕಾರರು ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದರು. ಒಣಗಿದ ಕಬ್ಬಿನ ಸಸಿಯನ್ನು ಪ್ರದರ್ಶನ ಮಾಡಿ ಆಕ್ರೋಶ ಹೊರಹಾಕಿದರು. ಪ್ರತಿಭಟನೆಯಲ್ಲಿ ಕುಂತೂರು ಗ್ರಾಮದ ರಘು, ಪ್ರಭುಸ್ವಾಮಿ, ಸುಬ್ಬಣ್ಣ, ಸುರೇಶ್, ಜಯಶೇಖರ್ ಮೂರ್ತಿ, ಕಿರಣ್, ರವಿಕುಮಾರ್, ನವೀನ್, ಶಾಂತ, ಮಹೇಶ್, ಪ್ರಕಾಶ್, ನಟೇಶ್, ಮಹದೇವ ಮತ್ತಿತರಿದ್ದರು.