ಜಿಲ್ಲೆ

ಫೆ.೨೮ರಂದು ಫ್ರೀಡಂ ಪಾರ್ಕ್‌ನಲ್ಲಿ ಅನಿರ್ಧಿಷ್ಟಾವಧಿ ಪ್ರತಿಭಟನೆ

ಆದರ್ಶ್. ಎಂ.ಕೆ.

ಮಡಿಕೇರಿ: ನಿವೃತ್ತ ಸರ್ಕಾರಿ ನೌಕರರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಫೆ.೨೮ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಅನಿರ್ಧಿಷ್ಟಾವಧಿ ಪ್ರತಿಭಟನೆ ಹಮ್ಮಿಕೊಂಡಿರುವುದಾಗಿ ಕರ್ನಾಟಕ ನಿವೃತ್ತ ನೌಕರರ ವೇದಿಕೆಯ ಕೊಡಗು ಜಿಲ್ಲಾ ಪ್ರಧಾನ ಸಂಚಾಲಕ ಪಿ.ಎಸ್.ಜನಾರ್ಧನ್ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ೧-೭-೨೦೨೨ ರಿಂದ ೩೧-೭-೨೦೨೪ರ ಅವಧಿಯಲ್ಲಿ ನಿವೃತ್ತರಾದ ರಾಜ್ಯದ ಅಧಿಕಾರಿ/ನೌಕರ ವರ್ಗದ ೨೬,೭೦೦ ನೌಕರರಿಗೆ ೭ನೇ ವೇತನ ಆಯೋಗದ ಲೆಕ್ಕಾಚಾರಕ್ಕೆ ಅನುಗುಣವಾಗಿ ನಿವೃತ್ತಿ ಆರ್ಥಿಕ ಸೌಲಭ್ಯ ನೀಡುವಂತೆ ಆಗ್ರಹಿಸಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ರಾಜ್ಯ ಮಟ್ಟದ ಹೋರಾಟದಲ್ಲಿ ಕೊಡಗಿನಿಂದಲೂ ನಿವೃತ್ತ ನೌಕರರು ಪಾಲ್ಗೊಳ್ಳಲಿದ್ದೇವೆ ಎಂದು ತಿಳಿಸಿದರು.

ಕೊಡಗು ಜಿಲ್ಲೆಯ ೪೨೬ ನಿವೃತ್ತ ನೌಕರರಿಗೆ ಗ್ರ್ಯಾಜ್ಯುಟಿ ಹಾಗೂ ವಿವಿಧ ಸೌಲಭ್ಯ ಸೇರಿ ತಲಾ ಒಬ್ಬೊಬ್ಬರಿಗೂ ೧೦ರಿಂದ ೨೦ ಲಕ್ಷದವರೆಗೆ ಹಣ ಸಿಗಲು ಬಾಕಿ ಇದೆ. ಬೇಡಿಕೆಗಳನ್ನು ಈಡೇರಿಸುವಂತೆ ಹಲವು ಬಾರಿ ಮುಖ್ಯಮಂತ್ರಿಗೆ ಮನವಿ ಪತ್ರ ಸಲ್ಲಿಸಿದ್ದೇವೆ. ಆದರೆ, ಈವರೆಗೂ ಸಭೆ ಕರೆಯದೆ, ಬೇಡಿಕೆ ಈಡೇರಿಸಲು ಸರ್ಕಾರ ಮೀನಾಮೇಷ ಎಣಿಸುತ್ತಿದೆ. ಆದ್ರಿಂದ ಹೋರಾಟ ಅನಿವಾರ್ಯವಾಗಿದೆ ಎಂದರು.

ವೇದಿಕೆಯ ಸೋಮವಾರಪೇಟೆ ತಾಲೂಕು ಸಂಚಾಲಕ ಅಂತೋಣಿ ಡಿಸೋಜ ಮಾತನಾಡಿ, ಪಿಂಚಣಿ ಹಣದಿಂದಲೇ ಜೀವನ ನಡೆಸುತ್ತಿರುವ ನಮಗೆ ದುಡಿಮೆಗೆ ತಕ್ಕ ಪ್ರತಿಫಲ ಸಿಗಬೇಕಿದೆ. ನಾವು ನಮ್ಮ ಕೂಲಿಯನ್ನು ಕೇಳ್ತಿದ್ದೇವೆ ಎಂದ ಅವರು, ಬೆಂಗಳೂರಿನಲ್ಲಿ ನಡೆಯಲಿರುವ ಮುಷ್ಕರಕ್ಕೆ ಜಯ ಸಿಗುವ ವಿಶ್ವಾಸವಿದೆ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ನಿವೃತ್ತ ನೌಕರರ ವೇದಿಕೆಯ ಜಿಲ್ಲಾ ಸಂಚಾಲಕರಾದ ಜಿ.ಎಂ.ಚಿನ್ನಯ್ಯ, ಕೆ.ಬಿ.ಮೋಹನ್, ವಿರಾಜಪೇಟೆ ತಾಲೂಕು ಸಂಚಾಲಕ ಎಂ.ಎಸ್.ಸುಬ್ರಮಣಿ ಹಾಜರಿದರು.