ಜಿಲ್ಲೆ

ಮಹಿಳೆಯೊಂದಿಗೆ ಅಸಭ್ಯ ಸಂಭಾಷಣೆ

ಸೌಮ್ಯ ಆರ್

ಸುಳ್ಯ: ಬೆಂಗಳೂರಿನಲ್ಲಿ ತಮ್ಮ ಕುಟುಂಬದೊಂದಿಗೆ ವಾಸಿಸುತ್ತಿರುವ ಸುಳ್ಯ ಮೂಲದ ಮಹಿಳೆಗೆ ರಾತ್ರಿ ವೇಳೆ ಫೋನ್ ಮಾಡಿ ಅನುಚಿತ, ಅಸಭ್ಯ ರೀತಿಯಲ್ಲಿ ಮಾತನಾಡಿದ ಯುವಕನ ಮೇಲೆ ಮಹಿಳೆ ಸುಳ್ಯ ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು ವಿಚಾರಣೆ ನಡೆಸಿದ್ದಾರೆ.

ಆರೋಪಿ ಯುವಕ ಮಂಗಳೂರಿನ ಖಾಸಗಿ ಸಂಸ್ಥೆಯಲ್ಲಿ ಉದ್ಯೋಗಿಯಾಗಿರುವ ಮಡಪ್ಪಾಡಿ ರಾಜೇಶ್ ಎನ್. ಎಂದು ತಿಳಿದು ಬಂದಿದೆ.

ತಿಂಗಳ ಹಿಂದೆ ಮಹಿಳೆ ಮೊಬೈಲ್ಗೆ ಕರೆ ಮಾಡಿದ ಅಪರಿಚಿತ ಯುವಕ ರಾಜೇಶ್ ಅನುಚಿತವಾಗಿ ಮಾತನಾಡಿದ್ದಾನೆ. ಮಹಿಳೆ ಎಚ್ಚರಿಕೆ ನೀಡಿದ ಹೊರತಾಗಿಯೂ ಆತ ಈ ಚಾಳಿ ಮುಂದುವರಿಸಿದಾಗ ಮಹಿಳೆ ತಮ್ಮ ಮನೆಯವರಿಗೆ, ಪರಿಚಯದ ಪೊಲೀಸ್ ಅಧಿಕಾರಿಯೊಬ್ಬರಿಗೆ ತಿಳಿಸಿದ್ದು, ಈತನ ವಿವರ ಪತ್ತೆ ಮಾಡಿದರು. ಆರೋಪಿ ಯುವಕನನ್ನು ಸುಳ್ಯ ಪೊಲೀಸರು ವಿಚಾರಿಸಿದಾಗ ಆತ ಪಾನಮತ್ತನಾಗಿ ಈ ರೀತಿ ವರ್ತಿಸಿದ್ದಾಗಿ ಒಪ್ಪಿಕೊಂಡಿದ್ದು, ಪೊಲೀಸರು ಮುಚ್ಚಳಿಕೆ ಬರೆಸಿಕೊಂಡು ಬಿಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ.