ನರಗುಂದ: ಸಾಲಬಾಧೆಗೆ ಮನನೊಂದ ರೈತನೊಬ್ಬರು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ಕಣಕೀಕೊಪ್ಪ ಗ್ರಾಮದಲ್ಲಿ ಸೋಮವಾರ ನಡೆದಿದೆ. ಗ್ರಾಮದ ಕಲ್ಲಪ್ಪ ಹನುಮಪ್ಪ ಸೊಬರದ (26) ಆತ್ಮಹತ್ಯೆ ಮಾಡಿಕೊಂಡವ.
ಮೃತ ರೈತ ಕಲ್ಲಪ್ಪ, ಕಳೆದ ವರ್ಷ ಸ್ವಂತದ ಒಂದು ಎಕರೆ ಹಾಗೂ ಲಾವಣಿ ಮಾಡಿದ್ದ 6 ಎಕರೆ ಜಮೀನಿನಲ್ಲಿ ಗೋವಿನಜೋಳ ಬೆಳೆದಿದ್ದರು. ಸಕಾಲಕ್ಕೆ ಮಳೆ ಆಗದೇ ಇರುವುದರಿಂದ 7 ಎಕರೆಯಲ್ಲಿ ಬೆಳೆದಿದ್ದ ಬೆಳೆಯೆಲ್ಲ ಹಾಳಾಗಿತ್ತು. ಅಲ್ಲದೆ, ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ 7 ಎಕರೆ ಪ್ರದೇಶದಲ್ಲಿ ಹೆಸರು ಬೆಳೆದಿದ್ದ. ಆದರೆ, ಹೆಚ್ಚುವರಿ ಮಳೆಯಾಗಿದ್ದರಿಂದ ಬೆಳೆಗೆ ಬೂದಿ ರೋಗ ತಗುಲಿ ಬಹುತೇಕ ಬೆಳೆ ಹಾಳಾಗಿವೆ. ಹೀಗಾಗಿ ಕಲ್ಲಪ್ಪ, ಪಟ್ಟಣದ ಕೆನರಾ ಬ್ಯಾಂಕ್ನಲ್ಲಿ 1.60 ಲಕ್ಷ ರೂ. ಕೃಷಿ ಸಾಲ, ಬಂಗಾರ ಆಭರಣವಿಟ್ಟು 60 ಸಾವಿರ ರೂ., ಕಣಕೀಕೊಪ್ಪ ಪಿಕೆಪಿಎಸ್ದಲ್ಲಿ 1.20 ಲಕ್ಷ ರೂ., ಧರ್ಮಸ್ಥಳ ಸ್ವಸಹಾಯ ಸಂಘ ಹಾಗೂ ಕೈಗಡ ಎಂದು 60 ಸಾವಿರ ರೂ. ಸೇರಿ ಲಕ್ಷಾಂತರ ರೂಪಾಯಿ ಸಾಲ ಮಾಡಿಕೊಂಡಿದ್ದರು. ಸಾಲ ತೀರಿಸುವುದು ಹೇಗೆಂಬ ಚಿಂತೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಮೃತನ ತಾಯಿ ಮಾರ್ತಂಡೆವ್ವ ಸೊಬರದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಸಿಪಿಐ ಮಂಜುನಾಥ ನಡುವಿನಮನಿ ತನಿಖೆ ಕೈಗೊಂಡಿದ್ದಾರೆ.