ಮಡಿಕೇರಿ: ಶಿಕ್ಷಕರು ಮಕ್ಕಳಲ್ಲಿ ಮೂಲ ವಿಜ್ಞಾನ ಕಲಿಕೆಯಲ್ಲಿ ಆಸಕ್ತಿ ಬೆಳೆಸುವ ಮೂಲಕ ಅವರಲ್ಲಿ ಪ್ರಶ್ನಿಸುವ, ವೈಜ್ಞಾನಿಕ ಮನೋಭಾವ ಬೆಳೆಸುವುದರೊಂದಿಗೆ ವೈಜ್ಞಾನಿಕ ಸಂಶೋಧನಾ ಪ್ರವೃತ್ತಿ ಬೆಳೆಸಲು ವಿಶೇಷ ಗಮನಹರಿಸಬೇಕು ಎಂದು ಜಿಲ್ಲಾಧಿಕಾರಿ ಡಾ ಬಿ.ಸಿ.ಸತೀಶ ಕರೆ ನೀಡಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ವಿಜ್ಞಾನ ಪರಿಷತ್ತಿನ ಕೊಡಗು ಜಿಲ್ಲಾ ಸಮಿತಿ, ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ, ರಾಷ್ಟ್ರೀಯ ಹಸಿರು ಪಡೆಯ ಇಕೋ ಕ್ಲಬ್ ಘಟಕ ಹಾಗೂ ನಗರದ ರೋಟರಿ ಮಿಸ್ಟಿ ಹಿಲ್ಸ್‌ನ ಸಂಯುಕ್ತಾಶ್ರಯದಲ್ಲಿ ನಗರದ ರೋಟರಿ ಮಕ್ಕಳ ವಿಜ್ಞಾನ ಕೇಂದ್ರದಲ್ಲಿ ಶಿಕ್ಷಕರಿಗೆ ಗುರುವಾರ ಏರ್ಪಡಿಸಿದ್ದ ಕೊಡಗು ಜಿಲ್ಲಾ ಮಟ್ಟದ ಮಾರ್ಗದರ್ಶಿ ಶಿಕ್ಷಕರ ಕಾರ್ಯಾಗಾರ ಹಾಗೂ ಬಾಲವಿಜ್ಞಾನಿಗಳಿಗೆ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಶಿಕ್ಷಕರು ಮಕ್ಕಳಿಗೆ ಕೇವಲ ಪುಸ್ತಕ ಕಲಿಕೆಯಲ್ಲದೇ ಸುತ್ತಲಿನ ಪರಿಸರವನ್ನು ಅರ್ಥ ಮಾಡಿಕೊಂಡು ಎಲ್ಲಿ? ಏಕೆ? ಹೇಗೆ? ಎಂಬ ಪ್ರಶ್ನೆಗಳಿಗೆ ವೈಜ್ಞಾನಿಕ ಕಾರಣಗಳನ್ನು ವಿಶ್ಲೇಷಣೆ ಮೂಲಕ ಸಂಶೋಧಿಸಿ ಸಮಸ್ಯೆಗಳಿಗೆ ತಾವೇ ಸ್ವತಃ ಪರಿಹಾರಗಳನ್ನು ಕಂಡುಕೊಳ್ಳಲು ಪ್ರೇರೇಪಿಸಬೇಕು. ಮಕ್ಕಳಿಗೆ ಸಂಘಟಿಸುವ ಇಂತಹ ಸಮಾವೇಶಗಳು ಮಕ್ಕಳಲ್ಲಿ ವಿಜ್ಞಾನ ಆಸಕ್ತಿ ಬೆಳೆಸುವುದರೊಂದಿಗೆ ಅವರಲ್ಲಿ ಕ್ರಿಯಾಶೀಲ ಹಾಗೂ ಸೃಜನಶೀಲ ವ್ಯಕ್ತಿತ್ವ ಬೆಳೆಸುವುದರೊಂದಿಗೆ ಮೂಲ ವಿಜ್ಞಾನ ಕಲಿಕೆಯನ್ನು ಪ್ರೇರೇಪಿಸುತ್ತದೆ ಎಂದರು.
ವಿಜ್ಞಾನ ನಮ್ಮ ನಿತ್ಯಜೀವನದಲ್ಲಿ ಹಾಸುಹೊಕ್ಕಾಗಿದ್ದು, ಶಿಕ್ಷಕರು ದಿನನಿತ್ಯದ ವಿದ್ಯಮಾನಗಳನ್ನು ಅರ್ಥೈಸಿಕೊಂಡು ಮಕ್ಕಳಲ್ಲಿ ಹೊಸ ಹೊಸ ತಂತ್ರಜ್ಞಾನ ಹಾಗೂ ಅನ್ವೇಷಣೆ ಮೂಲಕ ವಿಜ್ಞಾನ ಕಲಿಕೆಯಲ್ಲಿ ಆಸಕ್ತಿ ಬೆಳೆಸಬೇಕು ಎಂದು ಜಿಲ್ಲಾಧಿಕಾರಿ ಸಲಹೆ ಮಾಡಿದರು.
ಅಧ್ಯಕ್ಷತೆ ವಹಿಸಿದ್ದ ರೋಟರಿ ಮಿಸ್ಟಿ ಹಿಲ್ಸ್ ಸಂಸ್ಥೆಯ ಅಧ್ಯಕ್ಷ ಪ್ರಸಾದ್ ಗೌಡ ಮಾತನಾಡಿ, ಇಂತಹ ವಿಜ್ಞಾನ ಕಾರ್ಯಕ್ರಮಗಳು ಮಕ್ಕಳಲ್ಲಿ ವಿಜ್ಞಾನ ಕಲಿಕೆಗೆ ಹೆಚ್ಚಿನ ಪ್ರೋತ್ಸಾಹ ನೀಡುತ್ತವೆ. ರೋಟರಿ ಸಂಸ್ಥೆಯ ವತಿಯಿಂದ ಜಿಲ್ಲೆಯಲ್ಲಿ ಸಂಚಾರಿ ವಿಜ್ಞಾನ ಪ್ರಯೋಗಾಲಯದ ಅಭಿಯಾನ ಆರಂಭಿಸುವ ಮೂಲಕ ಮಕ್ಕಳಲ್ಲಿ ವಿಜ್ಞಾನ ಕಲಿಕೆಗೆ ಪ್ರೇರೇಪಣೆ ನೀಡಲಾಗುತ್ತಿದೆ ಎಂದರು.
ರೋಟರಿ ಕ್ಲಬ್‌ನ ಪಬ್ಲಿಕ್ ಇಮೇಜ್ ಸಮಿತಿ ಅಧ್ಯಕ್ಷ ಎಚ್.ಟಿ.ಅನಿಲ್ ಮಾತನಾಡಿ, ಕೊಡಗಿನಲ್ಲಿ ವಿಜ್ಞಾನ ಪರಿಷತ್ತಿನ ವತಿಯಿಂದ ವಿಜ್ಞಾನ ಚಟುವಟಿಕೆಗಳು ನಿರಂತರವಾಗಿ ನಡೆಯುತ್ತಿರುವುದರಿಂದ ಜಿಲ್ಲೆಯ ಅನೇಕ ವಿದ್ಯಾರ್ಥಿಗಳು ರಾಜ್ಯ ಹಾಗೂ ರಾಷ್ಟ್ರೀಯ ವಿಜ್ಞಾನ ಸಮ್ಮೇಳನದಲ್ಲಿ ಕೂಡ ಉತ್ತಮ ಸಾಧನೆ ಮಾಡುತ್ತಿರುವುದು ಶ್ಲಾಘನೀಯವಾದುದು ಎಂದರು.
ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ಪ್ರಧಾನ ಆಯುಕ್ತ ಕೆ.ಟಿ.ಬೇಬಿಮ್ಯಾಥ್ಯೂ, ಡಿಡಿಪಿಐ ವೇದಮೂರ್ತಿ, ಶಿಕ್ಷಣಾಧಿಕಾರಿ ಬಿ.ಸಿ.ದೊಡ್ಡೇಗೌಡ, ರಾಜ್ಯ ವಿಜ್ಞಾನ ಪರಿಷತ್ತಿನ ಜಿಲ್ಲಾ ಸಮಿತಿಯ ಅಧ್ಯಕ್ಷ ಟಿ.ಜಿ.ಪ್ರೇಮಕುಮಾರ್, ರೋಟರಿ ಮಿಸ್ಟಿ ಹಿಲ್ಸ್‌ನ ಕಾರ್ಯದರ್ಶಿ ಪ್ರಮೋದ್ ರೈ ಇತರರಿದ್ದರು.
ಬಾಲ ವಿಜ್ಞಾನಿಗಳೊಂದಿಗೆ ಡಿಸಿ ಸಂವಾದ: ಭಾರತೀಯ ಸಾಂಬಾರ ಪದಾರ್ಥಗಳು’ ಕುರಿತು ವೈಜ್ಞಾನಿಕ ಪ್ರಬಂಧ ಮಂಡಿಸಿದ ನಗರದ ಸೇಂಟ್ ಜೋಸೆಫ್ ಪ್ರೌಢಶಾಲೆಯ ವಿದ್ಯಾರ್ಥಿ ಲೆಸ್ಟರ್ ಪೆರೇರ ಹಾಗೂ ಪೊನ್ನಂಪೇಟೆ ಬಳಿಯ ಕಿರಗೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿನಿ ಸ್ವಪ್ನ ಮತ್ತು ಶಿಕ್ಷಕರೊಂದಿಗೆ ವೈಜ್ಞಾನಿಕ ವಿಷಯಗಳ ಕುರಿತು ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಸಂವಾದ ನಡೆಸಿದರು. ಶಿಕ್ಷಕರು ಮಕ್ಕಳಿಗೆ ಪ್ರಾಯೋಗಿಕ ಕಲಿಕೆ ಮೂಲಕ ಅವರಲ್ಲಿ ವೈಜ್ಞಾನಿಕ ಸಂಶೋಧನೆ ಬೆಳೆಸುವ ಚಟುವಟಿಕೆಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದರು.