ಚನ್ನರಾಯಪಟ್ಟಣ : ಮಕ್ಕಳನ್ನು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೊಡಗಿಸಿದಷ್ಟು ಮಕ್ಕಳ ಬೌದ್ಧಿಕ ಮಟ್ಟ ಹೆಚ್ಚುತ್ತದೆ. ದೈಹಿಕವಾಗಿ ಸದೃಢರಾಗುತ್ತಾರೆ ಎಂದು ಪಾಂಡವಪುರ ಉಪವಿಭಾಗಾಧಿಕಾರಿ ಶ್ರೀನಿವಾಸಗೌಡ ತಿಳಿಸಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಭಾನುವಾರ ಪಟ್ಟಣದ ಪ್ರತಿಮಾ ಟ್ರಸ್ಟ್ ರಂಗಲೋಕದಲ್ಲಿ ಆಯೋಜಿಸಿದ್ದ ಪ್ರತಿಮೋತ್ಸವ-2025ರ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ಕಲೆ, ಸಾಹಿತ್ಯ, ನಾಟಕಗಳಲ್ಲಿ ತೊಡಗಿಸುವುದರಿಂದ ಮಕ್ಕಳಿಗೆ ಸಾಮಾಜಿಕ ಕಾಳಜಿ ಹೆಚ್ಚುತ್ತದೆ. ಅದು ಇಂದಿನ ಕಾಲಘಟ್ಟಕ್ಕೆ ತುಂಬ ಅಗತ್ಯವಿದೆ. ನಮ್ಮ ಭಾಷೆ, ಜಲ ಸಂಸ್ಕೃತಿ ದೇಶಾಭಿಮಾನ, ನಾಯಕತ್ವದ ಗುಣಗಳು ಹುಟ್ಟಬೇಕಾದರೆ ಇಂತಹ ಕಡೆ ಮಕ್ಕಳನ್ನು ಸೇರಿಸಿದಾಗ ಮಾತ್ರ ಬೆಳೆಯ ಸಾಧ್ಯ. ಇಲ್ಲವಾದರೆ ಮಕ್ಕಳು ಭವಿಷ್ಯದಲ್ಲಿ ಕೇವಲ ಸ್ವಾರ್ಥಿಗಳಾಗಿ ಬದುಕುವುದನ್ನ ಕಲಿಯುತ್ತಾರೆಯೇ ಹೊರತು ಸಾಮಾಜಿಕ ಕಾಳಜಿ, ದೇಶಾಭಿಮಾನ ಹುಟ್ಟುವುದಿಲ್ಲ ಎಂದು ಹೇಳಿದರು.
ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಡಾ.ಎಚ್.ಎಲ್. ಮಲ್ಲೇಶ್‌ಗೌಡ ಮಾತನಾಡಿ ಕಲಿಕೆ ನಿರಂತರವಾಗಿದ್ದರೆ ಬದುಕು ಪರಿಪೂರ್ಣವಾಗುತ್ತದೆ. ನಮ್ಮ ಶಿಕ್ಷಣ ಇದಕ್ಕೆ ಅನುವು ಮಾಡಿಕೊಡುತ್ತಿಲ್ಲ. ಕೀರ್ತಿಗೆ ಹಂಬಲಿಸಿದರೆ ಮಕ್ಕಳು ನಲುಗುತ್ತಾರೆ. ಇಂದು ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಿದ್ಧರಾದವರು ಮುಂದೆ ಏನಾಗುತ್ತಾರೋ ಗೊತ್ತಿಲ್ಲ. ನಮ್ಮ ಶಿಕ್ಷಣ ಪದ್ಧತಿ ಕೂಡ ಅಂಕ, ಪರೀಕ್ಷೆಯ ಮೇಲೆಯೇ ನಿಂತಿದೆ ಎಂದರು.
ಸಮಾಜಕ್ಕೆ ತೆರೆದುಕೊಳ್ಳದಿದ್ದರೆ ಪ್ರಕೃತಿ, ಸಂಸ್ಕೃತಿ, ಕೌಟುಂಬಿಕ ಬಾಂಧವ್ಯಕ್ಕೆ ತೆರೆದುಕೊಳ್ಳಲು ಸಾಧ್ಯವಿಲ್ಲ. ಸಂಬಂಧಗಳ ಶಬ್ಧಗಳೇ ಅವರಿಗೆ ತಿಳಿಯುತ್ತಿಲ್ಲ. ಅವರನ್ನು ಬಂಧಿಗಳಾಗಿ ಓದಿಸುತ್ತಿದ್ದೇವೆ ಎನ್ನುವಂತಾಗಿದೆ. ಇದರಿಂದ ಸರ್ವತೋಮುಖ ಚಿಂತನೆಗಳಿಗೆ ಚ್ಯುತಿ ಬರುತ್ತಿದೆ ಎಂದು ಹೇಳಿದರು.
ಮಕ್ಕಳ ಸಾಹಿತ್ಯ ಪರಿಷತ್ ಅಧ್ಯಕ್ಷ ಸಿ.ಎನ್.ಅಶೋಕ್ ಮಾತನಾಡಿ, ಮಕ್ಕಳನ್ನು ಮೊಬೈಲ್‌ಗಳಿಂದ ದೂರವಿಟ್ಟರೆ ಕ್ರಿಯಾಶೀಲರಾಗಿ ಬೆಳೆಸಲು ಸಹಕಾರಿಯಾಗುತ್ತದೆ. ಎಳೆಯ ವಯಸ್ಸಿನಿಂದಲೇ ಅವರಲ್ಲಿ ನಮ್ಮ ಸಂಸ್ಕೃತಿ, ಸಂಸ್ಕಾರ ಬಿತ್ತಬೇಕು. ಮಕ್ಕಳಿಗಾಗಿಯೇ ಪ್ರೋತ್ಸಾಹಿಸಬೇಕು ಎಂದು ಹೇಳಿದರು.
ಪ್ರತಿಮಾ ಟ್ರಸ್ಟ್ ಅಧ್ಯಕ್ಷ ಉಮೇಶ್ ತೆಂಕನಹಳ್ಳಿ ಮಾತನಾಡಿದರು. ಪೇಟೆ ಸರಕಾರಿ ಪ್ರೌಢಶಾಲೆ ಮುಖ್ಯ ಶಿಕ್ಷಕಿ ನೇತ್ರಾವತಿ, ಸರ್ಕಾರಿ ಪ್ರೌಢಶಾಲೆ ಮುಖ್ಯ ಶಿಕ್ಷಕ ಬಿ.ಆರ್. ರಮೇಶ್, ಪಿಎಂಶ್ರೀ ಶಾಲೆಯ ಮುಖ್ಯಶಿಕ್ಷಕ ಡಿ.ಜಿ.ಪ್ರಕಾಶ್, ಮಮತಾರಾಣಿ ಹಾಗೂ ಪದಾಧಿಕಾರಿಗಳು ಭಾಗವಹಿಸಿದ್ದರು.