ಬೆಳಗಾವಿ: ಮಕ್ಕಳಲ್ಲಿ ಕಲಾ ಪ್ರತಿಭೆ ಸಹಜವಾಗಿರುತ್ತದೆ. ಅದನ್ನು ಶಿಕ್ಷಣದ ಮೂಲಕ ಬೆಳೆಸುವ ಕಾರ್ಯವಾಗಬೇಕು. ಆಗ ಮಾತ್ರ ಮಕ್ಕಳ ಸಕಾರಾತ್ಮಕ ಬೆಳವಣಿಗೆ ಸಾಧ್ಯ ಎಂದು ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ರಾಮನಗೌಡ ಕನ್ನೋಳ್ಳಿ ಹೇಳಿದರು.
ನಗರದ ಕುಮಾರ ಗಂಧರ್ವ ಕಲಾ ಮಂದಿರದಲ್ಲಿ ಕನ್ನಡ ಮತ್ತು ಸಂಸತಿ ಇಲಾಖೆಯಿಂದ ಶನಿವಾರ ಏರ್ಪಡಿಸಿದ್ದ ಚಿಗುರು 2025&26 ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬಾಹ್ಯ ಸೌಂದರ್ಯಕ್ಕಿಂತ ಆತ್ಮಸೌಂದರ್ಯ ಹೆಚ್ಚಿನದ್ದು. ಆತ್ಮಸೌಂದರ್ಯ ಹೊಂದಿದ ವ್ಯಕ್ತಿಯು ಉತ್ತಮ ಪ್ರಜೆಯಾಗುತ್ತಾನೆ. ಕಲಾ ಅಭಿವ್ಯಕ್ತಿಯ ಮೂಲಕ ಮಗು ತನ್ನ ಭಾವನೆಗಳನ್ನು ಹೊರಹಾಕುತ್ತದೆ. ಕಲೆ ಮಕ್ಕಳ ಒಳಗಿನ ಆತ್ಮಸೌಂದರ್ಯ ಹೆಚ್ಚಿಸುತ್ತದೆ. 8 ರಿಂದ 14 ವರ್ಷದೊಳಗಿನ ಮಕ್ಕಳ ಕಲೆ ಪ್ರೋತ್ಸಾಹಿಸುವ ಚಿಣ್ಣರ ಹಬ್ಬ ಚಿಗುರು ಸರ್ಕಾರವು ಆಯೋಜನೆ ಮಾಡುತ್ತಿರುವುದು ಸಂತಸದ ವಿಷಯ ಎಂದರು.
ಕನ್ನಡ ಮತ್ತು ಸಂಸತಿ ಇಲಾಖೆ ಉಪನಿರ್ದೇಶಕಿ ವಿದ್ಯಾವತಿ ಭಜಂತ್ರಿ ಮಾತನಾಡಿ, ಭತ್ತ ಕುಟ್ಟಿ ಅಕ್ಕಿ ತೆಗೆಯುವಂತೆ ಮಕ್ಕಳಲ್ಲಿನ ಕಲೆಗಳನ್ನು ಪ್ರದರ್ಶಿಸಲು ವೇದಿಕೆ ಕಲ್ಪಿಸಿ, ಪ್ರತಿಭೆ ಗುರುತಿಸುವುದು ಕಾರ್ಯಕ್ರಮದ ಉದ್ದೇಶ ಎಂದರು. ಮಕ್ಕಳಿಂದ ಸಿತಾರ ವಾದನ, ವಚನ ಗಾಯನ, ವಚನ ಸಂಗೀತ, ವೀರಗಾಸೆ, ರೂಪಕ, ಸಮೂಹ ನೃತ್ಯ, ನೃತ್ಯ ರೂಪಕ, ಏಕಪಾತ್ರಾಭಿನಯ ಹಾಗೂ ಕೈವಲ್ಯ ಪದಗಳ ಹಾಡುಗಾರಿಕೆ ಸೇರಿ ವಿವಿಧ ಕಲೆಗಳನ್ನು ಪ್ರದರ್ಶಿಸಿದರು. ಹಿರಿಯ ಕಲಾವಿದರಾದ ಸತ್ಯನಾರಾಯಣ ಭಟ್, ರೋಹಿಣಿ ಗಂಗಾಧರಯ್ಯ, ಯಲ್ಲಪ್ಪ ನಾಯ್ಕರ, ಗೂಳಪ್ಪ ವಿಜಯನಗರ ಇತರರಿದ್ದರು.