ಶೃಂಗೇರಿ: ಟಿಎಪಿಸಿಎಂಎಸ್‌ನಲ್ಲಿ ರಸಗೊಬ್ಬರ, ಕ್ರಿಮಿನಾಶಕ ಇತ್ಯಾದಿ ವಸ್ತುಗಳ ಮಾರಾಟದಿಂದ 1,24,97,805 ರೂ. ವಹಿವಾಟು ನಡೆದಿದ್ದು, 2.70 ಲಕ್ಷ ರೂ. ಲಾಭ ಗಳಿಸಿದೆ ಎಂದು ಅಧ್ಯಕ್ಷ ಎಚ್.ಕೆ.ನವೀನ್ ತಿಳಿಸಿದರು.
ಶನಿವಾರ ಸಂಘದ ಸದಸ್ಯರ ಸಭೆಯಲ್ಲಿ ಮಾತನಾಡಿ, ಷೇರು ಬಂಡವಾಳ ಒಂದು ಸಾವಿರ ರೂಪಾಯಿಗೆ ಏರಿಸಲಾಗಿದ್ದು ಸದಸ್ಯರ ಸಹಕಾರ ಅತಿ ಅಗತ್ಯ ಎಂದರು.
ಗ್ರಾಹಕರ ಹಾಗೂ ಸದಸ್ಯರ ಸಹಕಾರದಿಂದ ಸಂಘ ಅಭಿವೃದ್ಧಿ ಪಥದಲ್ಲಿದೆ. ಸಂಸ್ಥೆ ಕಿಗ್ಗಾ, ಕುಂಚೇಬೈಲು, ಕೆರೆದಂಡೆ, ಕೇಂದ್ರ ಗೋದಾಮು ಮೂಲಕ ಗುಣಮಟ್ಟದ ಸಾಮಗ್ರಿಗಳನ್ನು ಗ್ರಾಹಕರಿಗೆ ತಲುಪಿಸಲಾಗುತ್ತಿದೆ. ತಾಲೂಕಿನ ಆರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಸದಸ್ಯತ್ವ ಹೆಚ್ಚಿದರೆ ಮಾತ್ರ ಇನ್ನಷ್ಟು ಅಭಿವೃದ್ಧಿ ಹೊಂದಬಹುದು. ಸದಸ್ಯತ್ವ ಹೆಚ್ಚಿಸುವ ಕುರಿತು ವಿಶೇಷ ಗಮನ ಹರಿಸಲಾಗುವುದು ಎಂದು ಹೇಳಿದರು.
ಶ್ರೀ ಶಾರದಾ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕ ಚೇತನ್ ಹೆಗಡೆ ಮಾತನಾಡಿ, ಆರು ಸಹಕಾರ ಸಂಸ್ಥೆಗಳು ಐದು ಸಾವಿರ ರೂ. ಮಾತ್ರ ಸದಸ್ಯತ್ವ ಹಣ ನೀಡಲು ಸಾಧ್ಯ. ರೈತಭವನದ ಕಟ್ಟಡದ ನಿರ್ವಹಣೆಗೆ ಹೆಚ್ಚಿನ ಗಮನ ನೀಡಬೇಕು ಎಂದು ತಿಳಿಸಿದರು.
ಎಚ್.ಕೆ.ನವೀನ್ ಮಾತನಾಡಿ, ಎಲ್ಲರ ಅನುಮತಿ ಪಡೆದು ತಾಲೂಕಿನ ಕೃಷಿ ಪತ್ತಿನ ಸಹಕಾರ ಸಂಘದ ಸದಸ್ಯತ್ವ ಹಣ 10 ಸಾವಿರ ರೂ.ಗೆ ನಿಗದಿ ಮಾಡಲಾಗಿದೆ. ಕಿಗ್ಗಾ ಗೋದಾಮಿನ ಕಾಮಗಾರಿ ಪ್ರಗತಿಯಲ್ಲಿದೆ. ಸಂಸ್ಥೆಯ ವ್ಯವಹಾರವನ್ನು ಲಿಖಿತವಾಗಿ ತಿಳಿಸಲು ವಾಟ್ಸ್‌ಆ್ಯಪ್ ಗ್ರೂಪ್ ಮಾಡಿದ್ದು ಸದಸ್ಯರು ಮೊಬೈಲ್ ಸಂಖ್ಯೆ ನೋಂದಾಯಿಸಿಕೊಳ್ಳಬೇಕು ಎಂದರು.
ಸದಸ್ಯ ನಾಗೇಶ್ ಗೊಳಗೋಡು ಮಾತನಾಡಿ, ರೈತಭವನದಲ್ಲಿ ಸಾಕಷ್ಟು ಕಾರ್ಯಕ್ರಮ ನಡೆಯುತ್ತಿದ್ದು ವಾಹನ ಪಾರ್ಕಿಂಗ್ ವ್ಯವಸ್ಥೆ ಹಾಗೂ ಕಟ್ಟಡದ ನವೀಕರಣಕ್ಕೆ ಹೆಚ್ಚು ಆದ್ಯತೆ ನೀಡಬೇಕು ಎಂದು ಮನವಿ ಮಾಡಿದರು.
ವ್ಯವಸ್ಥಾಪಕ ಡಿ.ಬಿ.ಶಂಕರಪ್ಪ ಸಂಘದ ಜಮಾ-ಖರ್ಚಿನ ವಿವರ ಮಂಡಿಸಿದರು. ಉಪಾಧ್ಯಕ್ಷ ಎ.ಎಂ.ಶ್ರೀಧರ್‌ರಾವ್, ನಟರಾಜ್, ಅನ್ನಪೂರ್ಣ, ಸರೋಜಾ, ಲಕ್ಷಣ ನಾಯ್ಕ, ಹಾಲಪ್ಪಗೌಡ, ಕೆ.ಆರ್.ವೆಂಕಟೇಶ್, ಡಿಸಿಸಿ ಬ್ಯಾಂಕ್ ನಿರ್ದೇಶಕ ಡಿ.ಸಿ.ಶಂಕರಪ್ಪ, ಪಿಎಸಿಎಸ್ ಅಧ್ಯಕ್ಷ ಪ್ರಸನ್ನ, ಚಂದ್ರಶೇಖರ್ ಇದ್ದರು.