ಅಲೋಶಿಯಸ್ ವಿವಿ ಕುಲಪತಿ ರೆ.ಡಾ. ಪ್ರವೀಣ್ ಮಾರ್ಟಿಸ್ ಅವರು ವಿದ್ಯಾರ್ಥಿಗಳಿಗೆ ಹೂ ನೀಡುವ ಮೂಲಕ ನಿರ್ದಿಗಂತ ಉತ್ಸವ ಕಾರ್ಯಕ್ರಮ ಉದ್ಘಾಟಿಸಿದರು. 
ಜಿಲ್ಲೆ

ಇತಿಹಾಸದ ಮೇಲೆ ಬೌದ್ಧಿಕ ದಾಳಿ ಹೆಚ್ಚಳ

Mangaluru - Shravan Kumar Nala

ಮಂಗಳೂರು: ಭಾರತದಲ್ಲಿ ಇತಿಹಾಸದ ಮೂಲ ಕಲ್ಪನೆಗಳನ್ನು ನಾಶ ಮಾಡಿ, ಇತಿಹಾಸದ ಮೇಲೆ ಬೌದ್ಧಿಕ ದಾಳಿ ನಡೆಸುತ್ತಿರುವುದು ಹೆಚ್ಳವಾಗಿದೆ. ಇದರಿಂದ ಸಣ್ಣ ಸಂಸ್ಕೃತಿಗಳು ದೊಡ್ಡ ಅಪಾಯಕ್ಕೆ ಒಳಗಾಗಲಿವೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ. ಪುರುಷೋತ್ತಮ ಬಿಳಿಮಲೆ ಹೇಳಿದರು.

ಹಿರಿಯ ರಂಗಕರ್ಮಿ ಹಾಗೂ ಚಿತ್ರನಟ ಪ್ರಕಾಶ್‌ರಾಜ್ ನೇತೃತ್ವದ ನಿರ್ದಿಗಂತ ತಂಡದಿಂದ ನಗರದ ಅಲೋಶಿಯಸ್ ಕಾಲೇಜು ಆವರಣದಲ್ಲಿ ಆರಂಭಗೊಂಡಿರುವ ನಿರ್ದಿಗಂತ ಉತ್ಸವದ ಮೊದಲ ದಿನ ಸೌಹಾರ್ದದ ಬಳಿ- ನಮ್ಮ ಕರಾವಳಿ ಎಂಬ ವಿಚಾರದ ಕುರಿತು ಅವರು ಉಪನ್ಯಾಸ ನೀಡಿದರು.

ಪುರಾಣವನ್ನು ಇತಿಹಾಸವಾಗಿ ತಿರುಚುವ ಪ್ರಯತ್ನದ ಮೂಲಕ ನಾಡಿನ ವಿವೇಕ ನಾಶವಾಗುತ್ತಿದೆ. ಇತಿಹಾಸವನ್ನು ತಿರುಚುವ ತಂತ್ರಗಳ ಮೂಲಕ ರಾಜಕಾರಣಿಗಳು ತಮ್ಮ ಅಧಿಕಾರದ ಉದ್ದೇಶವನ್ನು ಈಡೇರಿಸಿಕೊಳ್ಳುತ್ತಿದ್ದಾರೆ. ಜನರು ರಾಜಕಾರಣಿಗಳ ಇಂತಹ ತಂತ್ರಗಾರಿಕೆಗೆ ಬಲಿಯಾಗಬಾರದು. ಬೊಬ್ಬರ್ಯ ಎನ್ನುವುದು ಮುಸ್ಲಿಂ ದೈವ. ಅವನ ತಂದೆ ಸುಲಕಲ್ಲ ಮುರವ ಬ್ಯಾರಿ, ತಾಯಿ ಫಾತಿಮಾ. ಎಲ್ಲ ದಾಖಲೆಗಳಲ್ಲೂ ಹೀಗೇ ಇದೆ. ಆದರೆ ಇದನ್ನು ಅರಗಿಸಿಕೊಳ್ಳಲಾರದ ಕೆಲವರು ಇತ್ತೀಚೆಗೆ ಬಬ್ರುವಾಹನನ ಅವತಾರವೇ ಬೊಬ್ಬರ್ಯ ಎನ್ನುತ್ತಿದ್ದಾರೆ. ರಾಮ, ವಿಷ್ಣುವಿಗೆ ಅವತಾರಗಳಿವೆ. ಬಬ್ರುವಾಹನನಿಗೆ ಅವತಾರ ಇದೆಯೇ ಎಂದು ನಾವು ಯೋಚಿಸಬೇಕಾಗಿದೆ. ಇಂತಹ ಬೌದ್ಧಿಕ ದಾಳಿಗಳಿಂದ ನಾಡಿನ ಸಣ್ಣ ಸಂಸ್ಕೃತಿಗಳಿಗೆ ಅಪಾಯ ಎದುರಾಗುತ್ತಿದೆ. ದೈವ ಪರಂಪರೆಯನ್ನು ಇದ್ದುದನ್ನು ಇದ್ದ ಹಾಗೆಯೇ ಮುಂದುವರಿಸಿಕೊಂಡು ಹೋಗುವ ಅಗತ್ಯವಿದೆ, ಹೀಗಾದರೆ ಮಾತ್ರ ಸಂಸ್ಕೃತಿಯ ಉಳಿವು ಸಾಧ್ಯ ಎಂದರು.

ಅಲೋಶಿಯಸ್ ವಿವಿ ಕುಲಪತಿ ರೆ.ಡಾ. ಪ್ರವೀಣ್ ಮಾರ್ಟಿಸ್ ಅವರು ವಿದ್ಯಾರ್ಥಿಗಳಿಗೆ ಹೂ ನೀಡುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. ಹಿರಿಯ ರಂಗಕರ್ಮಿ ಹಾಗೂ ಚಿತ್ರನಟ ಪ್ರಕಾಶ್‌ರಾಜ್ ಇದ್ದರು.

---------------

ಕೋಮುವಾದಿಗಳಿಂದ ಸಂಸ್ಕೃತಿ ನಾಶ

ವಿದೇಶಿಗರು ನೇರವಾಗಿ ಕಡಲ ಮಾರ್ಗದ ಮೂಲಕ ಆಗಮಿಸಿ ನೆಲೆನಿಲ್ಲಲು ಆರಂಭಿಸಿದ ಬಳಿಕ ಸಮ್ಮಿಶ್ರ ಸಂಸ್ಕೃತಿ ಬೆಳೆದು ಕರಾವಳಿ ಸಂಸ್ಕೃತಿಯು ಕರ್ನಾಟಕದ ಇತರೆಡೆಗಳಿಂದ ಭಿನ್ನವಾಗಲು ಕಾರಣವಾಯಿತು. ಈ ನಡುವೆಯೂ ದೈವ ದೇವರುಗಳ ಪರಂಪರೆಯನ್ನು ಈ ನಾಡು ಬಿಟ್ಟುಕೊಟ್ಟಿಲ್ಲ. ಆದರೆ ಕಾರ್ಕಳದಲ್ಲಿ ಪರಶುರಾಮ ಪ್ರತಿಮೆ ಸ್ಥಾಪಿಸಿ ಪರಶುರಾಮನ ಕಾಲಬುಡದಲ್ಲಿ ಭೂತಗಳನ್ನಿಟ್ಟು ಭೂತಗಳಿಗೆ ಅವಮಾನ ಮಾಡಲಾಗಿದೆ. ಈ ಮೂಲಕ ಕೋಮುವಾದಿಗಳು ಸಂಸ್ಕೃತಿ ನಾಶ ಮಾಡುವ ಕೆಲಸ ಮಾಡಿದ್ದಾರೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ. ಪುರುಷೋತ್ತಮ ಬಿಳಿಮಲೆ ಹೇಳಿದರು.