ವಿಜಯಪುರ ನಗರದ ಜಿಲ್ಲಾ ಪಂಚಾಯಿತಿಯ ಸಭಾಂಗಣದಲ್ಲಿ ಖಾಸಗಿ ಮತ್ತು ರಾಷ್ಟ್ರೀಕೃತ ಬ್ಯಾಂಕ್‌ಗಳು ಹಾಗೂ ಹಣಕಾಸು ಸಂಸ್ಥೆಗಳ ಮುಖ್ಯಸ್ಥರ ಸಭೆ ನಡೆಯಿತು. ಜಿಲ್ಲಾಧಿಕಾರಿ ಡಾ.ಆನಂದ ಕೆ, ಎಸ್‌ಪಿ ಲಕ್ಷ್ಮಣ ನಿಂಬರಗಿ, ಸಿಇಒ ರಿಷಿ ಆನಂದ ಇದ್ದಾರೆ.  
ಜಿಲ್ಲೆ

ಹೆಚ್ಚುತ್ತಿರುವ ದರೋಡೆ ಪ್ರಕರಣ, ಭದ್ರತಾ ವ್ಯವಸ್ಥೆ ಕೈಗೊಳ್ಳಲು ಬ್ಯಾಂಕ್ ಅಧಿಕಾರಿಗಳಿಗೆ ಕಟ್ಟು ನಿಟ್ಟಿನ ಸೂಚನೆ

ವಿಜಯಪುರ: ಹೆಚ್ಚುತ್ತಿರುವ ಬ್ಯಾಂಕ್ ದರೋಡೆ ಪ್ರಕರಣಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ದಿಟ್ಟ ಹೆಜ್ಜೆಯನ್ನಿರಿಸಿರುವ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಬ್ಯಾಂಕ್ ಅಧಿಕಾರಿಗಳ ಸಭೆ ನಡೆಸಿ ಅಗತ್ಯ ಭದ್ರತಾ ವ್ಯವಸ್ಥೆ ಕೈಗೊಳ್ಳುವಂತೆ ಕಟ್ಟು ನಿಟ್ಟಿನ ಸೂಚನೆ ನೀಡುವುದರ ಜೊತೆಗೆ ಕೆಲವು ಸಲಹೆಗಳನ್ನೂ ನೀಡಿದೆ.

ನಗರದ ಜಿಲ್ಲಾ ಪಂಚಾಯಿತಿಯ ಸಭಾಂಗಣದಲ್ಲಿ ಸೋಮವಾರ ಬ್ಯಾಂಕ್ ಸುರಕ್ಷತೆ ಹಾಗೂ ಭದ್ರತೆ ಕುರಿತು ಸಭೆ ನಡೆಸಿದ ಸಭೆಯಲ್ಲಿ, ಎಲ್ಲ ಖಾಸಗಿ ಮತ್ತು ರಾಷ್ಟ್ರೀಕೃತ ಬ್ಯಾಂಕ್‌ಗಳು ಹಾಗೂ ಹಣಕಾಸು ಸಂಸ್ಥೆಗಳಲ್ಲಿ ಭದ್ರತೆ ವ್ಯವಸ್ಥೆಗೆ ಸಂಬಂಧಿಸಿದಂತೆ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕೆಂದು ಕಟ್ಟು ನಿಟ್ಟಿನ ಸೂಚನೆ ರವಾನಿಸಲಾಗಿದೆ.

ಜಿಲ್ಲಾಧಿಕಾರಿ ಡಾ.ಆನಂದ ಕೆ ಮಾತನಾಡಿ, ಸಾರ್ವಜನಿಕರು ಸುರಕ್ಷತಾ ದೃಷ್ಠಿಯಿಂದ ಹಣ, ಆಭಣರಗಳನ್ನು ಬ್ಯಾಂಕ್‌ನಲ್ಲಿ ಇರಿಸುತ್ತಾರೆ. ಅವುಗಳ ಸುರಕ್ಷತೆ ಬ್ಯಾಂಕ್‌ಗಳ ಜವಾಬ್ದಾರಿ. ಆರ್‌ಬಿಐ ನಿಯಮದನ್ವಯ ಗ್ರಾಹಕರ ವಸ್ತುಗಳ ಸುರಕ್ಷತೆ ಒದಗಿಸುವುದು ಅತ್ಯವಶ್ಯಕ ಹಾಗೂ ಸುರಕ್ಷತೆ ಪ್ರಮುಖ ಅಂಶವಾಗಿದೆ. ಜನರ ವಿಶ್ವಾಸ, ನಂಬಿಕೆ ಉಳಿಸಿಕೊಳ್ಳಲು ಭದ್ರತಾ ವ್ಯವಸ್ಥೆ ಕುರಿತಂತೆ ನಿರ್ಲಕ್ಷೃ ವಹಿಸದೆ ಎಸ್‌ಒಪಿ ಹಾಗೂ ಆರ್‌ಬಿಐ ನಿರ್ದೇಶನಗಳನ್ನು ಪಾಲಿಸಬೇಕು. ಜನರ ಹಣ-ಆಭರಣಗಳ ಸುರಕ್ಷತೆ ನಿಮ್ಮ ಜವಾಬ್ದಾರಿಯಾಗಿದ್ದು, ಬ್ಯಾಂಕ್ ವ್ಯವಸ್ಥಾಪಕರು ಅತ್ಯಂತ ಜಾಗರೂಕತೆಯಿಂದ ಕಾರ್ಯನಿರ್ವಹಿಸಬೇಕು ಎಂದರು.

ಭದ್ರತೆ ಹೇಗಿರಬೇಕು?

ಎಸ್‌ಪಿ ಲಕ್ಷ್ಮಣ ನಿಂಬರಗಿ ಮಾತನಾಡಿ, ಲಾಕರ್ ವ್ಯವಸ್ಥೆ, ಶಸ್ತ್ರ ಸಜ್ಜಿತ ಭದ್ರತಾ ಸಿಬ್ಬಂದಿ ನಿಯೋಜನೆ ಹಾಗೂ ಭದ್ರತಾ ಸಿಬ್ಬಂದಿಗೆ ತುರ್ತು ಸಂದರ್ಭವನ್ನು ಸಮರ್ಥವಾಗಿ ಎದುರಿಸಲು ಸೂಕ್ತ ತರಬೇತಿ ನೀಡಬೇಕು. ಸಿಸಿಟಿವಿ ಅಳವಡಿಕೆ, ಸ್ಟ್ರಾಂಗ್ ರೂಂ ಮತ್ತು ನಗದು ವಾಹನಗಳಿಗೆ ಡಬಲ್ ಲಾಕಿಂಗ್-ಡಿಜಿಟಲ್ ಲಾಕ್ ವ್ಯವಸ್ಥೆ, ಬ್ಯಾಂಕ್ ಆವರಣ ಹಾಗೂ ಎಟಿಎಂ ಆವರಣಗಳಲ್ಲಿ ಸೂಕ್ತ ಬೆಳಕಿನ ವ್ಯವಸ್ಥೆ, ಹಣ ಮತ್ತು ಆಭರಣಗಳಿಗಾಗಿ ಸುರಕ್ಷಿತ ಲಾಕರ್ ವ್ಯವಸ್ಥೆ ಮತ್ತು ಬ್ಯಾಂಕ್‌ಗಳಲ್ಲಿ ಪೊಲೀಸ್ ಠಾಣೆಯ ದೂರವಾಣಿ ಸಂಖ್ಯೆಯನ್ನು ಮತ್ತು 112 ನಂಬರ್‌ನ್ನು ಸಾರ್ವಜನಿಕರಿಗೆ ಕಾಣುವಂತೆ ಪ್ರದರ್ಶನ ಮಾಡಬೇಕು. ಗ್ರಾಹಕರಿಗೆ ಸೈಬರ್ ವಂಚನೆಯ ಕುರಿತು ಜಾಗೃತಿ ಮೂಡಿಸುವ ಫಲಕಗಳನ್ನು ಅಳವಡಿಸಬೇಕು. ದರೋಡೆ, ಕಳ್ಳತನದಂತಹ ಸೂಚನೆ ಕಂಡು ಬಂದಲ್ಲಿ ಕೂಡಲೇ ಸೈರನ್-ಅಲಾರಂ ಒತ್ತಿ ಪೊಲೀಸರಿಗೆ ಮಾಹಿತಿ ನೀಡುವ ವ್ಯವಸ್ಥೆಗೆ ಕ್ರಮ ವಹಿಸುವಂತೆ ಅವರು ಸೂಚನೆ ನೀಡಿದರು.

22 ಅಂಶಗಳ ಚೆಕ್‌ಲಿಸ್ಟ್

ಬ್ಯಾಂಕ್ ನಿರ್ವಹಣೆಗಾಗಿ 22 ಅಂಶಗಳ ಚೆಕ್‌ಲಿಸ್ಟ್ ನೀಡಲಾಗಿದ್ದು, ಸಮರ್ಪಕವಾಗಿ ಅನುಸರಣೆ ಮಾಡಬೇಕು. ಈಗಾಗಲೇ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಅಧ್ಯಕ್ಷತೆಯಲ್ಲಿ ತ್ರೈಮಾಸಿಕ ಸಭೆಗಳನ್ನು ನಡೆಸಿ ಅಗತ್ಯ ಭದ್ರತಾ ವ್ಯವಸ್ಥೆಗಳ ಕುರಿತು ತಿಳಿಸಲಾಗಿದೆ. ಭದ್ರತಾ ವ್ಯವಸ್ಥೆ ಹೆಚ್ಚಿನ ಗಮನ ನೀಡಬೇಕು. ಯಾವುದೇ ತುರ್ತು ಪರಿಸ್ಥಿತಿ ಎದುರಾಗುವ ಸಂದರ್ಭದಲ್ಲಿ ಕೂಡಲೆ ಪೊಲೀಸ್ ಇಲಾಖೆಯನ್ನು ಸಂಪರ್ಕಿಸಿ ಸಹಾಯ ಪಡೆದುಕೊಳ್ಳಿ ಎಂದರು.

ಬ್ಯಾಂಕ್‌ನ ನಿಗದಿತ ಸಮಯದೊಳಗೆ ವ್ಯವಹಾರ ಮುಗಿಸಬೇಕು. ಆಗಾಗ್ಗೆ ಸಿಸಿಟಿವಿ ಕಾರ್ಯನಿರ್ವಹಣೆ ಕುರಿತು ಪರಿಶೀಲನೆ ನಡೆಸಬೇಕು. ಬ್ಯಾಂಕಿಗೆ ಸಂಬಂಧಿಸಿದ ಸುರಕ್ಷತೆ ಹಾಗೂ ಭದ್ರತೆ ಬಗ್ಗೆ ಪ್ರತಿ ಆರು ತಿಂಗಳಿಗೊಮ್ಮೆ ಅಣುಕುಪ್ರದರ್ಶನ ಏರ್ಪಡಿಸಿ ಜಾಗೃತಿ ಮೂಡಿಸಬೇಕು ಎಂದರು.

ಸಿಇಒ ರಿಷಿ ಆನಂದ ಮಾತನಾಡಿ, ಬ್ಯಾಂಕ್‌ನ ಕಾರ್ಯ ನಿರ್ವಹಣೆ ಮಾಹಿತಿಯನ್ನು ನಿರ್ವಹಿಸಿ, ಜಿಲ್ಲಾಡಳಿತದೊಂದಿಗೆ ಕೈಜೋಡಿಸಿ, ಚೆಕ್ ಲಿಸ್ಟ್ ನೀಡಿದ್ದು ಈ ಅಂಶಗಳ ಕುರಿತು ಪಾಲನೆ ಮಾಡಬೇಕು. ಸಾರ್ವಜನಿಕರ ವಿಶ್ವಾಸ ಬ್ಯಾಂಕಿನಲ್ಲಿದ್ದು ಭದ್ರತಾ ಹಾಗೂ ಸುರಕ್ಷತೆಗೆ ಒತ್ತು ನೀಡಬೇಕು. ಯಾವುದೇ ಭದ್ರತಾ ಲೋಪ ಆಗದಂತೆ ಸುರಕ್ಷತಾ ಕ್ರಮವನ್ನು ಅನುಸರಿಸಬೇಕು ಎಂದು ಹೇಳಿದರು.

ವಿವಿಧ ಬ್ಯಾಂಕಿನ ಅಧಿಕಾರಿಗಳು ತಮ್ಮ ಅನಿಸಿಕೆ ಹೇಳಿದರು. ವಿಜಯಪುರ ಉಪ ವಿಭಾಗಾಧಿಕಾರಿ ಗುರುನಾಥ ದಡ್ಡೆ, ಇಂಡಿ ಉಪ ವಿಭಾಗಾಧಿಕಾರಿ ಅನುರಾಧ ವಸ್ತ್ರದ, ಜಿಲ್ಲಾ ಅಗ್ರಣೀಯ ಬ್ಯಾಂಕ್ ವ್ಯವಸ್ಥಾಪಕ ಸಿದ್ದಯ್ಯ.ಬಿ, ಡಿವೈಎಸ್‌ಪಿ ಬಸವರಾಜ ಯಲಿಗಾರ ಮತ್ತಿತರರಿದ್ದರು.