ಜಿಲ್ಲೆ

ಹೆದ್ದಾರಿಯಲ್ಲಿ ಹೆಚ್ಚುತ್ತಿರುವ ದರೋಡೆ ಪ್ರಕರಣಗಳು

ಮಡಿಕೇರಿ:

ಬೆಂಗಳೂರು - ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಕೊಡಗಿನವರನ್ನು ಗುರಿಯಾಗಿರಿಸಿಕೊಂಡು ದರೋಡೆ ನಡೆಸುತ್ತಿರುವ ಬಗ್ಗೆ ಜಿಲ್ಲೆಯಲ್ಲಿ ಆತಂಕ ಸೃಷ್ಟಿಯಾಗಿದೆ. ಇಲ್ಲಿನವರು ಸಾಕಷ್ಟು ಮಂದಿ ಉದ್ಯೋಗ ಸೇರಿದಂತೆ ವಿವಿಧ ಕಾರಣಗಳಿಂದ ಬೆಂಗಳೂರಿನಲ್ಲಿ ನೆಲೆಯಾಗಿದ್ದು, ಈ ಪೈಕಿ ಬಹುತೇಕರು ವಾರಾಂತ್ಯದ ದಿನಗಳನ್ನು ಕಳೆಯಲು ತವರಿಗೆ ಬರುವುದು ವಾಡಿಕೆ. ಇದನ್ನೇ ಬಳಸಿಕೊಳ್ಳುವ ದರೋಡೆಕೋರರು ಲೂಟಿಗೆ ಇಳಿದಿದ್ದಾರೆ ಎನ್ನುವ ಮಾತುಗಳು ಸಾಮಾನ್ಯವಾಗಿದೆ. ಕೊಡಗಿನಿಂದ ಬೆಂಗಳೂರಿಗೆ ಹೋಗಿ ಬರುವಾಗ ಎಚ್ಚರಿಕೆಯಿಂದ ಇರಿ ಎನ್ನುವ ಸಂದೇಶ ಸ್ಥಳೀಯವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದೆ.

ಜು.೧ರಂದು ಕೊಡಗಿನ ಮುತ್ತಪ್ಪ ಎಂಬವರು ಚಿಕಿತ್ಸೆಗಾಗಿ ಬೆಂಗಳೂರಿಗೆ ತೆರಳುತ್ತಿದ್ದರು. ಮಾರ್ಗ ಮಧ್ಯೆ ಮದ್ದೂರು ಬಳಿ ವಿಶ್ರಾಂತಿಗಾಗಿ ನಿಲ್ಲಿಸಿದಾಗಶಸ್ತ್ರಸಜ್ಜಿತ ದರೋಡೆಕೋರರ ಗುಂಪೊಂದು ದಾಳಿ ಮಾಡಿ ಬೆದರಿಸಿ ೩.೫ ಲಕ್ಷ ಮೌಲ್ಯದ ಚಿನ್ನಾಭರಣ ಮತ್ತು ನಗದು ದೋಚಿ ಪರಾರಿ ಆಗಿದ್ದರು. ಈ ಸಂಬಂಧ ಮುತ್ತಪ್ಪ ಮದ್ದೂರು ಪೊಲೀಸ್ ಠಾಣೆಯಲ್ಲಿ ದೂರು ಕೂಡ ದಾಖಲಿಸಿದ್ದರು.

ಕಳೆದ ವಾರ ಪೊನ್ನಂಪೇಟೆ ತಾಲೂಕು ಟಿ. ಶೆಟ್ಟಿಗೇರಿಯ ವರ್ತಕ ಚಲನ್ ಮತ್ತು ಅವರ ಪತ್ನಿಯನ್ನು ಪೊಲೀಸರ ಸೋಗಿನಲ್ಲಿ ಬಂದ ಇಬ್ಬರು ದರೋಡೆಕೋರು ದೋಚಿದ್ದಾರೆ. ೨ ಲಕ್ಷ ಮೌಲ್ಯದ ಚಿನ್ನದ ಸರವನ್ನು ಕಿತ್ತುಕೊಂಡಿದ್ದಾರೆ. ಚಲನ್ ಕಾರನ್ನು ವೇಗವಾಗಿ ಓಡಿಸಿಕೊಂಡು ಬಂದು ತಮ್ಮ ಜೀವ ಮತ್ತು ಪತ್ನಿ ಕೊರಳಲ್ಲಿ ಇದ್ದ ತಾಳಿಯನ್ನು ಉಳಿಸಿಕೊಂಡಿದ್ದಾರೆ. ಈ ಸಂಬಂಧ ಶ್ರೀರಂಗಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರು ಕೂಡ ನೀಡಿದ್ದಾರೆ.
ಬೆಂಗಳೂರು - ಮೈಸೂರು ಎಕ್ಸ್‌ಪ್ರೆಸ್ ವೇಯಲ್ಲಿ ಪದೇ ಪದೇ ಇಂತಹ ದುಷ್ಕೃತ್ಯಗಳು ನಡೆಯುತ್ತಿದ್ದು ದರೋಡೆಗೆ ಒಳಗಾಗುತ್ತಿರುವವರ ಪೈಕಿ ಬಹುತೇಕರು ಕೊಡಗಿನವರು ಎನ್ನುವುದು ಆತಂಕಕ್ಕೆ ಕಾರಣವಾಗಿದೆ. ಕೆಲವೊಂದು ಪ್ರಕರಣಗಳು ಬೆಳಕಿಗೆ ಬಂದರೆ ಬಹುತೇಕ ದರೋಡೆ ಪ್ರಕರಣಗಳು ಹಾಗೆಯೇ ಮುಚ್ಚಿ ಹೋಗಿಬಿಡುತ್ತದೆ. ಪೊಲೀಸ್ ಠಾಣೆ ಮತ್ತು ನ್ಯಾಯಾಲಯಗಳಿಗೆ ಅಲೆದಾಡುವ ಸಂಕಷ್ಟ ಬೇಡ ಎನ್ನುವ ಕಾರಣಕ್ಕೆ ದೂರು ಕೊಡಲು ಹಿಂಜರಿಯುವವರೂ ಇದ್ದಾರೆ.

ಕೊಡಗಿನವರು ಸಾಕಷ್ಟು ಮಂದಿ ಬೆಂಗಳೂರಿನಲ್ಲಿ ನೆಲೆಯಾಗಿದ್ದಾರೆ. ಉನ್ನತ ಸರ್ಕಾರಿ ಉದ್ಯೋಗ, ಐಟಿ-ಬಿಟಿ, ಸಾಮಾನ್ಯ ನೌಕರರಾಗಿಯೂ ಹೆಚ್ಚಿನ ಸಂಖ್ಯೆಯಲ್ಲಿ ರಾಜಧಾನಿಯಲ್ಲಿ ಬದುಕು ಕಟ್ಟಿಕೊಂಡಿದ್ದಾರೆ. ಕೊಡಗಿನಿಂದ ಬೆಂಗಳೂರಿಗೆ ವಿವಿಧ ಕಾರಣಗಳಿಗೆ ಆಗಾಗ್ಗೆ ಹೋಗಿ ಬರುವವರ ಸಂಖ್ಯೆಯೂ ದೊಡ್ಡದಾಗಿದೆ. ಬೆಂಗಳೂರಿನಲ್ಲಿರುವ ಕೊಡಗಿನವರ ಪೈಕಿ ಬಹುತೇಕರು ಸ್ವಂತ ವಾಹನದಲ್ಲಿ ವಾರಕ್ಕೊಮ್ಮೆ ಊರಿಗೆ ಆಗಮಿಸಿ ತಮ್ಮ ತೋಟ ನೋಡಿಕೊಂಡು, ಪೋಷಕರು, ಸಂಬಂಧಿಕರನ್ನು ಮಾತನಾಡಿಸಿಕೊಂಡು ಮರಳುವುದು ವಾಡಿಕೆ.

ಸ್ವಂತ ವಾಹನ ಹೊಂದಿರುವ ಜಿಲ್ಲೆಯ ವ್ಯಕ್ತಿಗಳು ಎಲ್ಲಿಯೇ ನೆಲೆಸಿದ್ದರೂ ಮಡಿಕೇರಿ ಆರ್‌ಟಿಒ ನೋಂದಣಿ ಸಂಖ್ಯೆಯೇ ತಮ್ಮ ವಾಹನಗಳಿಗೆ ಪಡೆದುಕೊಳ್ಳಲು ಇಷ್ಟಪಡುತ್ತಾರೆ. ಅಲ್ಲದೆ ಜಿಲ್ಲೆ ಸಂಬಂಧಿಸಿದ ವಿವಿಧ ಲಾಂಛನಗಳನ್ನು ವಾಹನಗಳ ಮೇಲೆ ಅಂಟಿಸಿಕೊಳ್ಳುವ ಟ್ರೆಂಡ್ ಕೂಡ ಇದೆ. ಇದರಿಂದಾಗಿ ಕೊಡಗಿನ ವಾಹನಗಳನ್ನು ಸುಲಭವಾಗಿ ಗುರುತಿಸಬಹುದಾಗಿದ್ದು, ದರೋಡೆಕೋರರ ಕೃತ್ಯಗಳಿಗೂ ಇದು ನೆರವಾಗುತ್ತಿರುವ ಶಂಕೆ ವ್ಯಕ್ತವಾಗಿದೆ.

ಸಾಮಾನ್ಯವಾಗಿ ವಾರಾಂತ್ಯದಲ್ಲಿ ತವರಿಗೆ ಆಗಮಿಸುವ ಕೊಡಗು ಮೂಲದವರೇ ಸುಲಭವಾಗಿ ದರೋಡೆಕೋರರ ದುಷ್ಕೃತ್ಯಕ್ಕೆ ಸಿಲುಕಿಕೊಳ್ಳುತ್ತಿದ್ದಾರೆ. ವಾರದ ಕೊನೆಯ ದಿನ ಕೆಲಸ ಮುಗಿಸಿ ರಾತ್ರಿ ವೇಳೆ ಊರಿಗೆ ಮರಳುವ ಸಂದರ್ಭ ದರೋಡೆಕೋರರ ಜಾಲಕ್ಕೆ ಬಿದ್ದು ತಮ್ಮ ದುಡಿಮೆಯ ಸಂಪತ್ತನ್ನು ಕಳೆದುಕೊಳ್ಳುವಂತಾಗಿದೆ. ಇದರಿಂದಾಗಿ ಮಾನಸಿಕ ಮತ್ತು ದೈಹಿಕ ಹಿಂಸೆಗೂ ಒಳಗಾಗುತ್ತಿದ್ದಾರೆ. ದರೋಡೆಕೋರರ ಹಿಂದೆ ದೊಡ್ಡ ಜಾಲ ಇರುವ ಶಂಕೆ ವ್ಯಕ್ತವಾಗುತ್ತಿದ್ದು, ಸಂಘಟಿತ ರೀತಿಯಲ್ಲಿ ದುಷ್ಕೃತ್ಯ ನಡೆಸುತ್ತಿರುವ ಈ ಜಾಲವನ್ನು ಹೆಡೆಮುರಿ ಕಟ್ಟುವಂತೆ ಒತ್ತಾಯ ಕೇಳಿಬರುತ್ತಿದೆ.

ದರೋಡೆಕೋರರು ದುಷ್ಕೃತ್ಯ ನಡೆಸಲು ಹಲವು ರೀತಿಯ ತಂತ್ರಗಳನ್ನು ಪ್ರಯೋಗಿಸುವಲ್ಲಿ ನಿಪುಣರಾಗಿದ್ದು, ಪ್ರಯಾಣಿಕರು ಎಚ್ಚರಿಕೆಯಿಂದ ಇರಬೇಕು ಎನ್ನುವ ಸಲಹೆ ಕೇಳಿಬರುತ್ತದೆ. ಹೆದ್ದಾರಿಯಲ್ಲಿ ವೇಗವಾಗಿ ವಾಹನಗಳು ಚಲಾಯಿಸುವ ಸಂದರ್ಭ ವಾಹನಗಳಿಗೆ ಅಡ್ಡಲಾಗಿ ಕುರಿ ಅಥವಾ ಕೋಳಿಗಳನ್ನು ಬಿಡುವುದು, ಕಾರಿನ ಗಾಜುಗಳಿಗೆ ಮೊಟ್ಟೆ ಎಸೆಯುವುದು, ಚೂಪಾದ ವಸ್ತುಗಳನ್ನು ಬಳಸಿ ಟೈರ್ ಪಂಕ್ಚರ್ ಮಾಡುವುದು, ಖಾಲಿ ಟೈರ್‌ಗಳನ್ನ ಅಡ್ಡಲಾಗಿ ಉರುಳಿಸುವುದು, ಪೊಲೀಸ್ ವೇಷದಲ್ಲಿ ಬಂದು ವಾಹನ ಅಡ್ಡಗಟ್ಟುವುದು, ಸಹಾಯ ಕೇಳುವ ನೆಪದಲ್ಲಿ ಗಾಡಿ ನಿಲ್ಲಿಸುವುದು, ಅಪಘಾತದ ಕಾರಣ ಹೇಳಿ ವಿನಾಕಾರಣ ಜಗಳಕ್ಕೆ ಎಳೆಯುವುದು, ಸ್ತ್ರೀ ವೇಷದಲ್ಲಿ ಆಕರ್ಷಿಸಿ ಅಡ್ಡಗಟ್ಟುವುದು ಹೀಗೆ ಹಲವು ರೀತಿಯಲ್ಲಿ ಸುಲಿಗೆಗೆ ಮುಂದಾಗುತ್ತಾರೆ ಎನ್ನಲಾಗುತ್ತಿದೆ.

ಬೆಂಗಳೂರಿನಿಂದ ಕೊಡಗು ಕಡೆಗೆ ಹೋಗುವ ವಾಹನಗಳೇ ದರೋಡೆಕೋರರ ಗುರಿಯಾಗಿದೆ. ಬೆಂಗಳೂರಿನಿಂದಲೇ ವಾಹನ ನೋಂದಣಿ ಮತ್ತು ಅಂಟಿಸಿರುವ ಲೋಗೋ ಮೇಲೆ ಕಣ್ಣಿಡುವ ತಂಡ ಮಾರ್ಗದುದ್ದಕ್ಕೂ ತಮ್ಮ ಸಹಚರರಿಗೆ ಸಂದೇಶ ರವಾನಿಸುತ್ತಾರೆ. ವಾಹನದಲ್ಲಿ ಇರುವ ಪ್ರಯಾಣಿಕರಿಂದ ಹಿಡಿದು ಅವರ ಸಾಮರ್ಥ್ಯದವರೆಗೂ ಅಧ್ಯಯನ ಮಾಡುತ್ತಾರೆ. ಮಧ್ಯೆ ನಿಲ್ಲುವ ಹೋಟೆಲ್‌ಗಳ ಸಮೀಪದಿಂದಲೂ ಗಮನಿಸಿ ಯಾರನ್ನು ಟ್ರ್ಯಾಪ್ ಮಾಡಬೇಕು ಎನ್ನುವುದನ್ನು ದೃಢಪಡಿಸಿಕೊಂಡು ಸಂಘಟಿತ ದಾಳಿ ಮಾಡುತ್ತಾರೆ. ಪ್ರಯಾಣಿಕರು ಎಷ್ಟು ಎಚ್ಚರಿಕೆಯಿಂದ ಇದ್ದರೂ ಕಡಿಮೆಯೇ. ಹೆದ್ದಾರಿಯಲ್ಲಿ ಪೊಲೀಸ್ ಗಸ್ತು ಮತ್ತಷ್ಟು ಹೆಚ್ಚಿಸಬೇಕು.
- ಚಾಮೇರ ದಿನೇಶ್, ಅಧ್ಯಕ್ಷ, ಕೊಡವಾಮೆರ ಕೊಂಡಾಟ ಸಂಘಟನೆ

ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದ ಅಪರಾಧ ಪ್ರಕರಣಗಳನ್ನು ಪೊಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸಿದೆ. ರಾಷ್ಟ್ರೀಯ ಹೆದ್ದಾರಿಯ ಎರಡು ಬದಿಯ ರಸ್ತೆಯಲ್ಲಿ ಪೊಲೀಸ್ ಸಿಬ್ಬಂದಿ ಯನ್ನು ಹಗಲು, ರಾತ್ರಿ ವಾಹನಗಳಲ್ಲಿ ಗಸ್ತು ಹಾಕುವ ಪ್ರಕ್ರಿಯೆ ತೀವ್ರಗೊಳಿಸಲಾಗಿದೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ಈಗ ಅಳವಡಿಸಿರುವ ಸಿಸಿ ಟಿವಿ ಕ್ಯಾಮರಾಗಳ ಬದಲಿಗೆ ಅತ್ಯಾಧುನಿಕ ತಂತ್ರಜ್ಞಾನ ಹೊಂದಿರುವ ಸಿಸಿ ಟಿವಿ ಅಳವಡಿಸಿ ಹೆಚ್ಚುವರಿಯಾಗಿ ವಿದ್ಯುತ್ ದೀಪ ಅಳವಡಿಸುವಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಮನವಿ ಮಾಡಲಾಗಿದೆ.
- ಎನ್. ಯತೀಶ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಮಂಡ್ಯ