ಜಿಲ್ಲೆ

ಮಳೆ ಅಬ್ಬರದಿಂದ ಹೆಚ್ಚುತ್ತಿರುವ ಆತಂಕ

ಸುನಿಲ್ ಪೊನ್ನೇಟಿ

ಮಡಿಕೇರಿ:

ಮಳೆಗಾಲ, ಬಿರುಸಿನ ಮಳೆ, ಅಲ್ಲಲ್ಲಿ ಪ್ರವಾಹ ಕೊಡಗಿಗೆ ಹೊಸದೇನೂ ಅಲ್ಲ. ಇದಕ್ಕೆಲ್ಲಾ ಕೊಡಗಿನವರು ಹೆದರುವವರೂ ಅಲ್ಲ. ಜೂನ್‌ನಿಂದ ಅಕ್ಟೋಬರ್ ತನಕವೂ ಅಬ್ಬರಿಸುತ್ತಿರುವ ಮಳೆಯ ಜೊತೆಗಿನ ಬದುಕು ಇಲ್ಲಿನವರಿಗೆ ಸಾಮಾನ್ಯ. ಆದರೆ ೨೦೧೮ರ ನಂತರದ ವರ್ಷಗಳಲ್ಲಿ ಮಳೆಯ ಅಬ್ಬರ ಸ್ವಲ್ಪ ಹೆಚ್ಚಾದರೂ ಸಾಕು ಜಿಲ್ಲೆಯಲ್ಲಿ ಒಂದು ರೀತಿಯ ಆತಂಕ ಮನೆ ಮಾಡುತ್ತದೆ.

೨೦೧೮ರಲ್ಲಿ ಆ.೧೩ರಿಂದ ಶುರುವಾದ ವರುಣನ ಆರ್ಭಟ ಸ್ವಾತಂತ್ರ್ಯ ದಿನದ ಸಡಗರಕ್ಕೆ ಮಂಕು ಕವಿಯುವಂತೆ ಮಾಡಿತ್ತು. ಆ.೧೭ರ ತನಕವೂ ಮುಂದುವರೆದಿದ್ದ ಮಳೆಗೆ ಮಡಿಕೇರಿ ಮತ್ತು ಸೋಮವಾರಪೇಟೆ ತಾಲೂಕಿನ ಹಲವೆಡೆ ಭೂಕುಸಿತ ಸಂಭವಿಸಿತ್ತು. ಕುಶಾಲನಗರ ಭಾಗದಲ್ಲಿ ನದಿ ತೀರದ ಬಡಾವಣೆಗಳಲ್ಲಿ ಪ್ರವಾಹ ಸ್ಥಿತಿ ನಿರ್ಮಾಣವಾಗಿತ್ತು. ಸಾವಿರಕ್ಕೂ ಅಧಿಕ ಕುಟುಂಬಗಳು ನಿರಾಶ್ರಿತರಾಗಿದ್ದರು. ಪ್ರಾಣ ಹಾನಿಯೂ ಸಂಭವಿಸಿತ್ತು.
೨೦೧೯ರಲ್ಲಿ ಆ.೭ರಿಂದಲೇ ಶುರುವಾಗಿದ್ದ ಭಾರಿ ಮಳೆ ಆ. ೧೩ರ ತನಕವೂ ಅಬ್ಬರಿಸಿತ್ತು. ವಿರಾಜಪೇಟೆ ತಾಲೂಕು ತೋರ ಗ್ರಾಮದಲ್ಲಿ ಬೆಟ್ಟ ಕುಸಿದು ೧೦ ಮಂದಿ ಮತ್ತು ಮಡಿಕೇರಿ ತಾಲೂಕು ಕೋರಂಗಾಲದಲ್ಲಿ ಮನೆ ಮೇಲೆ ಬರೆ ಜರಿದು ಐವರು ಸೇರಿ ೧೭ ಮಂದಿ ಮೃತಪಟ್ಟಿದ್ದರು. ಪ್ರವಾಹದಿಂದಾಗಿ ೯೦೦ಕ್ಕೂ ಅಧಿಕ ಕುಟುಂಬಗಳು ಮನೆ ಕಳೆದುಕೊಂಡಿದ್ದವು.

೨೦೨೦ರಲ್ಲಿ ಮುಂಗಾರು ಮಳೆ ಕೊಡಗಿಗೆ ಶಾಪವಾಗಿ ಪರಿಣಮಿಸಿತ್ತು. ತಲಕಾವೇರಿಯಲ್ಲಿ ಗಜಗಿರಿ ಬೆಟ್ಟ ಕುಸಿದು ಅರ್ಚಕ ಕುಟುಂಬದ ಮೂವರು ಸೇರಿ ಐವರು ಭೂ ಸಮಾಧಿ ಆಗಿದ್ದರು. ಕಾವೇರಿ, ಲಕ್ಷ್ಮಣ ತೀರ್ಥ ಹಾಗೂ ಜಿಲ್ಲೆಯ ಇತರ ನದಿಪಾತ್ರಗಳಲ್ಲಿ ಕಾಣಿಸಿಕೊಂಡ ಪ್ರವಾಹದಿಂದ ಸಾಕಷ್ಟು ಹಾನಿಯೂ ಸಂಭವಿಸಿತ್ತು.

೨೦೨೧, ೨೨ ಹಾಗೂ ೨೦೨೩ರಲ್ಲಿ ಮಳೆಗಾಲದಲ್ಲಿ ದೊಡ್ಡ ಮಟ್ಟದ ಅನಾಹುತಗಳು ಆಗಿರಲಿಲ್ಲ. ಆದರೆ ಈ ವರ್ಷ ಮುಂಗಾರು ಪೂರ್ವ ಮಳೆ ಉತ್ತಮವಾಗಿದ್ದು, ಮುಂಗಾರು ಕೂಡ ವಾಡಿಕೆಗಿಂತ ಹೆಚ್ಚು ಸುರಿಯುವ ಬಗ್ಗೆ ಹವಾಮಾನ ತಜ್ಞರು ಭವಿಷ್ಯ ನುಡಿದಿದ್ದಾರೆ. ಇದಕ್ಕೆ ಪೂರಕವಾಗಿ ಕೊಡಗಿನಲ್ಲೂ ಕಳೆದ ವಾರ ಮಳೆ ಅಬ್ಬರಿಸಿತ್ತು. ೨೦೧೮ರ ಕಹಿನೆನಪು ಮರುಕಳಿಸುವ ಭೀತಿ ಮಧ್ಯೆ ಸಾರ್ವಜನಿಕರು ಈ ಮುಂಗಾರು ಮಳೆಯ ಸ್ವಾಗತದ ಸಿದ್ಧತೆಯಲ್ಲಿದ್ದಾರೆ. ಹಾಗಾದರೆ ಜಿಲ್ಲೆಯಲ್ಲಿ ಮಳೆಗಾಲದ ಆತಂಕಗಳೇನು ? ಈ ಬಗ್ಗೆ ವಿಜಯವಾಣಿ ಓದುಗರು ತಮ್ಮ ಲೌಡ್ ಸ್ಪೀಕರ್‌ನಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಹವಾಮಾನ ವರದಿಯಂತೆ ಉತ್ತಮ ಮುಂಗಾರು ಎಂದು ಹೇಳಲಾಗಿದೆ. ಕೊಡಗಿನಲ್ಲಿ ಧಾರಾಕಾರ ಮಳೆಯಾದರೆ ಅನಾಹುತವಾಗುತ್ತದೆ. ಗಾಳಿ-ಮಳೆಗೆ ಮರಗಳು ಧರೆಗುಳಿದರೆ ವಿದ್ಯುತ್ ಮಾರ್ಗ ಹಾಳಾಗಿ ಗ್ರಾಮಗಳು ಕತ್ತಲೆಯಲ್ಲಿ ಕಾಲ ಕಳೆಯಬೇಕು. ಕೂಡಲೇ ವಿದ್ಯುತ್ ಮಾರ್ಗದಲ್ಲಿ ಮರಗಳ ರೆಂಬೆಗಳನ್ನು ತೆಗೆದು ಮಾರ್ಗ ನಿರ್ವಹಣೆ ಕೆಲಸವನ್ನು ಸೆಸ್ಕ್ ಮಾಡಬೇಕು. ಈಗ ಮೋಡ ಬಂದ ಸಾಕು ಗಂಟೆಗಟ್ಟಲೆ ವಿದ್ಯುತ್ ಸಂಪರ್ಕ ತೆಗೆಯುವ ಸ್ಥಿತಿ ಇದೆ.
ಲಕ್ಷ್ಮೀಕಾಂತ್ ಕೊಮಾರಪ್ಪ, ಕಾಫಿ ಬೆಳೆಗಾರ, ಕೂತಿ ಗ್ರಾಮ

ಹಿಂದಿನ ಸರ್ಕಾರ ನಿವೇಶನ ನೀಡುವ ಭರವಸೆಯನ್ನು ನೀಡಿದ ಮೇರೆಗೆ ಕಳೆದ ೫ ವರ್ಷಗಳಿಂದ ಪ್ಲಾಸ್ಟಿಕ್ ಷೆಡ್ಡ್‌ನಲ್ಲಿ ಜೀವನ ನಡೆಸುತ್ತಿದ್ದೇವೆ. ನಮ್ಮನ್ನು ಕಡೆಗಣಿಸಿದ್ದ ಈ ಹಿಂದಿನ ಜನಪ್ರತಿನಿಧಿಗಳು ಚುನಾವಣೆಯಲ್ಲಿ ಸೋಲುವಂತಾಯಿತು. ಈಗಿನ ಜನಪ್ರತಿನಿಧಿಗಳಲ್ಲೂ ಇದೇ ಧೋರಣೆ ಕಂಡುಬರುತ್ತಿದೆ. ಅಧಿಕಾರ ಸ್ವಿಕಾರ ಮಾಡಿ ಒಂದು ವರ್ಷ ಕಳೆದಿದ್ದರೂ ನಿರಾಶ್ರಿತರ ವಿಚಾರದಲ್ಲಿ ವಿಳಂಬ ನೀತಿ ಸರಿಯಲ್ಲ.
ಯಮುನಾ, ಗ್ರಾ. ಪಂ. ಮಾಜಿ ಅಧ್ಯಕ್ಷೆ, ಸಿದ್ದಾಪುರ

ನದಿ ತೀರದಲ್ಲಿ ಮನೆಗಳಿಗೆ ಕಂದಾಯ, ವಿದ್ಯುತ್ ಪಡೆಯಲು ನಿರಪೇಕ್ಷಣಾ ಪತ್ರ, ಕುಡಿಯುವ ನೀರು, ರಸ್ತೆ, ಸೇರಿದಂತೆ ಎಲ್ಲಾ ಸೌಲಭ್ಯ ನೀಡಿದ ಅಧಿಕಾರಿಗಳೇ ನಿಷೇಧಿತ ಪ್ರದೇಶದಲ್ಲಿ ನಿಮ್ಮನ್ನು ಮನೆ ಕಟ್ಟಲು ಯಾರು ಹೇಳಿದ್ದು? ಎಂದು ಪ್ರಶ್ನಿಸುತ್ತಾರೆ. ಹಾಗಾದರೆ ದಾಖಲಾತಿಗಳನ್ನು ಹೇಗೆ ಕೊಟ್ಟರು ? ನಿಷೇಧಿತ ಪ್ರದೇಶದಲ್ಲಿ ನಾವು ವಾಸ ಮಾಡುವುದು ತಪ್ಪಾದರೆ, ಇಲ್ಲಿಗೆ ದಾಖಲಾತಿಗಳನ್ನು ಕೊಟ್ಟಿರುವ ಅವರೂ ತಪ್ಪಿತಸ್ಥರಲ್ಲವೇ ?
ಖಾಲಿದ್, ಕರಡಿಗೋಡು ನಿವಾಸಿ

ಮಳೆಯ ಅಬ್ಬರ ಕೊಡಗಿನಲ್ಲಿ ಹೆಚ್ಚಾಗುತ್ತಿದೆ. ಕುಶಾಲನಗರದ ತಗ್ಗು ಪ್ರದೇಶದ ಹಲವು ಬಡಾವಣೆಗಳ ನಿವಾಸಿಗಳು ಈಗಾಗಲೇ ಆತಂಕದಲ್ಲಿ ಜೀವಿಸುತ್ತಿದ್ದಾರೆ. ನದಿ ತಟದಲ್ಲಿ ಒತ್ತುವರಿಯಾಗಿರುವುದನ್ನು ತೆರವುಗೊಳಿಸಿ ಮುಳುಗಡೆ ಆಗುವುದನ್ನು ತಪ್ಪಿಸಬೇಕಿದೆ. ಮಳೆಯಿಂದಾಗಿ ಆಗುವ ಅನಾನುಕೂಲಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕಿದೆ.
ವಿಶ್ವೇಶ್ವರಯ್ಯ, ರೈತ, ಕೂಡುಮಂಗಳೂರು.

ಕೊಡಗಿನಲ್ಲಿ ಉತ್ತಮ ಮಳೆಗಾಲ, ಮುಂಗಾರು ಪ್ರವೇಶದ ಮುನ್ಸೂಚನೆ ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಲು ಅನುಕೂಲವಾಗಿದೆ. ಇದು ಕೃಷಿಕರಿಗೆ ಹಾಗೂ ತೋಟದ ಮಾಲೀಕರಿಗೆ ಸಂತೋಷದ ವಿಷಯಯವೂ ಹೌದು. ೨೦೧೮ರ ಜಲಪ್ರಳಯ ಜನರ ಮನಸ್ಸಿನಲ್ಲಿ ಹಚ್ಚ ಹಸಿರಾಗಿರುವಾಗಲೇ, ಮಳೆಗಾಲದಲ್ಲಿ ಆಗುವಂಥ ಬರೆ ಕುಸಿತ, ನೆರೆ, ಪ್ರವಾಹ, ವಿದ್ಯುತ್ ಶಕ್ತಿ ಸಮಸ್ಯೆ, ಇದನ್ನೆಲ್ಲಾ ಯೋಚನೆ ಮಾಡಿದರೆ ಜಿಲ್ಲೆಯಲ್ಲಿ ಜನಸಾಮಾನ್ಯರಿಗೆ ಏನೂ ತೊಂದರೆ ಆಗದಿರಲಿ. ಜಿಲ್ಲಾಡಳಿತ ಇದರ ಬಗ್ಗೆ ಮುನ್ನೆಚ್ಚರಿಕೆ ವಹಿಸಿ ಜಿಲ್ಲೆಯಲ್ಲಿ ಪ್ರವಾಹ ಬರುವಂಥ ಪ್ರದೇಶದಲ್ಲಿ ದೋಣಿ ವ್ಯವಸ್ಥೆಯನ್ನು ಮಾಡಿ, ಎನ್.ಡಿ.ಆರ್.ಎಫ್. ತಂಡ ನಿಯೋಜಿಸಿ ಸೂಕ್ತ ಕ್ರಮ ತೆಗೆದುಕೊಳ್ಳುವುದು ಒಳ್ಳೆಯದು.
ಮಾಚೇಟ್ಟಿರ ಕುಶು ಕುಶಾಲಪ್ಪ, ಗ್ರಾಮ ಪಂಚಾಯಿತಿ ಸದಸ್ಯ, ನಾಪೋಕ್ಲು

ಸಾರ್ವಜನಿಕರು ಈ ಮುಂಗಾರು ಮಳೆಯ ಸ್ವಾಗತದ ಸಿದ್ಧತೆಯಲ್ಲಿದ್ದಾರೆ. ತಗ್ಗು ಪ್ರದೇಶದಲ್ಲಿ ಇರುವ ಮನೆಗಳು ಜಿಲ್ಲೆಯಲ್ಲಿದ್ದು ಇವುಗಳಿಗೆ ಮಳೆಗಾಲದಲ್ಲಿ ಅಪಾಯ ಕಟ್ಟಿಟ್ಟ ಬುತ್ತಿ. ಕೆಲವೊಂದು ತಡೆಗೋಡೆಗಳು ಸಂಪೂರ್ಣ ಕಳಪೆಯಾಗಿದ್ದು, ಈ ತಡೆಗೋಡೆಗಳಿಂದ ಅಪಾಯ ಸಂಭವಿಸುವ ಸಾಧ್ಯತೆ ಹೆಚ್ಚಿದೆ. ಇಂಥ ತಡೆಗೋಡೆಗಳನ್ನು ಪರಿಶೀಲನೆ ಮಾಡಿ ಸೂಚನಾ ಫಲಕ ಅಳವಡಿಸಬೇಕಿದೆ. ಅಪಾಯ ಸಂಭವಿಸಿದಾಗ ಕಂಟ್ರೋಲ್ ರೂಂ ನಂಬರ್ ಸಂಪರ್ಕಿಸಿ ಎನ್ನುತ್ತಾರೆ. ಆದರೆ ಜೋರಾದ ಗಾಳಿ ಮಳೆ ಬಂದಾಗ ವಿದ್ಯುತ್ ಸಂಪರ್ಕ ಕಡಿತವಾಗುವುದು ಸರ್ವೆ ಸಾಮಾನ್ಯವಾಗಿಬಿಟ್ಟಿದೆ. ಇದರಿಂದ ಜಿಲ್ಲೆಯಲಿ ಮೊಬೈಲ್ ಸಂಪರ್ಕ ಸಹ ಕಡಿತವಾಗುತ್ತದೆ. ಆದುದ್ದರಿಂದ ಮಳೆಗಾಲದಲ್ಲಿ ದಿನದ ೨೪ಗಂಟೆ ವಿದ್ಯುತ್ ಕಡಿತವಾಗದ ರೀತಿ ಕ್ರಮಕ್ಕೆ ಮುಂದಾಗಬೇಕಿದೆ.
ಚಂದ್ರಶೇಖರ್, ರೈತ ಸಂಘದ ಉಪಾಧ್ಯಕ್ಷ, ಸೋಮವಾರಪೇಟೆ ತಾಲೂಕು

ಕೊಡಗಿನಲ್ಲಿ ಸದ್ಯಕ್ಕೆ ವಾಡಿಕೆಗಿಂತ ಹೆಚ್ಚು ಮಳೆ ಆಗಿದ್ದು ಇದು ಸಂತಸದ ಸುದ್ದಿ. ಕಳೆದ ವರ್ಷ ಮಳೆ ಕೊರತೆಯಿಂದ ಕೃಷಿ ಕಾರ್ಯ ನಿಂತು ಹೋಗಿತ್ತು. ಆದರೆ ಈ ವರ್ಷ ಉತ್ತಮ ಮಳೆ ಆಗುತ್ತಿರುವುದು
ಸಂಭ್ರಮವಾದರೆ ಮತ್ತೊಂದು ಕಡೆ ಗುಡ್ಡ ಕುಸಿತದ ಭಯವೂ ಇದ್ದು ಆದಷ್ಟು ಜನರು ಎಚ್ಚರಿಕೆಯಿಂದ ಇರುವುದು ಸೂಕ್ತ.
ಕ್ಲಾರಾ, ಶಿಕ್ಷಕಿ, ವಿರಾಜಪೇಟೆ

ಪ್ರತಿ ವರ್ಷ ಮಳೆಗಾಲದಲ್ಲಿ ಭಾಗಮಂಡಲ ದ್ವೀಪವಾಗುವ ಆತಂಕ ಇತ್ತು, ವಾರಗಟ್ಟಲೆ ಇಲ್ಲಿನ ನಿವಾಸಿಗಳು ಹೊರಜಗತ್ತಿನ ಜತೆ ಸಂಪರ್ಕ ಕಡಿದುಕೊಳ್ಳುವಂತಾಗುತ್ತಿತ್ತು. ಆದರೆ ಈ ಬಾರಿ ಇಲ್ಲಿ ಮೇಲ್ಸೇತುವೆ ಬಳಕೆಗೆ ಲಭ್ಯ ಆಗಿರುವುದರಿಂದ ಆ ಆತಂಕ ಇಲ್ಲ. ಅಲ್ಲಲ್ಲಿ ಮರ ಬಿದ್ದು ರಸ್ತೆ ಸಂಪರ್ಕ ಕಡಿತವಾಗುವುದು, ವಿದ್ಯುತ್ ಕಡಿತವಾಗುವುದು, ಮೊಬೈಲ್ ನೆಟ್‌ವರ್ಕ್ ಇಲ್ಲದಂತಾಗುವುದು ಮತ್ತಿತರ ಸಮಸ್ಯೆಗಳಿವೆ. ರಸ್ತೆಗಳೂ ದುಸ್ಥಿತಿ ತಲುಪಿವೆ.
ಶ್ರೀನಾಥ್ ನಾಯಕ್, ಭಾಗಮಂಡಲ

ಜಿಲ್ಲೆಯಲ್ಲಿ ಪೂರ್ವ ಮುಂಗಾರು ಉತ್ತಮವಾಗಿದ್ದು, ಮುಂದಿನ ಮುಂಗಾರು ಸಂದರ್ಭದಲ್ಲಿ ಹೆಚ್ಚಿನ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಆದ್ದರಿಂದ ಮುಂಗಾರು ಸಂದರ್ಭದಲ್ಲಿ ಉಂಟಾಗಬಹುದಾದ ಪ್ರಾಕೃತಿಕ ವಿಕೋಪವನ್ನು ಎದುರಿಸಲು ಈಗಿನಿಂದಲೇ ಎಚ್ಚರ ವಹಿಸಬೇಕಿದೆ ಎಂದು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಹೆಚ್ಚಿನ ಮಳೆಯಾಗಿ ಪ್ರವಾಹ ಉಂಟಾದಲ್ಲಿ, ಪ್ರವಾಹ ಪೀಡಿತ ಪ್ರದೇಶಗಳ ಜನರನ್ನು ಹತ್ತಿರದ ಕಾಳಜಿ ಕೇಂದ್ರಕ್ಕೆ ಸ್ಥಳಾಂತರಿಸಲು ಮುಂದಾಗಬೇಕು. ಕಾಳಜಿ ಕೇಂದ್ರಗಳಲ್ಲಿ ಅಗತ್ಯ ಮೂಲ ಸೌಲಭ್ಯ ಒದಗಿಸಬೇಕು. ಕುಡಿಯುವ ನೀರು ಸಂಬಂಧಿಸಿದಂತೆ ಎಲ್ಲಾ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಶುದ್ಧ ಕುಡಿಯುವ ನೀರನ್ನು ಒದಗಿಸಬೇಕು ಎಂದು ಕೂಡ ಸೂಚಿಸಲಾಗಿದೆ.
ವೆಂಕಟ್ ರಾಜಾ, ಕೊಡಗು ಜಿಲ್ಲಾಧಿಕಾರಿ