ಜಿಲ್ಲೆ

ರಾಜ್ಯದಲ್ಲಿ ಇನ್ನೂ ಐದು ದಿನ ಮಳೆ ಸುರಿಯುವ ಸಾಧ್ಯತೆ, ತಾಪಮಾನ ಏರಿಳಿತದಿಂದ ಚಳಿ ಹೆಚ್ಚಳ

ರಮೇಶ್​ ಕುಮಾರ್​​ ಬಿ ಎಡಮೋಳೆ

ಬೆಂಗಳೂರು: ನಿವಾರ್ ಚಂಡಮಾರುತ ಪ್ರಭಾವದಿಂದಾಗಿ ತಾಪಮಾನದಲ್ಲಿ ಏರಿಳಿತವಾಗಿರುವ ಪರಿಣಾಮ ರಾಜ್ಯದ ಹಲವು ಜಿಲ್ಲೆಗಳಲ್ಲಿ ಚಳಿ ಹೆಚ್ಚಳವಾಗಿದೆ. ಮೋಡ ಕವಿದ ವಾತಾವರಣ, ಉಷ್ಣಾಂಶದಲ್ಲಿ ಇಳಿಕೆ, ಹೆಚ್ಚುತ್ತಿರುವ ಗಾಳಿ ಆರ್ಭಟ ಈ ಎಲ್ಲ ಪರಿಣಾಮ ವಾತಾವರಣವನ್ನು ಥಂಡಿಗೊಳಿಸಿರುವುದಾಗಿ ಹವಾಮಾನ ಇಲಾಖೆ ತಿಳಿಸಿದೆ.

ವಿಜಯಪುರ, ಕಲಬುರಗಿ, ಬೀದರ್, ಹಾವೇರಿ, ಕೊಪ್ಪಳ ಹಾಗೂ ರಾಯಚೂರು ಸೇರಿ ಉತ್ತರ ಒಳನಾಡಿನ ಕೆಲ ಜಿಲ್ಲೆಗಳಲ್ಲಿ ಗರಿಷ್ಠ ತಾಪಮಾನದಲ್ಲಿ 5-6 ಡಿಗ್ರಿ ಸೆಲ್ಸಿಯಸ್ ಹಾಗೂ ಬೆಳಗಾವಿ, ಹುಬ್ಬಳ್ಳಿ ಧಾರವಾಡ, ಚಿತ್ರದುರ್ಗ ಹಾಗೂ ದಾವಣಗೆರೆಯಲ್ಲಿ ಗರಿಷ್ಠ ತಾಪಮಾನದಲ್ಲಿ 2-3 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ಇಳಿಕೆಯಾಗಿದೆ. ಆದ್ದರಿಂದ, ಈ ಭಾಗಗಳಲ್ಲಿ ಮುಂದಿನ ಎರಡ್ಮೂರು ದಿನ ಚಳಿ ಹೆಚ್ಚಳವಾಗಲಿದೆ. ದಕ್ಷಿಣ ಒಳನಾಡು ಹಾಗೂ ಕರಾವಳಿ ಜಿಲ್ಲೆಗಳಲ್ಲಿ ಚಳಿಯಿದೆ. ಈ ಭಾಗಗಳಲ್ಲಿ ಗರಿಷ್ಠ ಹಾಗೂ ಕನಿಷ್ಠ ತಾಪಮಾನದಲ್ಲಿ ತುಸು ಏರಿಳಿತವಾಗಿದೆ. ಶೀತ ಗಾಳಿ ಬೀಸುತ್ತಿದ್ದು, ಮುಂದಿನ ಮೂರು ದಿನ ಚಳಿ ಇರಲಿದೆ ಎಂದು ಹವಾಮಾನ ಇಲಾಖೆ ನಿರ್ದೇಶಕ ಸಿ.ಎಸ್. ಪಾಟೀಲ ಮಾಹಿತಿ ನೀಡಿದ್ದಾರೆ.

ವಾಯುಭಾರ ಕುಸಿತ

ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತ ಪರಿಣಾಮ ರಾಜ್ಯದಲ್ಲಿ ಮುಂದಿನ 5 ದಿನ ಸಾಧಾರಣ ಮಳೆಯಾಗಲಿದೆ. ಶನಿವಾರವೂ ರಾಜ್ಯದ ವಿವಿಧೆಡೆ ಗುಡುಗು ಮಿಂಚು ಸಹಿತ ಸಾಧಾರಣ ಮಳೆಯಾಗಿದೆ. ನ.29ರಿಂದ ಮುಂದಿನ 2 ದಿನ ಸಾಧಾರಣ ಮಳೆಯಾಗಲಿದೆ ಎಂದು ಇಲಾಖೆ ಮೂನ್ಸೂಚನೆ ನೀಡಿದೆ.

ಎಚ್ಚರ ವಹಿಸಲು ವೈದ್ಯರ ಸಲಹೆ

  • ಮುಂಜಾನೆ 4 ಗಂಟೆಯಿಂದ 7 ಗಂಟೆವರೆಗೆ ಚಳಿಯ ತೀವ್ರತೆ ಹೆಚ್ಚಿರುತ್ತದೆ.
  • ವಾಯುವಿಹಾರಕ್ಕೆ ಹೋಗುವವರು ಎಚ್ಚರಿಕೆ ವಹಿಸಬೇಕು.
  • ಉಸಿರಾಟ ಸಮಸ್ಯೆ ಎದುರಿಸುತ್ತಿರುವವರು, ಎಲುಬು, ಕೀಲುನೋವಿನಿಂದ ಬಳಲುತ್ತಿರುವವರು ಮನೆಯಿಂದ ಹೊರಗೆ ಕಾಲಿಡಬಾರದು.
  • ಚಳಿಗಾಲದಲ್ಲಿ ಶೀತ, ನೆಗಡಿ, ಕೆಮ್ಮು, ಜ್ವರ, ಎದುರಾಗುವ ಸಾಧ್ಯತೆಗಳಿವೆ. ಕಾಲಿನ ಹಿಮ್ಮಡಿ, ತುಟಿ, ಚರ್ಮ ಒಣಗಲಿದೆ. ಈ ಬಗ್ಗೆ ಜನರು ಅಗತ್ಯ ಮುನ್ನೆಚ್ಚರಿಕೆ ಕ್ರಮ ತೆಗೆದುಕೈಗೊಳ್ಳಬೇಕು.
  • ಚಳಿಗಾಲದಲ್ಲಿ ದೇಹವನ್ನು ಬೆಚ್ಚಗಿರಿಸಿಕೊಳ್ಳುವ ಜತೆಗೆ ಕುದಿಸಿ ಆರಿಸಿದ ನೀರು, ಬಿಸಿ ಹಾಗೂ ಶುಚಿಯಾದ ಆಹಾರ ಬಳಸಬೇಕು. ಫ್ರಿಜ್​ನಲ್ಲಿಟ್ಟ ಆಹಾರ ಸೇವಿಸಬಾರದು.