ಶನಿವಾರಸಂತೆ: ಕೊಡಗು-ಹಾಸನ ಜಿಲ್ಲಾ ಗಡಿಭಾಗದಲ್ಲಿ ಹೋಬಳಿ ಕೇಂದ್ರವಾಗಿರುವ ಶನಿವಾರಸಂತೆಗೆ ಹಾಸನ ಜಿಲ್ಲೆಯಿಂದಲೂ ಜನರು ಬರುತ್ತಿರುವುದರಿಂದ ವಾಹನ ದಟ್ಟಣೆಯಿಂದ ಸುಗಮ ಸಂಚಾರಕ್ಕೆ ತೊಂದರೆಯಾಗುತ್ತಿದೆ.
ಹಾಸನ ಜಿಲ್ಲೆಯ ಸಕಲೇಶಪುರ, ಆಲೂರು. ಅರಕಲಗೂಡು ವ್ಯಾಪ್ತಿಯ ಜನರು ಪ್ರತಿ ದಿನ ವಾಹನಗಳಲ್ಲಿ ಇಲ್ಲಿಗೆ ಬರುವುದು ಅನಿವಾರ್ಯವಾಗಿದೆ. ಶನಿವಾರಸಂತೆ ಪಟ್ಟಣ ದಿನೇದಿನೆ ಅಭಿವೃದ್ಧಿ ಹೊಂದುತ್ತಿರುವ ಜತೆಯಲ್ಲಿ ವಾಹನಗಳ ಸಂಖ್ಯೆಯೂ ಹೆಚ್ಚಾಗುತ್ತಿದೆ. ಪಟ್ಟಣದಲ್ಲಿ ಮುಖ್ಯ ರಸ್ತೆ ಬದಿಯಲ್ಲಿ ಅಂಗಡಿ, ಹೋಟೆಲ್, ಶಾಪಿಂಗ್ ಕಾಂಪ್ಲೆಕ್ಸ್, ಕಟ್ಟಡಗಳಿದ್ದು ಮುಖ್ಯ ರಸ್ತೆ ತೀರಾ ಇಕ್ಕಟ್ಟಾರುವುದು ಮತ್ತು ವಾಹನಗಳ ದಟ್ಟಣೆ ನಡುವೆ ರಸ್ತೆಯ ಎರಡೂ ಬದಿಗಳಲ್ಲಿ ಕಾರು, ಜೀಪು, ಬೈಕ್, ಬಸ್ ಮುಂತಾದ ವಾಹನಗಳ ನಿಲುಗಡೆ ಮಾಡುವುದರಿಂದ ಶನಿವಾರಸಂತೆ ಪಟ್ಟಣದಲ್ಲಿ ಟ್ರಾಫಿಕ್ ಸಮಸ್ಯೆ ಹೆಚ್ಚಾಗುತ್ತಿದೆ.
ಪಟ್ಟಣದ ಮಧ್ಯಪೇಟೆಯ ಯೂನಿಯನ್ ಬ್ಯಾಂಕ್ ಸಮೀಪ ಮತ್ತು ಕೆಆರ್‌ಸಿ ವೃತ್ತದಲ್ಲಿ ಟ್ರಾಫಿಕ್ ಸಮಸ್ಯೆ ಹೆಚ್ಚಾಗಿದೆ. ಹಿಂದೆ ಪೊಲೀಸರು ವಾಹನಗಳನ್ನು ತಿಂಗಳಲ್ಲಿ 15 ದಿನ ಎಡ ಬದಿಯಲ್ಲಿ 15 ದಿನ ಬಲ ಬದಿಯಲ್ಲಿ ವಾಹನ ನಿಲುಗಡೆ ಮಾಡಲು ವ್ಯವಸ್ಥೆ ಮಾಡಿದ್ದರು. ಇದರಿಂದ ಪಟ್ಟಣದಲ್ಲಿ ಟ್ರಾಫಿಕ್ ಸಮಸ್ಯೆ ಕೊಂಚ ಕಡಿಮೆಯಾಗಿತ್ತು.
ಆದರೆ ಕಳೆದ 5 ವರ್ಷದಿಂದ ವಾಹನ ಸವಾರರು ಹಿಂದೆ ಇದ್ದ ನಿಯಮವನ್ನು ಗಾಳಿಗೆ ತೂರಿ ಎಲ್ಲಡೆಯಲ್ಲೂ ವಾಹನಗಳನ್ನು ನಿಲುಗಡೆ ಮಾಡುತ್ತಾರೆ. ಇದರಿಂದ ಬಸ್, ಲಾರಿ ಮುಂತಾದ ದೊಡ್ಡ ವಾಹನಗಳ ಸಂಚಾರಕ್ಕೆ ಅಡ್ಡಿಯಾಗುತ್ತಿದೆ. ಪಟ್ಟಣದ ಕೆಆರ್‌ಸಿ ವೃತ್ತದಲ್ಲಂತೂ ಟ್ರಾಫಿಕ್ ಸಮಸ್ಯೆ ಹೆಚ್ಚಾಗುತ್ತಿದೆ. ಪ್ರತಿದಿನ 40ಕ್ಕಿಂತ ಹೆಚ್ಚಿನ ಕೆಎಸ್‌ಆರ್‌ಟಿ ಬಸ್‌ಗಳು ಬೆಂಗಳೂರು, ಮಂಗಳೂರು, ಮೈಸೂರು, ಹಾಸನ, ಶಿವಮೊಗ್ಗ, ದಾವಣಗೆರೆ, ತುಮಕೂರು ಇನ್ನು ಮುಂತಾದ ಕಡೆಗಳಿಗೆ ಶನಿವಾರಸಂತೆ ಮೂಲಕ ಸಂಚರಿಸುತ್ತವೆ.
20ಕ್ಕಿಂತ ಹೆಚ್ಚಿನ ಖಾಸಗಿ ಬಸ್‌ಗಳು ಸಂಚರಿಸುತ್ತವೆ. ಆದರೆ, ಕೆಎಸ್‌ಆರ್‌ಟಿಸಿ ಮತ್ತು ಖಾಸಗಿ ಬಸ್‌ಗಳ ನಿಲುಗಡೆಗೆ ಬಸ್ ನಿಲ್ದಾಣದ ವ್ಯವಸ್ಥೆ ಇಲ್ಲದೆ ಎಲ್ಲ ಬಸ್‌ಗಳು ಒಂದೇ ಕಡೆಯಲ್ಲಿ ನಿಲುಗಡೆ ಮಾಡಲಾಗುತ್ತಿದೆ. ಜತೆಗೆ ಎರಡೂ ಬದಿಯಲ್ಲೂ ಕಾರು, ಜೀಪು, ದ್ವಿಚಕ್ರ ವಾಹನಗಳನ್ನು ನಿಲುಗಡೆ ಮಾಡಲಾಗುತ್ತಿದೆ. ಇದರಿಂದ ವಾಹನಗಳ ದಟ್ಟಣೆ ಹೆಚ್ಚಾಗಿ ಟ್ರಾಫಿಕ್ ಸಮಸ್ಯೆಯಾಗುತ್ತಿದೆ. ಶನಿವಾರ ಸಂತೆ ದಿನವಾಗಿದ್ದು ವಾಹನಗಳ ದಟ್ಟಣೆಯಿಂದ ವಾಹನ ಸಂಚಾರಕ್ಕೆ ಅಡಚಣೆಯಾಗುತ್ತದೆ. ಶನಿವಾರ ದಿನ ಒನ್‌ವೇ ಸಂಚಾರ ನಿಯಮ ಇದ್ದರೂ ವಾಹನ ಸವಾರರು ಉಲ್ಲಂಘಿಸುತ್ತಾರೆ. ಕೆಆರ್‌ಸಿ ವೃತ್ತದಲ್ಲಿ ಪೊಲೀಸ್ ಕಾನ್‌ಸ್ಟೆಬಲ್ ನಿಯೋಜಿಸಿದ್ದರೂ ಅವರು ವಾಹನಗಳ ದಟ್ಟಣೆ ನೋಡಿ ನೋಡದಂತೆ ಸುಮ್ಮನಾಗುತ್ತಾರೆ. ಇದರಿಂದ ವಾಹನ ಸವಾರರು ಎಲ್ಲೆಡೆಯಲ್ಲೂ ವಾಹನಗಳನ್ನು ನಿಲುಗಡೆ ಮಾಡುತ್ತಿರುವುದರಿಂದ ಟ್ರಾಫಿಕ್ ಸಮಸ್ಯೆ ದಿನೇದಿನೆ ಉಲ್ಬಣವಾಗುತ್ತಿದೆ.
ಶನಿವಾರಸಂತೆಯಲ್ಲಿ ಟ್ರಾಫಿಕ್ ಸಮಸ್ಯೆ ಹೆಚ್ಚಾಗುತ್ತಿದೆ. ಈ ಹಿಂದೆ ತಿಂಗಳಲ್ಲಿ 15 ದಿನ ಎಡ ಬದಿ ಮತ್ತು 15 ದಿನ ಬಲ ಬದಿಯಲ್ಲಿ ವಾಹನಗಳನ್ನು ನಿಲುಗಡೆ ಮಾಡಲಾಗುತ್ತಿತ್ತು. ಇದರಿಂದ ಸ್ವಲ್ಪಮಟ್ಟಿಗೆ ಟ್ರಾಫಿಕ್ ಸಮಸ್ಯೆ ಕಡಿಮೆಯಾಗಿತ್ತು. ಪೊಲೀಸರು ಹಿಂದಿನ ಕ್ರಮವನ್ನು ಮುಂದುವರಿಸಿ ನಿಯಮ ಉಲ್ಲಂಘಿಸುವ ವಾಹನ ಮಾಲೀಕರಿಗೆ ಕಾನೂನಿನಂತೆ ದಂಡ ವಿಧಿಸಿದರೆ ಮಾತ್ರ ಟ್ರಾಫಿಕ್ ಸಮಸ್ಯೆ ಕಡಿಮೆ ಮಾಡಬಹುದು. ನಟೇಶ್ ವರ್ತಕ, ಶನಿವಾರಸಂತೆ ಶನಿವಾರಸಂತೆಯ ಎಲ್ಲಡೆ ವಾಹನಗಳನ್ನು ನಿಲುಗಡೆ ಮಾಡುವುದರಿಂದ ಟ್ರಾಫಿಕ್ ಸಮಸ್ಯೆ ಜತೆಯಲ್ಲಿ ವರ್ತಕರ ವ್ಯಾಪಾರ, ವಹಿವಾಟಿಗೆ ಅಡಚಣೆಯಾಗುತ್ತಿದೆ. ಕಾರು, ದ್ವಿಚಕ್ರ ವಾಹನಗಳಿಗೆ ಪ್ರತ್ಯೇಕವಾಗಿ ನಿಲುಗಡೆ ವ್ಯವಸ್ಥೆ ಮಾಡಿದರೆ ಟ್ರಾಫಿಕ್ ಸಮಸ್ಯೆ ಕಡಿಮೆಯಾಗುತ್ತದೆ. ಕೆಆರ್‌ಸಿ ವೃತ್ತದಲ್ಲಿ ನಿಯೋಜನೆ ಮಾಡುವ ಪೊಲೀಸರು ವೃತ್ತದಲ್ಲಿ ನಿಲ್ಲಲು ವ್ಯವಸ್ಥೆ ಮಾಡಬೇಕು, ವ್ಯವಸ್ಥೆ ಇಲ್ಲದೆ ಇರುವುದರಿಂದ ಅಂಗಡಿ ಹೋಟೆಲ್‌ಗಳ ಬದಿಯಲ್ಲಿ ನಿಲ್ಲುತ್ತಾರೆ. ಇದರಿಂದ ವಾಹನಗಳು ಎಲ್ಲೆಂದರಲ್ಲಿ ನಿಂತು ತೊಂದರೆಯಾಗುತ್ತಿದೆ. ಹರ್ಷ ಚಾಲಕ, ಶನಿವಾರಸಂತೆ ಕೆಆರ್‌ಸಿ ವೃತ್ತದಲ್ಲಿ ಟ್ರಾಫಿಕ್ ಸಮಸ್ಯೆ ಹೆಚ್ಚಾಗಿದ್ದು ಬೈಪಾಸ್ ರಸ್ತೆ ಬದಿಯಲ್ಲಿ ಶನಿವಾರ ದಿನ ಹೊರತು ಪಡಿಸಿ ಮಿಕ್ಕಿದ ದಿನಗಳಲ್ಲಿ ಕಾರು, ಜೀಪು, ದ್ವಿಚಕ್ರ ವಾಹನಗಳ ನಿಲುಗಡೆಗೆ ವ್ಯವಸ್ಥೆ ಮಾಡಿಕೊಡಬೇಕು ಪೊಲೀಸರು ಟ್ರಾಫಿಕ್ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಕ್ರಮಕೈಗೊಳ್ಳಬೇಕಿದೆ. ಸರ್ದಾರ್ ಅಹಮ್ಮದ್ ಅಧ್ಯಕ್ಷ ವರ್ತಕರ ಸಂಘ, ಶನಿವಾರಸಂತೆ ಟ್ರಾಫಿಕ್ ಸಮಸ್ಯೆ ಕುರಿತು ಪೊಲೀಸರು ಕ್ರಮಕೈಗೊಳ್ಳುವ ಸಲುವಾಗಿ ಶನಿವಾರಸಂತೆ ಗ್ರಾ.ಪಂ.ವತಿಯಿಂದ ಸಂಬಂಧಪಟ್ಟ ಪೊಲೀಸರಿಗೆ ಯಾವ ಸ್ಥಳದಲ್ಲಿ ವಾಹನ ನಿಲ್ಲಿಸಿದರೆ ಟ್ರಾಫಿಕ್ ಸಮಸ್ಯೆ ಬಗೆಹರಿಯಬಹುದು ಎಂದು ಸ್ಥಳವನ್ನು ಅನೇಕ ವರ್ಷಗಳ ಹಿಂದೆ ಗುರುತಿಸಿ ಮನವಿ ಸಲ್ಲಿಸಲಾಗಿದೆ. ಅದಕ್ಕೆ ಸಂಬಂಧಪಟ್ಟಂತೆ ವರ್ಷದ ಹಿಂದೆ ಸಭೆ ನಡೆಸಲಾಗಿತ್ತು. ಗೀತಾ ಹರೀಶ್ ಅಧ್ಯಕ್ಷೆ ಗ್ರಾಮ ಪಂಚಾಯಿತಿ, ಶನಿವಾರಸಂತೆ ಟ್ರಾಫಿಕ್ ಸಮಸ್ಯೆ ಗಮನಕ್ಕೆ ಬಂದಿದೆ. ವಾಹನಗಳು ಹೆಚ್ಚಾಗಿದ್ದು ಸ್ಥಳ ಕಡಿಮೆ ಇದೆ. ಈ ನಿಟ್ಟಿನಲ್ಲಿ ಟ್ರಾಫಿಕ್ ಸಮಸ್ಯೆಯನ್ನು ಯಾವ ರೀತಿ ಬಗೆಹರಿಸಬಹುದು ಎಂದು ಪರಿಶೀಲನೆ ಮಾಡುತ್ತೇನೆ. ಇಕ್ಕಟ್ಟಾದ ರಸ್ತೆ ಆಗಿರುವುದರಿಂದ ವಾಹನ ದಟ್ಟನೆ ಹೆಚ್ಚಾಗುತ್ತಿದೆ. ಆದರೂ ಕಾನ್‌ಸ್ಟೆಬಲ್‌ಗಳನ್ನು ವಾಹನ ದಟ್ಟಣೆ ಆಗುವ ಸ್ಥಳದಲ್ಲಿ ಕರ್ತವ್ಯ ನಿರ್ವಹಿಸಲು ನಿತ್ಯ ನಿಯೋಜಿಸಲಾಗುತ್ತಿದೆ. ಏಕಮುಖ ಸಂಚಾರ ಮಾಡಿಸಬಹುದು. ಇದು ಸ್ಥಳೀಯ ವರ್ತಕರಿಗೆ ತೊಂದರೆ ಆಗಲಿದೆ. ಮುಂದೆ ಪರಿಶೀಲನೆ ನಡೆಸಿ ಟ್ರಾಫಿಕ್ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲಾಗುವುದು. ಕೃಷ್ಣರಾಜ್ ಪೊಲೀಸ್ ವೃತ್ತ ನಿರೀಕ್ಷಕ, ಶನಿವಾರಸಂತೆ