ಹಾರಂಗಿ ಡ್ಯಾಂನಲ್ಲಿ ಭದ್ರತೆಗೆ ನಿಯೋಜನೆಗೊಂಡಿರುವ ಪೊಲೀಸ್ ಸಿಬ್ಬಂದಿ. 
ಜಿಲ್ಲೆ

ಹಾರಂಗಿ ಜಲಾಶಯಕ್ಕೂ ಹೆಚ್ಚಿನ ಭದ್ರತೆ

ರವಿಕುಮಾರ್ ಪಿ. ಕೆ

ಮಡಿಕೇರಿ; ಪಾಕಿಸ್ತಾನದಲ್ಲಿನ ಉಗ್ರರ ನೆಲೆಗಳನ್ನು ಭಾರತೀಯ ಸೇನೆ ಆಪರೇಷನ್ ಸಿಂಧೂರ ಹೆಸರಿನಲ್ಲಿ ಧ್ವಂಸಗೊಳಿಸದೆ ಬೆನ್ನಲ್ಲೇ ದೇಶದ ಎಲ್ಲ ಡ್ಯಾಂಗಳ ಭದ್ರತೆಗೆ ಕೇಂದ್ರ ಸೂಚನೆ ನೀಡಿದ್ದು, ಅದರಂತೆ ಕೊಡಗು ಜಿಲ್ಲೆಯ ಕುಶಾಲನಗರ ಸಮೀಪದಲ್ಲಿರುವ ಮುಖ್ಯ ಹಾರಂಗಿ ಜಲಾಶಯಕ್ಕೂ ಗುರುವಾರ ಹೆಚ್ಚಿನ ಭದ್ರತೆ ನೀಡಲಾಗಿದೆ.

ಮೊದಲಿದ್ದ ಭದ್ರತೆಯನ್ನು ಮತ್ತಷ್ಟು ಹೆಚ್ಚು ಮಾಡಲಾಗಿದ್ದು, ಡ್ಯಾಂ ಭದ್ರತಾ ಪಡೆ ಜತೆ ಸ್ಥಳೀಯ ಪೊಲೀಸ್ ಸೇರಿದಂತೆ ಸುಮಾರು 24 ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿದೆ. ರಜೆಯ ಮೇಲೆ ತೆರಳಿದ್ದ ಪೊಲೀಸ್ ಸಿಬ್ಬಂದಿಯನ್ನು ತಕ್ಷಣವೇ ಕರ್ತವ್ಯಕ್ಕೆ ಹಾಜರಾಗುವಂತೆ ಅದೇಶ ಹೊರಡಲಾಗಿದೆ. ಎಲ್ಲ ಪೊಲೀಸರು ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಮೂರು ಪಾಳಯದಲ್ಲೂ ಕಾವಲು ಕಾಯುವಂತೆ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ.

ಡ್ಯಾಂಗೆ ಬರುವ ಪ್ರವಾಸಿಗರನ್ನು ಸಂಪೂರ್ಣ ತಪಾಸಣೆ ಮಾಡಿ ಒಳಗೆ ಬಿಡಲಾಗುತ್ತಿದೆ. ಹಾರಂಗಿ ಜಲಾಶಯಕ್ಕೆ ಇಲಾಖೆಯ ಇಂಜಿನಿಯರ್‌ಗಳು ಭೇಟಿ ನೀಡುತ್ತಿದ್ದಾರೆ. ಭದ್ರತಾ ದೃಷ್ಟಿಯಿಂದ ಡ್ಯಾಂನ ಡ್ರೈನೈಜ್ ಗ್ಯಾಲರಿಯನ್ನು ಅಧಿಕಾರಿಗಳು, ಪೊಲೀಸ್ ಸಿಬ್ಬಂದಿ ತಪಾಸಣೆ ನಡೆಸುತ್ತಿದ್ದಾರೆ. ಇಲಾಖೆಯ ಅಧಿಕಾರಿ ಮಂಜುನಾಥ್, ಮುಖ್ಯ ಇಂಜಿನಿಯರ್ ರಘುಪತಿ, ಹಾರಂಗಿ ಅಧೀಕ್ಷಕ ಇಂಜಿನಿಯರ್ ಸೇರಿದಂತೆ ಇಲಾಖೆ ಸಿಬ್ಬಂದಿ ಪರಿಶೀಲನೆ ನಡೆಸಿದರು.