*ಆಸ್ಪತ್ರೆಯತ್ತ ಜನರ ದಾಂಗುಡಿ*
*ರಾಮನಗರ ಜಿಲ್ಲೆಯ 3 ತಾಲೂಕುಗಳಲ್ಲಿ ಸ್ಟೆಮಿ ಪರೀಕ್ಷೆ*
*ಮರಣ ದಾಖಲಾತಿಗೆ ಸೇರದೆ ಮುಚ್ಚಿಹೋಗುತ್ತಿವೆ ಪ್ರಕರಣ*
ಗಂಗಾಧರ್ ಬೈರಾಪಟ್ಟಣ ರಾಮನಗರ
ಈಗ ಎಲ್ಲೆಡೆ ಹೃದಯಾಘಾತದಿಂದ ಮೃತಪಟ್ಟ ಪ್ರಕರಣಗಳ ಸುದ್ದಿಯೇ ಹರಿದಾಡುತ್ತಿದೆ. ಜಿಲ್ಲೆಯಲ್ಲಿಯೂ ಇದೇ ಭಯ ಆವರಿಸಿದ್ದು, ಹೃದಯ ಪರೀಕ್ಷೆಗೆ ಬರುವವರ ಸಂಖ್ಯೆಯೂ ಹೆಚ್ಚಳವಾಗುತ್ತಿದೆ.
ಹಾಸನದಲ್ಲಿ ಹೃದಯಾಘಾತದಿಂದ ಮೃತಪಟ್ಟವರ ಸಂಖ್ಯೆ ಹೆಚ್ಚಳವಾಗುತ್ತಿದ್ದಂತೆ ಇದೊಂದು ಸಮೂಹ ಸನ್ನಿ ಎನ್ನುವಂತೆ ಎಲ್ಲೆಡೆ ಹೃದಯ ರೋಗ ತಪಾಸಣೆಗಳು ಹೆಚ್ಚುತ್ತಿವೆ. ಜಿಲ್ಲೆಯಲ್ಲಿ ಕಳೆದ 6 ತಿಂಗಳಲ್ಲಿ ಒಟ್ಟು 2942 ಮಂದಿ ಇಸಿಜಿ ಮಾಡಿಸಿಕೊಂಡಿದ್ದಾರೆ. ಇದರಲ್ಲಿ 67 ಮಂದಿ ಸ್ಟೆಮಿ ಚಿಕಿತ್ಸೆಗೆ ಒಳಗಾಗಿದ್ದಾರೆ. 218 ಮಂದಿಗೆ ತೀವ್ರ ತರಹದ ಹÊದಯ ಸಂಬಂಧಿ ಕಾಯಿಲೆ ಇರುವುದು ಪತ್ತೆಯಾಗಿದೆ. ಇದರಲ್ಲಿ 1727 ಮಂದಿಗೆ ಹೃದಯ ಬಡಿತ ಅಸಹಜವಾಗಿರುವುದು ಕಂಡು ಬಂದಿದೆ. ಜತೆಗೆ, 930 ಮಂದಿಗೆ ಹೃದಯದ ಆರೋಗ್ಯ ಸಾಮಾನ್ಯವಾಗಿರುವುದು ಪತ್ತೆಯಾಗಿದೆ.
ಜಿಲ್ಲೆಯಲ್ಲಿ ಮೂರು ಕಡೆಗಳಲ್ಲಿ ಸ್ಟೆಮಿ ಪರೀಕ್ಷೆ ಲಭ್ಯವಿದೆ.ರಾಮನಗರದ ಜಿಲ್ಲಾಸ್ಪತ್ರೆ, ಮಾಗಡಿ ಮತ್ತು ಕನಕಪುರ ತಾಲೂಕು ಆಸ್ಪತ್ರೆಗಳಲ್ಲಿ ಇದರ ವ್ಯವಸ್ಥೆ ಇದೆ. ಹೃದಯಾಘಾತ ಅಥವಾ ಹೃದಯಾಘಾತ ಲಕ್ಷಣಗಳು ಕಂಡು ಬಂದವರನ್ನು ಚಿಕಿತ್ಸೆಗೆ ಒಳಪಡಿಸಿ ಇಸಿಜಿ ಮಾಡುವಾಗಲೇ ಇದರ ಮಾಹಿತಿ ಬೆಂಗಳೂರು ಜಯದೇವ ಹೃದ್ರೋಗ ಸಂಸ್ಥೆಗೆ ರವಾನೆ ಆಗುತ್ತದೆ. ಅಗತ್ಯ ಚಿಕಿತ್ಸೆಯ ಸೂಚನೆಯೂ ಸಹ ದೊರೆಯುತ್ತದೆ. ತುರ್ತು ಚಿಕಿತ್ಸೆ ನೀಡಿದ ನಂತರ ಹೆಚ್ಚಿನ ಚಿಕಿತ್ಸೆಗೆ ಕಳುಹಿಸಿಕೊಡಲಾಗುತ್ತದೆ.
ಕಳೆದ ಎರಡು ವರ್ಷಗಳಿಂದ ಮಾಗಡಿ ತಾಲೂಕು ಆಸ್ಪತ್ರೆಯಲ್ಲಿ 368, ಕನಕಪುರ ತಾಲೂಕು ಆಸ್ಪತ್ರೆಯಲ್ಲಿ 342 ಮಂದಿ ಹಾಗೂ ರಾಮನಗರ ಜಿಲ್ಲಾಸ್ಪತ್ರೆಯಲ್ಲಿ 411 ಮಂದಿ ಸೇರಿ ಒಟ್ಟು 1121 ಜನರಿಗೆ ಸ್ಟೆಮಿ ವ್ಯವಸ್ಥೆಯಡಿ ಚಿಕಿತ್ಸೆ ಲಭ್ಯವಾಗಿದೆ. ಹೃದಯಾಘಾತಕ್ಕೊಳಗಾದ ಅನೇಕರು ಇದರ ಸಹಾಯದಿಂದ ಸಾವಿನ ದವಡೆಯಿಂದ ತಪ್ಪಿಸಿಕೊಂಡಿದ್ದಾರೆ. ಇದರ ಜತೆಗೆ ಜಿಲ್ಲೆಯಲ್ಲಿ ಕಳೆದ ಎರಡು ವರ್ಷಗಳಿಂದ ಒಟ್ಟು 26,741 ಮಂದಿಗೆ ಹೃದಯ ರೋಗ ಸಂಬಂಧ ಇಸಿಜಿ ಮಾಡಲಾಗಿದೆ. ಆದರೆ, ಕಳೆದ ಹಲವಾರು ವರ್ಷಗಳಿಂದಲೂ ಆಸ್ಪತ್ರೆಗೆ ಚಿಕಿತ್ಸೆಗೆ ಬಂದು ಹೃದಯಾಘಾತದಿಂದ ಮೃತಪಟ್ಟವರ ಮಾಹಿತಿ ಹೊರತುಪಡಿಸಿ, ಇತರೆಡೆಗಳಲ್ಲಿ ಮೃತಪಟ್ಟವರ ಮಾಹಿತಿ ಆರೋಗ್ಯ ಇಲಾಖೆ ಬಳಿ ಇಲ್ಲ.
ಜಿಲ್ಲೆಯಲ್ಲಿ ಕಳೆದ 6 ತಿಂಗಳಿಂದ 20 ಮಂದಿ ಹೃದಯಾಘಾತಕ್ಕೆ ಬಲಿಯಾಗಿದ್ದಾರೆ ಎನ್ನುವ ಮಾಹಿತಿಯಷ್ಟೇ ಆರೋಗ್ಯ ಇಲಾಖೆ ಬಳಿ ಇದೆ. ಆದರೆ, ಹೆಚ್ಚಿನ ಹೃದಯಾಘಾತ ಪ್ರಕರಣಗಳು ಆಸ್ಪತ್ರೆ ಬಾಗಿಲಿಗೆ ಬರುವುದೇ ಇಲ್ಲ. ಹೆಚ್ಚಿನ ಪ್ರಕರಣಗಳಲ್ಲಿ ಕುಟುಂಬಸ್ಥರು ಆರೋಗ್ಯ ಇಲಾಖೆಗೆ ಈ ಮಾಹಿತಿ ನೀಡುವುದೂ ಇಲ್ಲ. ಇಂತಹ ಪ್ರಕರಣಗಳು ಮರಣ ದಾಖಲಾತಿಗೆ ಸೇರುವುದೇ ಇಲ್ಲ. ಇಂತಹವುಗಳನ್ನು ಪತ್ತೆ ಹಚ್ಚಬೇಕಿದೆ. ಇಲ್ಲವಾದರೆ ಬಹಳಷ್ಟು ಸಾವಿಗೆ ನಿಖರವಾದ ಕಾರಣಗಳೇ ತಿಳಿಯದೆ ಮುಚ್ಚಿ ಹೋಗುತ್ತವೆ. ಅಷ್ಟೇ ಅಲ್ಲದೆ, ಕೆಲ ಆತ್ಮಹತ್ಯೆ ಪ್ರಕರಣಗಳ ಬಗ್ಗೆಯೂ ಪೊಲೀಸ್ ಇಲಾಖೆಗಾಗಲಿ, ಆರೋಗ್ಯ ಇಲಾಖೆಗಾಗಲಿ ತಿಳಿದಿರುವುದೇ ಇಲ್ಲ. ಈ ನಿಟ್ಟಿನಲ್ಲಿ ಆರೋಗ್ಯ ಇಲಾಖೆ ಮಾಹಿತಿ ಸಂಗ್ರಹಕ್ಕೆ ಹೆಚ್ಚಿನ ಒತ್ತು ನೀಡುವ ಅಗತ್ಯವಿದೆ.
ಹೃದಯಾಘಾತ ತಪ್ಪಿಸುವಲ್ಲಿ ಸ್ಟೆಮಿ ಪರೀಕ್ಷೆ ಉತ್ತಮವಾಗಿದ್ದು, ಈಗಾಗಲೇ ಮೊದಲ ಹಂತದಲ್ಲಿ ಜಿಲ್ಲಾ ಸರ್ಕಾರಿ ಆಸ್ಪತ್ರೆ, ಕನಕಪುರ ಹಾಗೂ ಮಾಗಡಿ ತಾಲೂಕು ಸಾರ್ವಜನಿಕ ಆಸ್ಪತ್ರೆಗಳಿಗೆ ಮಂಜೂರಾಗಿ ಕಾರ್ಯನಿರ್ವಹಿಸುತ್ತಿವೆ. ಉಳಿದಂತೆ ಚನ್ನಪಟ್ಟಣ ಹಾಗೂ ಹಾರೋಹಳ್ಳಿ ತಾಲೂಕು ಆಸ್ಪತ್ರೆಗಳಿಗೂ ಸ್ಟೆಮಿ ವ್ಯವಸ್ಥೆ ಮಂಜೂರಿಗೆ ಮನವಿ ಮಾಡಲಾಗಿದೆ. ಡಾ.ಕಿರಣ್‌ಶಂಕರ್ , ಜಿಲ್ಲಾ ಸರ್ವೇಕ್ಷಣಾ ಅಧಿಕಾರಿಗಳು, ಬೆಂಗಳೂರು ದಕ್ಷಿಣ===ಆಸ್ಪತ್ರೆಗೆ ಬಂದ ರೋಗಿಗಳು ಮೃತಪಟ್ಟಾಗ ಸಾವಿನ ಕಾರಣವನ್ನು ನಮೂದಿಸಲಾಗುತ್ತದೆ. ಆದರೆ ಆಸ್ಪತ್ರೆಗೆ ಬರದೇ ಹೃದಯಾಘಾತ ಸೇರಿದಂತೆ ಇತರ ಕಾರಣಗಳಿಗೆ ಮೃತಪಟ್ಟವರ ಮಾಹಿತಿ ಲಭ್ಯವಾಗುತ್ತಿಲ್ಲ. ಈ ಬಗ್ಗೆ ಮಾಹಿತಿ ಸಂಗ್ರಹಿಸಲು ಸಾಧ್ಯವಿರುವ ಕ್ರಮವನ್ನು ಕೈಗೊಳ್ಳಲಾಗುವುದು.ಡಾ.ಬಿ.ಎಸ್.ನಿರಂಜನ್, ಜಿಲ್ಲಾ ಆರೋಗ್ಯಾಧಿಕಾರಿ, ಬೆಂಗಳೂರು ದಕ್ಷಿಣ ಜಿಲ್ಲೆ