ರಾಯಚೂರು ವಾಯು ಮಾಲಿನ್ಯ, ತೈಲ ಬೆಲೆ ಏರಿಕೆ ಮುಂತಾದ ಕಾರಣಗಳಿಂದ ಹೈರಾಣಾದವರಿಗೆ ಎಲೆಕ್ಟ್ರಿಕ್ ವಾಹನಗಳು ಇದೀಗ ಪರ್ಯಾಯವಾಗಿ ಬಂದಿವೆ. ಕೆಲ ವರ್ಷಗಳ ಹಿಂದೆ ಬ್ಯಾಟರಿ ಚಾಲಿತ ವಾಹನಗಳೆಂದರೆ ಜನ ಮೂಗು ಮುರಿಯುತ್ತಿದ್ದರು. ಆದರೀಗ ನಗರ ಸೇರಿದಂತೆ ಜಿಲ್ಲಾಧ್ಯಂತ ಜನರಿಗೆ ಇ-ವಾಹನಗಳ ಮೇಲೆ ಹೆಚ್ಚಿನ ಪ್ರಿತಿ ಕಂಡು ಬರುತ್ತಿದೆ.
ದೇಶದಲ್ಲಿ ಎಲೆಕ್ಟ್ರಿಕ್ ವಾಹನಗಳು 2010 ರಲ್ಲಿ ಜಾರಿಗೆ ಬಂದಿದ್ದು, ಆದರೆ ಜಿಲ್ಲೆಯಲ್ಲಿ ಕಳೆದ ಮೂರು ವರ್ಷದಲ್ಲಿ ಎಲೆಕ್ಟ್ರಿಕ್ ವಾಹನಗಳು ಬಳಕೆ ಮಾಡಲಾಗುತ್ತಿದ್ದು. ಹೆಚ್ಚೆಚ್ಚು ಜನರು ಇ-ವಾಹನಗಳನ್ನು ಇಷ್ಟಪಡುತ್ತಿದ್ದು, ಕಾರುಗಳಿಗೆ ಹೋಲಿಸಿದರೆ ದ್ವಿಚಕ್ರ ವಾಹನಗಳಿಗೆ ಬೇಡಿಕೆ ಹೆಚ್ಚಾಗಿದೆ.
ಮುಂಬಯಿ, ಬೆಂಗಳೂರು, ಚೆನ್ನೆ ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ವಾಹನಗಳಿಂದಾಗಿ ವಾಯು ಮಾಲಿನ್ಯ ವಿಪರೀತವಾಗಿದ್ದು, ಹೊಸದಿಲ್ಲಿಯಲ್ಲಿ ಜನರು ಉಸಿರಾಡಲು ಕೂಡ ಕಷ್ಟಪಡುವಂತಹ ಸ್ಥಿತಿ ನಿರ್ಮಾಣವಾಗಿದೆ. ಜತೆಗೆ ವಿಪರೀತವಾಗಿ ತೈಲ ಬೆಲೆ ಏರುತ್ತಿದ್ದು, ವಾಹನ ಮಾಲೀಕರು ಕಂಗಾಲಾಗಿದ್ದಾರೆ. ಇಂತಹ ಸ್ಥಿತಿಯಲ್ಲಿ ವಾಯು ಮಾಲಿನ್ಯವಿಲ್ಲದ ’ಪರಿಸರ ಸ್ನೇಹಿ’ ಎಲೆಕ್ಟ್ರಿಕಲ್ ವಾಹನಗಳು ಇದೀಗ ಹೆಚ್ಚು ಜನರನ್ನು ಆಕರ್ಷಿಸುತ್ತಿವೆ.
ಹೆಚ್ಚಿನ ಶೋರೂಂಗಳು
ಜಿಲ್ಲೆಯಲ್ಲಿ ಕಳೆದ ಮೂರು ವರ್ಷದಿಂದ ಬಿಸಿಲುನಾಡು ರಾಯಚೂರಿನಲ್ಲಿ ಎಲೆಕ್ಟ್ರಿಕ್ ಶೋರೂಂಗಳ ಸಂಖ್ಯೆ ಕೂಡ ಹೆಚ್ಚಾಗಿದೆ. ನಾನಾ ಕಂಪನಿಗಳ ಎಲೆಕ್ಟ್ರಿಕ್ ವಾಹನಗಳು ಮಾರುಕಟ್ಟೆಗೆ ದಾಂಗುಡಿ ಇಟ್ಟಿವೆ. ಕಾಲೇಜು ಯುವಕ,ಯುವತಿಯರಿಂದ ಹಿಡಿದು ಮಧ್ಯ ವಯಸ್ಕರೂ ಎಲೆಕ್ಟ್ರಿಕ್ ವಾಹನಗಳತ್ತ ಹೆಚ್ಚು ಆಕರ್ಷಿತರಾಗುತ್ತಿದ್ದಾರೆ. ಆನ್‌ಲೈನ್ ಮೂಲಕ ಆರ್ಡರ್ ಮಾಡುವ ಗ್ರಾಹಕರಿಗೆ ವಸ್ತುಗಳನ್ನು ತಲುಪಿಸುವ ಡೆಲಿವರಿ ಬಾಯ್‌ಗಳಿಗೂ ಬ್ಯಾಟರಿ ಚಾಲಿತ ವಾಹನಗಳು ವರದಾನವಾಗಿವೆ. ಎಲೆಕ್ಟ್ರಿಕ್ ವಾಹನಗಳ ನಿರ್ವಹಣೆ ವೆಚ್ಚವೂ ಕಡಿಮೆ ಜತೆಗೆ ಗೃಹಜ್ಯೋತಿಯ ಕಾರಣದಿಂದಾಗಿ ಮನೆಯಲ್ಲೆ ವಾಹನಗಳ ಚಾರ್ಜ್‌ಮಾಡಿದಾಗ, ಬಿಲ್ ಕೂಡಾ ಉಚಿತವಾಗಿಯೇ ಬರುವುದರಿಂದ ಎಲ್ಲರಿಗೂ ಇವಿ ಅಚ್ಚುಮೆಚ್ಚಿನ ವಾಹನವಾಗಿದೆ.
ಜಿಲ್ಲೆಯಲ್ಲಿ ಎಷ್ಟು ಎಲೆಕ್ಟ್ರಿಕ್ ವಾಹನಗಳು
2010 ರಲ್ಲಿ ದೇಶದ ಎಲ್ಲಾ ರಾಜ್ಯ ಹಾಗೂ ಜಿಲ್ಲಾ ಕೇಂದ್ರಗಳಲ್ಲಿ ಎಲೆಕ್ಟ್ರಿಕ್ ವಾಹನಗಳು ಶೋರೂಂಗಳು ಪ್ರಾರಂಭವಾದವು ಆದರೆ ಏನಾದರು ಆಪಾಗಳು ಸಂಭವಿಸುತ್ತವೆ ಎಂದು ಜನರು ಹಿಂದೇಟು ಹಾಕುತ್ತಿದ್ದರು, ಆದರೆ ಈ ವಾಹನಗಳಿಂದ ಯಾವುದೇ ವಾಯು ಮಾಲಿನ್ಯ ಸಂಭವಿಸುವುದ್ದಿಲ್ಲವೆಂದು ಮಾಹಿತಿ ತಿಳಿದ ಮೇಲೆ ಜಿಲ್ಲೆಯಲ್ಲಿ 2010 ರಿಂದ 25 ರ ಜುಲೈವರಗೆ ಖಾಸಗಿ ಹಾಗೂ ಗೂಡ್ಸ್ ಸೇರಿ ಒಟ್ಟು 3327 ವಾಹನಗಳು ಖರೀದಿಯಾಗಿವೆ. ಈ ಪೈಕಿ ಗೂಡ್ಸ್ ವಾಹನಗಳಲ್ಲಿ ಇ-ರಿಕ್ಷಾ 5, ಗೂಡ್ಸ್ ರಿಕ್ಷಾ 6, ಗೂಡ್ಸ್ ಕ್ಯಾರಿರ್ 6, ಮೂರು ಚಕ್ರದ ಗೂಡ್ಸ್ 32, ಮೂರು ಚಕ್ರದ ಪ್ಯಾಸೇಜರ್ ವಾಹನ 52 ವಾಹನಗಳು ನೋದಣಿಯಾಗಿದ್ದು, ಆದೇ ರೀತಿ ಖಾಸಗಿ ವಾಹನಗಳ ಪೈಕಿ ದ್ವಿ ಚಕ್ರವಾಹನಗಳು 3086, ಸ್ಕೂಟಿ 35, ಕಾರ್ 87, ಯಾಂತ್ರಿಕೃತ ಸೈಕಲ್ 18 ವಾಹನಗಳು ನೋಂದಣಿಯಾಗಿವೆ.
ದ್ವೀಚಕ್ರ ವಾಹನಗಳಿಗೆ ಹೆಚ್ಚಿದ ಬೇಡಿಕೆ
ಶೂನ್ಯ ತೆರಿಗೆ, ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯಾಗುತ್ತಿರುವುದು, ಕಡಿಮೆ ನಿರ್ವಹಣೆ ವೆಚ್ಚ ಪರಿಸರ ರಕ್ಷಣೆ ದೃಷ್ಟಿಯಿಂದ ಇ-ವಾಹನಗಳಿಗೆ ಸರ್ಕಾರ ಉತ್ತೇಜನ ನೀಡುತ್ತಿದೆ. ಇದರೊಂದಿಗೆ ಜನ ಜಾಗೃತಿ, ಗೃಹಜ್ಯೋತಿ ಯೋಜನೆ ಜಾರಿ ಮುಂತಾದ ಕಾರಣಗಳಿಂದ ಜಿಲ್ಲೆಯಲ್ಲಿ ಎಲೆಕ್ಟ್ರಿಕ್ ವಾಹನ ಖರೀದಿ ಹೆಚ್ಚಾಗಿದೆ. ಅದರಲ್ಲೂ ವಿದ್ಯುತ್ ಚಾಲಿತ ದ್ವಿಚಕ್ರ ವಾಹನಗಳಿಗೆ ಹೆಚ್ಚಿನ ಬೇಡಿಕೆ ಉಂಟಾಗಿದ್ದು, ಕಳೆದ 15 ವರ್ಷದ ಅವಧಿಯಲ್ಲಿ ಪ್ರಾದೇಶಿಕ ಸಾರಿಗೆ ಇಲಾಖೆ ಮಾಹಿತಿ ಪ್ರಕಾರ 3086 ದ್ವಿಚಕ್ರ ವಾಹನಗಳು ಖರೀದಿಯಾಗಿದೆ.
ಜಿಲ್ಲೆಯಲ್ಲಿ ಇತ್ತಿಚ್ಚಿನ ದಿನಗಳಲ್ಲಿ ಎಲೆಕ್ಟ್ರಿಕ್ ವಾಹನ ನೋಂದಣಿ ಹೆಚ್ಚಳವಾಗುತ್ತಿದೆ. ಮಾಲಿನ್ಯವಿಲ್ಲದ ’ಪರಿಸರ ಸ್ನೇಹಿ’ ವಾಹನಗಳಗಿದ್ದರಿಂದ ಯಾವುದೇ ಟ್ಯಾಕ್ಸ್ ಇಲ್ಲದೆ ಇರುವುದರಿಂದ ಎಲೆಕ್ಟ್ರಿಕ್ ವಾಹನ ನೋಂದಣಿ ಹೆಚ್ಚಳವಾಗಿದ್ದು ಕಳೆದ 15 ವರ್ಷದ ಹಿಂದೆ ಎಲೆಕ್ಟ್ರಿಕ್ ವಾಹನ ಮಾರುಕಟ್ಟೆಗೆ ಬಂದಿವೆ. ಆದರೆ ಕಳೆದ ಮೂರು ವರ್ಷದಿಂದ ಖರೀದಿ ಹೆಚ್ಚಳವಾಗಿವೆ. ಕಳೆದ 2010 ರಿಂದ ಇಲ್ಲಿಯ ವರೆಗೆ ಒಟ್ಟು 3327 ವಾಹನಗಳು ಇಲಾಖೆಯಲ್ಲಿ ನೋಂದಣಿಯಾಗಿವೆ
ನಾಗರಾಜ ನಾಯ್ಕ ಆರ್‌ಟಿಓ ರಾಯಚೂರು
ಜಿಲ್ಲೆಯಲ್ಲಿ ಕಳೆದ 2 ರಿಂದ 3 ವರ್ಷದಲ್ಲಿ ಎಲೆಕ್ಟ್ರಿಕ್ ವಾಹನಗಳಿಗೆ ಬೇಡಿಕೆಗಳು ಹೆಚ್ಚಳವಾಗಿವೆ. ಸಾಮಾನ್ಯ ದಿನಗಳಲ್ಲಿ ತಿಂಗಳಿಗೆ 60 ವಾಹನಗಳು ಮಾರಾಟ ಮಾಡಿದರೆ, ಹಬ್ಬದ ಸಂದರ್ಭದಲ್ಲಿ 100 ಕ್ಕೂ ಅಧಿಕ ವಾಹನಗಳು ಮಾರಾಟವಾಗುತ್ತಿವೆ. ರಮೇಶ ಬಾಲಜಿ ಶ್ರೀ ಧನಜಯ ಮೋಟಾರ್ ಸೇಲ್ಸ್ ಪ್ರೈ. ಲೀ. ರಾಯಚೂರು